ವಚನ ಮಾಧುರ್ಯ ಕಾರ್ಯಕ್ರಮ

0
10

ಹಾನಗಲ್ಲ :

       ಬೆಂಕಿಯ ಬದುಕಿನಿಂದ ಬಿಡಿಸಿ ಶಾಂತಿ ನೆಮ್ಮದಿಯ ಮಾಧುರ್ಯದ ಜೀವನ ನೀಡುವ ಶಕ್ತಿ ಶರಣರ ವಚನ ಸಾಹಿತ್ಯದಲ್ಲಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಬಸವರಾಜ ಸಾದರ ನುಡಿದರು.

       ಶನಿವಾರ ಹಾನಗಲ್ಲಿನ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ, ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ ವಚನ ಮಾಧುರ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರಿವು ಹಾಗೂ ಆತ್ಮಸಾಕ್ಷಿಯಿಂದ ಇಚ್ಛಾಶಕ್ತಿ ಹೊಂದಿ ಜೀವನ ನಡೆಸಬೇಕು.

        ಸಕಲ ಜೀವಾತ್ಮರಿಗೆ ಲೇಸು ಬಯಸುವವನೇ ಶರಣ. ಬದುಕನ್ನ ತೆರದ ಕಣ್ಣಿನಿಂದ ನೋಡಬೇಕು. ಬುದ್ಧಿ ಮನಸ್ಸು ಮಾತನಾಡಬೇಕು. ಪ್ರಾಮಾಣಿಕತೆ ಬದುಕಿನ ನಿಜವಾದ ಅರ್ಥವನ್ನು ನೀಡುತ್ತದೆ. ಭಾಷಣ ಹಾಗೂ ಭಜನೆಗಳು ನಾಲಿಗೆ-ಹೃದಯ-ಮೆದುಳಿಗೆ ಸಂಬಂಧವಿರಬೇಕು. ಬದುಕಿನ ವ್ಯಾಕರಣದ ಲಯ ತಪ್ಪಬಾರದು. ವಚನಗಳು ಇಡೀ ಮಾನವ ಜನಾಂಗದ ಪ್ರೀತಿ ಹಾಗೂ ಬದುಕಿನ ಸತ್ಯವನ್ನು ಹೇಳಿವೆ. ಬದುಕು ಜ್ಯೋತಿಯಂತೆ ಬೆಳಗಲು ವಚನ ಸಾಹಿತ್ಯ ಸಹಕಾರಿ. ಜಾತಿ-ಮತ-ಧರ್ಮಗಳನ್ನು ಮೀರಿ ವಚನಗಳು ನಮ್ಮ ಬುದ್ಧಿ ಮನಸ್ಸನ್ನು ಶುದ್ಧಗೊಳಿಸುತ್ತವೆ ಎಂದರು.

         ವಿದ್ಯಾರ್ಥಿಗಳು ಮಹಾತ್ಮಾ ಗಾಂಧಿಯಾದಿಯಾಗಿ ಶರಣರು ಮಹಾತ್ಮರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಬೇಕು. ಗುರು ಶಿಷ್ಯರ ಸಂಬಂಧ ಹಳಸಬಾರದು. ವಿದ್ಯಾರ್ಥಿಗಳಿಗೆ ಋಣಪ್ರಜ್ಞೆ ಬೇಕು. ನಮ್ಮೊಳಗೆ ಅರಿವು ಜಾಗ್ರತಗೊಳ್ಳಬೇಕು. ಹಿಂಸೆಯಿಂದ ಹೊರಬಂದು ಅಹಿಂಸೆಯನ್ನು ಒಳಗೊಂಡು ವಿನಯವುಳ್ಳವರಾಗಿ ಜೀವನ ಸಾರ್ಥಕಗೊಳಿಸಿಕೊಳ್ಳಲು ಪ್ರತಿಜ್ಞೆ ಮಾಡಿರಿ. ತಾಯಿ-ತಂದೆ-ಗುರುವನ್ನು ಎಂದಿಗೂ ಮರೆಯದಿರಿ ಎಂದರು.

         ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ.ಮಾರುತಿ ಶಿಡ್ಲಾಪೂರ, ವಿದ್ಯಾರ್ಥಿ ಜೀವನವನ್ನು ಹಸನು ಮಾಡುವ, ಬದುಕನ್ನು ಸುಂದರಗೊಳಿಸುವ ವಚನ ಸಾಹಿತ್ಯ, ಶೈಕ್ಷಣಿಕ ಹಂತದಲ್ಲೇ ಮೊಳಕೆಯಾಗಿ ಹಸಿರು ಹೂವಾಗಿ ಫಲ ನೀಡುವಂತಾಗಬೇಕು. ಮಾನವ ಹೃದಯವಂತಿಕೆಯಿಂದ ಬದುಕಲು ಎಲ್ಲ ಕಾಲಮಾನದಲ್ಲಿಯೂ ಮಾರ್ಗ ದರ್ಶನ ಮಾಡುವ ಶಕ್ತಿ ವಚನಕ್ಕಿದೆ. ಪ್ರಪಂಚದ ಅದ್ಭುತ ಸಾಹಿತ್ಯ ವಚನವಾಗಿದೆ ಎಂದರು.

         ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಚಂದ್ರಶೇಖರ ಮಾಳಗಿ, ಸಂಘಟನಾ ಕಾರ್ಯದರ್ಶಿ ಕೃಷ್ಣ ಜವಳಿ, ನ್ಯಾಯವಾದಿ ಮಾರುತಿ ಪೇಟಕರ, ಕಲಾವಿದ ರವಿ ಲಕ್ಷ್ಮೇಶ್ವರ, ವರದಿಗಾರ ಮಲ್ಲಿಕಾರ್ಜುನ ಸುಣಗಾರ, ಎಸ್.ಕೆ.ನಾಯನೇಗಲಿ, ಎಸ್.ಎಂ.ಜವಳಿ, ರೂಪಾ ಹಿರೇಮಠ, ಮೂಕಾಂಬಿಕಾ ನಾಯಕ, ವೀಣಾ ದೇವರಗುಡಿ, ರಾಜು ಮರಡಿ ವೇದಿಕೆಯಲ್ಲಿದ್ದರು. ಪವಿತ್ರಾ ಕರೆಪ್ಪನವರ ಪ್ರಾರ್ಥಿಸಿದರು. ಚಂದ್ರಶೇಖರ ಹಾವೇರಿ ಸ್ವಾತಿಸಿದರು. ಎಚ್.ಎಸ್.ಬಾರ್ಕಿ ಕಾರ್ಯಕ್ರಮ ನಿರೂಪಿಸಿದರು . ಎಸ್ . ಎಸ್ . ನಿಸ್ಸೀಮಗೌಡ್ರ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here