ವಾಸು ಯಾವ ದೊಡ್ಡ ಮನುಷ್ಯ

ದಾವಣಗೆರೆ:

       ಅಂಬಿಡೆಂಟ್ ಡೀಲ್ ಸತ್ಯಾಂಶ ಹೊರಬರಬೇಕಾದರೆ, ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕೆಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ

         ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಲೋಕಸಭಾ ಉಪಚುನಾವಣೆ ಫಲಿತಾಂಶ ಹೊರ ಬಿದ್ದ ಬಳಿಕ, ಸಚಿವ ಡಿ.ಕೆ.ಶಿವಕುಮಾರ್ ದೊಡ್ಡ ಬಾಂಬ್ ಸ್ಪೋಟ ಮಾಡುವುದಾಗಿ ಹೇಳಿದ್ದರು. ಅದರಂತೆ ಅಂಬಿಡೆಂಟ್ ಕಂಪನಿಯ ಹಗರಣದ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಹೆಸರನ್ನು ಅನಗತ್ಯವಾಗಿ ಥಳಕು ಹಾಕಿ, ಜೈಲಿಗೆ ಕಳುಹಿಸಿದ್ದಾರೆಂದು ಆರೋಪಿಸಿದರು.

ಕುರ್ಚಿಗಾಗಿ ರಕ್ಷಣೆ:

       ಸಮ್ಮಿಶ್ರ ಸರ್ಕಾರಕ್ಕೆ ತಾಕತ್ತಿದ್ದರೆ, ಅಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ಮುಂದೆ ಫರೀದ್ ಏನು ಹೇಳಿಕೆ ನೀಡಿದ್ದಾರೆಂಬುದನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ ಅವರು, ಈ ಕಂಪನಿಯಿಂದ ಜಿ.ಪರಮೇಶ್ವರ್ ಹಾಗೂ ರೋಷನ್ ಬೇಗ್ ಬಹುಕೋಟಿ ಲಂಚ ಪಡೆದಿದ್ದಾರೆ. ಈ ಸತ್ಯಾಂಶ ಹೊರ ಬರಬೇಕಾದರೆ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಆದರೆ, ಸಿಎಂ ಕುಮಾರಸ್ವಾಮಿ ಅಧಿಕಾರದ ಆಸೆಗಾಗಿ ಬಹುಕೋಟಿ ಲಂಚ ಪಡೆದ ಇವರಿಬ್ಬರನ್ನು ರಕ್ಷಣೆ ಮಾಡುತ್ತಿದ್ದಾರೆಂದು ಆಪಾದಿಸಿದರು.

ಟೇಕಾಫ್ ಆಗದ ಸರ್ಕಾರ:

         ಜೆಡಿಎಸ್-ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಸಹ ಇನ್ನೂ ಟೇಕಾಫ್ ಆಗಿಲ್ಲ. ಅಲ್ಲದೆ, ಯಾವ ಇಲಾಖೆಗೂ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಯಾವ ಅಭಿವೃದ್ಧಿ ಕಾಮಗಾರಿಗಳು ಸಹ ನಡೆಯುತ್ತಿಲ್ಲ. ಆದ್ದರಿಂದ ಸಮ್ಮಿಶ್ರ ಸರ್ಕಾರದ ಸಚಿವರು, ಶಾಸಕರೇ ಈ ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆಂದು ಹೇಳಿದರು.

ಶಾಸಕರಲ್ಲಿ ಭೀತಿ:

         ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳುವ ಉದ್ದೇಶದಿಂದಲೇ ಸಿಎಂ ಕುಮಾರಸ್ವಾಮಿ ಹಾಗೂ ಸ್ವಯಂ ಘೋಷಿತ ದೇವಮಾನವ ಡಿ.ಕೆ.ಶಿವಕುಮಾರ್ ದಿನಾ ಬೆಳಗಾದರೆ, ನಮ್ಮ ಶಾಸಕರಿಗೆ ಬಿಜೆಪಿಯವರು 20ರಿಂದ 30 ಕೋಟಿ ಆಫರ್ ಹಾಗೂ ಸಚಿವ ಸ್ಥಾನದ ಆಮಿಷ ತೋರಿಸಿ, ಆಪರೇಷನ್ ಕಮಲ ಮಾಡಲು ಮುಂದಾಗಿದೆ ಎಂಬುದಾಗಿ ಸುಳ್ಳು ಆರೋಪ ಮಾಡುವ ಮೂಲಕ, ಅವರ ಪಕ್ಷದ ಶಾಸಕರಲ್ಲಿ ಭೀತಿ ಉಂಟು ಮಾಡುವ ಮೂಲಕ, ಶಾಸಕರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆಂದು ಮಾರ್ಮಿಕವಾಗಿ ನುಡಿದರು.
ನಾವು 104 ಜನ ಶಾಸಕರಿದ್ದು, ನಮಗೆ ಆಪರೇಷನ್ ಕಮಲ ನಡೆಸುವ ಅವಶ್ಯಕತೆಯೇ ಇಲ್ಲ. ಪ್ರತಿಪಕ್ಷವಾಗಿ ವಿಧಾನಸೌಧದಲ್ಲಿ ಗೌರವದಿಂದ ಕುಳಿತು, ಸದನದ ಒಳಗೂ, ಹೊರಗೂ ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ಹಿಡಿಯುತ್ತಿದ್ದೇವೆ ಎಂದರು.

ಸಿಎಂ ಕಚೇರಿ ಎಡಿಟಿಂಗ್ ಕೆಂದ್ರ:

         ಬಿಜೆಪಿಯವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಆಫರ್ ಮಾಡಿರುವ ಬಗ್ಗೆ ನಮ್ಮ ಬಳಿ ಆಡಿಯೋ, ವಿಡಿಯೋ ಇವೆ ಎಂಬುದಾಗಿ ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದು, ಮುಖ್ಯಮಂತ್ರಿಗಳ ಕಚೇರಿ ಆಡಿಯೋ, ವಿಡಿಯೋ ಎಡಿಟಿಂಗ್ ಕೇಂದ್ರವಾಗಿ ಮಾರ್ಪಟ್ಟಿದೆ. ಆಡಿಯೋ, ವಿಡಿಯೋ ಎಡಿಟಿಂಗ್, ಮಾಟ-ಮಂತ್ರ ಮಾಡಿಸುವ ಕಲೆ ಕುಮಾರಸ್ವಾಮಿಯವರಿಗೆ ರಕ್ತಗತವಾಗಿ ಕರಗತವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಕ್ತಕ್ಕೆ ಜೆಡಿಎಸ್ ಪಣ:

        ರೈತ ವಿರೋಧಿ ಭ್ರಷ್ಟ ಸರ್ಕಾರ ಕೇವಲ ಮೂರ್ನಾಲು ಜಿಲ್ಲೆಗೆ ಸೀಮಿತವಾಗಿದೆ. ಎಲ್ಲಾ ಇಲಾಖೆಗಳ ಹಣವನ್ನು ಸಚಿವ ಹೆಚ್.ಡಿ.ರೇವಣ್ಣ ತಮ್ಮ ಇಲಾಖೆಗೆ ವರ್ಗಾಯಿಸಿಕೊಂಡಿದ್ದಾರೆ. ಅಲ್ಲೂ ಕೆಲಸ ನಡೆಯುತ್ತಿಲ್ಲ. ಕಮಿಷನ್ ಪಡೆಯುವ ಮೂಲಕ ಸರ್ಕಾರದ ಹಣವನ್ನು ಕಿಸೆಗೆ ಇಳಿಸಿಕೊಳ್ಳುತ್ತಿದ್ದಾರೆಂದು ಹೇಳಿದ ಅವರು, ಒಂದರ್ಥದಲ್ಲಿ ದೇವೇಗೌಡ ಮತ್ತು ಮಕ್ಕಳು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದ್ದಾರೆಂದು ಆಪಾದಿಸಿದರು.

       46 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿರುವುದಾಗಿ ಕುಮಾರಸ್ವಾಮಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಇದು ವರೆಗೂ ಯಾರೊಬ್ಬರಿಗೂ ಋಣಮುಕ್ತ ಪತ್ರ ನೀಡಿಲ್ಲ. ಕುಮಾರಸ್ವಾಮಿಯ ಸಾಲ ಮನ್ನಾ ಬರೀ ಮಾಧ್ಯಮ ಹಾಗೂ ಜಾಹೀರಾತಿಗೆ ಸೀಮಿತವಾಗಿದೆ ಎಂದರು ಟೀಕಿಸಿದರು.

       ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎನ್.ರಾಜಶೇಖರ್, ಬಿ.ರಮೇಶ ನಾಯ್ಕ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ.ಶ್ರೀನಿವಾಸ್, ಮುಖಂಡರಾದ ಸೋಗಿ ಶಾಂತಕುಮಾರ್, ಶಿವನಗೌಡ ಪಾಟೀಲ್‍ಮ ಟಿಂಕರ್ ಮಂಜಣ್ಣ, ರಾಜು ವೀರಣ್ಣ, ನರೇಶ್ ಚೌದರಿ, ಗುಮ್ಮನೂರು ಶ್ರೀನಿವಾಸ್, ಬಸವರಾಜ್ ಮತ್ತಿತರರು ಹಾಜರಿದ್ದರು.

       ಮರಳು ಹೋರಾಟಕ್ಕೆ ಸಂಬಂಧಿಸಿದಂತೆ ರೇಣುಕಾಚಾರ್ಯ ಬಾಯಿ, ಬಾಯಿ ಬಡಕೊಂಡರೂ ಜಗ್ಗುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್, ಯಾವ ಸೀಮೆ ದೊಡ್ಡ ಮನುಷ್ಯ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತೀಕ್ಷಣವಾಗಿ ಪ್ರತಿಕ್ರಯಿಸಿದ್ದಾರೆ.

        ರಾಜಕಾರಣ ನನಗೇನು ಹೊಸದಲ್ಲ, ನನಗೂ ರಾಜಕಾರಣ ಗೊತ್ತಿದೆ. ನನಗೆ ನನ್ನ ಕ್ಷೇತ್ರದ ಜನರ ಸಮಸ್ಯೆ ಮುಖ್ಯ. ಅದಕ್ಕಾಗಿ ಹೋರಾಡುತ್ತೇನೆ, ನನ್ನ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುವುದು ನನ್ನ ಕರ್ತವ್ಯವಾಗಿದೆ. ಸಚಿವ ಶ್ರೀನಿವಾಸ್ ಹೇಳಿಕೆಗೆ ಸಂಬಂಧಸಿದಂತೆ ನಾ ಏನನ್ನೂ ಮಾತಾಡೊಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap