ಅಂಚೆ ನೌಕರರಿಂದ ಅನಿರ್ಧಿಷ್ಟಾವಧಿ ಮುಷ್ಕರ

ಚಳ್ಳಕೆರೆ

     ಕಳೆದ ಹಲವಾರು ದಶಕಗಳಿಂದ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಹುದ್ದೆಗಳ ಎಲ್ಲಾ ಜಿಡಿಎಸ್ ಅಂಚೆ ನೌಕರರಿಗೆ ಕಮಲೇಶ್‍ಚಂದ್ರರ 7ನೇ ವೇತನ ಆಯೋಗದ ವರದಿಯನ್ನು ಯಥಾವತ್ ಜಾರಿ ಗೊಳಿಸಬೇಕು ಎಂದು ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದು, ಅಧಿಕಾರಿ ವರ್ಗ ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಮುಷ್ಕರವನ್ನು ಅನಿರ್ಧಿಷ್ಟಾವಧಿಗೆ ವಿಸ್ತರಿಸಲಾಗಿದೆ ಎಂದು ಬ್ರಾಂಚ್ ಪೋಸ್ಟ್ ಮಾಸ್ಟರ್, ವಿಭಾಗಿಯ ಕಾರ್ಯದರ್ಶಿ ಮೈಲನಹಳ್ಳಿ ನಾಗರಾಜು ತಿಳಿಸಿದ್ಧಾರೆ.

       ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ, ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘ ನೇತೃತ್ವದಲ್ಲಿ ತಾಲ್ಲೂಕಿನ 90 ಅಂಚೆ ಕಚೇರಿಗಳ 110 ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದು, ಮಂಗಳವಾರ ಇಲ್ಲಿನ ಪ್ರಧಾನ ಅಂಚೆ ಕಚೇರಿ ಮುಂದೆ ಮುಷ್ಕರ ನಡೆಸಿದ್ದು, ನಗರದ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಸಹ ಮುಷ್ಕರಕ್ಕೆ ಬೆಂಬಲ ನೀಡಿರುತ್ತಾರೆ. ಮುಷ್ಕರ ಮುಂದುವರೆಯಲಿದ್ದು, ಬೇಡಿಕೆ ಈಡೇರಿಸುವ ತನಕ ಯಾವುದೇ ಕಾರಣಕ್ಕೂ ಮುಷ್ಕರವನ್ನು ಹಿಂಪಡೆಯುವುದಿಲ್ಲವೆಂದು ನಾಗರಾಜು ತಿಳಿಸಿದ್ಧಾರೆ.

         ಈ ಬಗ್ಗೆ ಮಾಹಿತಿ ನೀಡಿದ ಸಲಹೆಗಾರ ಕೆ.ಬಿ.ತಿಮ್ಮಾರೆಡ್ಡಿ, ಕಳೆದ ಡಿ.18ರಿಂದ ಮುಷ್ಕರವನ್ನು ಪ್ರಾರಂಭಿಸಿದ್ದು, ಈಗಾಗಲೇ ಹಲವು ಬಾರಿ ವಿನಂತಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಕೇವಲ ಕೆಲವೊಂದು ಬೇಡಿಕೆಗಳನ್ನು ಈಡೇರಿಸಲು ಮಾತ್ರ ಒಪ್ಪಿಗೆ ನೀಡಿದ್ದು, ಬಹುತೇಕ ಬೇಡಿಕೆಗಳ ಈಡೇರಿಕೆಗೆ ನಿರಾಕರಿಸಿದ್ದಾರೆ.

         ಕಮಲೇಶ್‍ಚಂದ್ರ ಆಯೋಗದ ವರದಿಯನ್ನು 1 ಜನವರಿ 2016ರಿಂದಲೇ ಜಾರಿಗೊಳಿಸಬೇಕು, ಗ್ರಾಚಿಟಿಯನ್ನು 5 ಲಕ್ಷಕ್ಕೆ ವಿಸ್ತರಿಸಬೇಕು, ವಾರ್ಷಿಕ 30 ದಿನದ ರಜೆಯನ್ನು ಕೊಡಬೇಕು, ಹಂತ ಹಂತವಾಗಿ ವೇತನ ಹೆಚ್ಚಿಸಬೇಕು, ಗ್ರಾಮೀಣ ಅಂಚೆ ನೌಕರರ ಖಾಯಂಗೊಳಿಸಬೇಕು, ಕೆಲಸದ ಅವಧಿಯನ್ನು 8 ಗಂಟೆಗೆ ನಿಯಂತ್ರಿಸಬೇಕು, ಹಳೇ ಪದ್ದತಿಯಂತೆ ಪಿಂಚಣಿ ವ್ಯವಸ್ಥೆ ಮಾಡಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುತ್ತಿದೆ.

         ಪ್ರತಿಭಟನೆಯಲ್ಲಿ ಪೋಸ್ಟ್ ಮಾಸ್ಟರ್‍ಗಳಾದ ರಾಧಕೃಷ್ಣ, ಭದ್ರಿನಾಥ, ರಾಮಚಂದ್ರಪ್ಪ, ಶ್ರೀರಾಮ, ತಿಪ್ಪೇಸ್ವಾಮಿ, ಇಲಾಖೆ ನೌಕರರಾದ ಚೇತನ್, ಅಂಚೆ ಪೇದೆ ಶಿವಮ್ಮ, ಅಂಚೆ ಮೇಲ್ವಿಚಾರಕರಾದ ವೀರಭದ್ರಪ್ಪ, ತಿಪ್ಪೇಸ್ವಾಮಿ, ರಾಘವೇಂದ್ರ, ನಂದಿನಿ, ಚೇತನ್, ಜಯಲಕ್ಷ್ಮಿ, ಸರಸ್ವತಿ, ಶ್ರುತಿ, ಪಂಪಾಪತಿ, ಸೌಮ್ಯ, ಭುವನೇಶ್ವರ್, ಚಿಕ್ಕಣ್ಣ, ಚಂದ್ರಶೇಖರ್, ನವೀನ್, ಬೋರಯ್ಯ ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap