ರಾಸಾಯನಿಕ ಬಳಸಿದರೆ ಮನುಷ್ಯ ಕುಲವೇ ನಾಶ

0
19

ದಾವಣಗೆರೆ:

       ಕೃಷಿಯಲ್ಲಿ ರಾಸಾಯನಿಕ ಬಳಕೆ ಮುಂದುವರೆದರೆ, ಮನುಷ್ಯನ ದೇಹಕ್ಕೆ ರಾಸಾಯನಿಕ ಅಂಶಗಳು ಸೇರಿ, ಗಂಡು-ಹೆಣ್ಣು ಸಂತಾನದ ಫಲವತ್ತತೆ ಕಳೆದುಕೊಂಡು ಇಡೀ ಮನುಷ್ಯ ಕುಲವೇ ಸರ್ವ ನಾಶವಾಗಲಿದೆ ಎಂದು ಬೆಂಗಳೂರಿನ ಜಲ ಸಾಕ್ಷರತಾ ಫೌಂಡೇಷನ್ ಅಧ್ಯಕ್ಷ ಅಯ್ಯಪ್ಪ ಮಸಗಿ ಆತಂಕ ವ್ಯಕ್ತಪಡಿಸಿದರು.

       ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರಾಷ್ಟ್ರೀಯ ಕೆಮಿಕಲ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ ಹಾಗೂ ಕೃಷಿಕ ಸಮಾಜದ ಸಹಯೋಗದಲ್ಲಿ ಕೃಷಿ ತಂತ್ರಜ್ಞಾನ ಮಾಹಿತಿ ಸಪ್ತಾಹದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆಯ ಪಾತ್ರ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿ ಮಾತನಾಡಿದರು.

        ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆ ನಾಶಕ ಬಳಕೆಗೆ ಶಿಫಾರಸ್ಸು ಮಾಡುವ ಮೂಲಕ ಕೃಷಿ ತಜ್ಞರೇ ರೈತರ ಶತೃಗಖಾಗುವ ಮೂಲಕ ರೈತರ ದಾರಿ ತಪ್ಪಿಸುತ್ತಿದ್ದಾರೆ. ಎಲ್ಲವನ್ನೂ ತಿಳಿದವರೇ ರೈತರಲ್ಲಿ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ. ರಾಸಾಯನಿಕ ಬಳಕೆ ಇದೇ ರೀತಿ ಮುಂದುವರೆದರೆ, ಸ್ತ್ರೀ-ಪುರುಷರು ಸಂತಾನ ಫಲವತ್ತತೆ ಕಳೆದುಕೊಂಡು, ಇಡೀ ಮನುಷ್ಯ ಕುಲವೇ ನಾಶವಾಗುವ ಅಪಾಯವಿದೆ ಎಂದರು.

         ದೇಶದಲ್ಲಿ ಆಹಾರ ಸ್ವಾವಲಂಬನೆ ಸಾಧಿಸುವ ಸಲುವಾಗಿ 1962ರ ನಂತರದಲ್ಲಿ ರಾಸಾಯನಿಕಗಳನ್ನು ಹೊಲಗಳಲ್ಲಿ ಬಳಸುವ ಪ್ರಕ್ರಿಯೆ ಆರಂಭವಾಯಿತು. ಹೀಗಾಗಿ, ಪ್ರಾರಂಭದಲ್ಲಿ ಉತ್ತಮವಾಗಿ ಇಳುವರಿ ಬಂದರೂ, ಕಾಲಕ್ರಮೇಣ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಾ ಬರುತ್ತಿದೆ. ಅಲ್ಲದೆ, ಕೃಷಿಯಲ್ಲಿ ಅಪಾರ ಪ್ರಮಾಣದ ರಾಸಾಯನಿಕ ಬಳಸುತ್ತಿರುವುದರಿಂದ ಈಗ 2 ಕೆಜಿಯಷ್ಟು ವಿಷ ಪ್ರತಿ ವರ್ಷ ನಮ್ಮ ದೇಹ ಸೇರುತ್ತಿದೆ. ತಾಯಿ ಹಾಲಲ್ಲೂ ಹಾನಿಕಾರಕ ಅಂಶ ಪತ್ತೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

        ಗಿಡಗಳು ಯಾವುದೇ ಪೋಷಕಾಂಶಗಳನ್ನು ಪಡೆಯಲು ಮಣ್ಣಿನಲ್ಲಿರುವ ಕೋಟ್ಯಂತರ ಸೂಕ್ಷ್ಮಜೀವಿಗಳು ನೆರವಾಗುತ್ತವೆ. ಆದರೆ, ರಾಸಾಯನಿಕಗಳ ಮಿತಿ ಮೀರಿದ ಬಳಕೆಯಿಂದಾಗಿ ಸೂಕ್ಷ್ಮಜೀವಿಗಳಿಗೆ ಪೂರಕ ವಾತಾವರಣವಿಲ್ಲ. ಆದ್ದರಿಂದ ಅದೇ ರಾಸಾಯನಿಕಗಳು ನಮ್ಮ ದೇಹ ಸೇರುತ್ತಿದ್ದು, ವೈದ್ಯರು ಕಂಡುಹಿಡಿಯಲಾಗದ ಹೊಸ ಹೊಸ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ ಎಂದರು.

        ಶಾಸಕ ಎಸ್.ಎ.ರವೀಂದ್ರನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾಮೀಜಿಗಳು ಕುಡಿಯಲು ಬಿಡಲು ಹೇಳಿದ ನಂತರವೇ ಕುಡುಕರ ಸಂಖ್ಯೆ ಜಾಸ್ತಿಯಾಗಿರುವಂತಿದೆ. ಇದು ರಾಸಾಯನಿಕ ಕೃಷಿ ವಿಚಾರದಲ್ಲೂ ಮರುಕಳಿಸಬಾರದು ಎಂದು ಹೇಳಿದರು.
ಅವಶ್ಯಕತೆಗಿಂತ ಹೆಚ್ಚು ರಾಸಾಯನಿಕ ಬಳಸಿ, ಭೂಮಿಯನ್ನು ಹಾಳು ಮಾಡಿಕೊಂಡಿದ್ದೇವೆ. ಹಿಂದೆ ಕೊಟ್ಟಿಗೆ ಗೊಬ್ಬರ, ತಿಪ್ಪೆ ಗೊಬ್ಬರ ಬಳಸುತ್ತಿದ್ದ ಸಂದರ್ಭದಲ್ಲಿ ಭೂಮಿ ಫಲವತ್ತಾಗಿದ್ದುದನ್ನು ಯಾರೂ ಮರೆಯುವಂತಿಲ್ಲ. ಆದ್ದರಿಂದ ಅರ್ಧ ಜಮೀನಿನಲ್ಲಾದರೂ ಪ್ರಾಯೋಗಿಕವಾಗಿ ರೈತರು ರಾಸಾಯನಿಕರಹಿತ ಕೃಷಿ ಪದ್ಧತಿಯಲ್ಲಿ ಬೆಳೆ, ಬೆಳೆಯಬೇಕೆಂದು ಸಲಹೆ ನೀಡಿದರು.

         ಪ್ರಾಸ್ತಾವಿಕವಾಗಿ ಮಾತನಾಡಿದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್.ದೇವರಾಜ, ನಿರಂತರವಾಗಿ ಕಾರ್ಯಕ್ರಮಗಳು ಜರುಗುವಂತೆ ಮೇಲ್ಛಾವಣಿ ಸಭಾಭವನಕ್ಕೆ ಅನುದಾನ ಒದಗಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬೇಸಾಯ ಶಾಸ್ತ್ರದ ವಿಷಯ ತಜ್ಞ ಬಿ.ಓ.ಮಲ್ಲಿಕಾರ್ಜುನ ನೇರ ಕೂರಿಗೆ ಬಿತ್ತನೆ ಭತ್ತದ ತಾಂತ್ರಿಕತೆಗಳು ಹಾಗೂ ಮಣ್ಣು ವಿಜ್ಞಾನ ತಜ್ಞ ಹೆಚ್.ಎಂ.ಸಣ್ಣಗೌಡ್ರು ಮಣ್ಣು ಆರೋಗ್ಯ ನಮ್ಮ ಆರೋಗ್ಯ ಕುರಿತು ಉಪನ್ಯಾಸ ನೀಡಿದರು.

        ಕಾರ್ಯಕ್ರಮದಲ್ಲಿ ಸಿರಿಗೆರೆಯ ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸದಸ್ಯ ಎಂ.ಕೆ.ರೇಣುಕಾರ್ಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ.ಟಿ.ಆರ್.ವೇದಮೂರ್ತಿ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಜಿ.ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here