ಶ್ರೀ ವೀರಭದ್ರೇಶ್ವರ ಸ್ವಾಮಿಯ ದೇವಾಲಯ ಪ್ರವೇಶೋತ್ಸವ

ಹೊನ್ನಾಳಿ:

      ಅಗೋಚರ ಶಕ್ತಿಯ ರೂಪವೇ ದೇವರು. ಆತ ಅನುಭವ ವೇದ್ಯ ಎಂದು ರಾಂಪುರ ಬೃಹನ್ಮಠದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಹೇಳಿದರು.

        ಮಂಗಳವಾರ ಗಂಜೀನಹಳ್ಳಿ ಗ್ರಾಮದಲ್ಲಿ ನೂತನವಾಗಿ ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಮದೇವರಾದ ಶ್ರೀ ವೀರಭದ್ರೇಶ್ವರ ಸ್ವಾಮಿಯ ದೇವಮಂದಿರದ ಪ್ರವೇಶೋತ್ಸವ, ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನೇರವೇರಿಸಿ ನಂತರ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

         ಶಿಲಾ ಮೂರ್ತಿಗಳು ಮೇಲ್ನೋಟಕ್ಕೆ ಜಡ ವಸ್ತುಗಳಂತೆ ಕಂಡರೂ ಅವುಗಳಲ್ಲಿ ಅಗೋಚರ, ಅವ್ಯಕ್ತ ಚೈತನ್ಯಗಳ ಮೂಲಕ ದೈವೀ ಶಕ್ತಿ ಅಡಗಿರುತ್ತದೆ. ನೋವು ಅಥವಾ ಸಂತೋಷಗಳನ್ನು ಅನುಭವಿಸಬಹುದೇ ಹೊರತು ಆವುಗಳನ್ನು ನೋಡಲಾಗುವುದಿಲ್ಲ, ಇದೇ ರೀತಿ ದೇವರ ಭಕ್ತಿ ಕೂಡ ಅನುಭವ ವೇದ್ಯ ಎಂದು ತಿಳಿಸಿದರು.

          ಅಪಾರ ಹಣ ಖರ್ಚು ಮಾಡಿ ದೇವಮಂದಿರಗಳನ್ನು ಕಟ್ಟಿದರೆ ಸಾಲದು. ಇದರ ಜೊತೆಗೆ ಸಮರ್ಪಕವಾಗಿ ಅವುಗಳ ನಿರ್ವಹಣೆ ಮಾಡಬೇಕು. ದೇವರ ಬಗ್ಗೆ ಭಯಯುಕ್ತ ಭಕ್ತಿಯನ್ನು ತೋರಬೇಕು. ಆಗ ಮಾತ್ರ ದೇವಾಲಯಗಳನ್ನು ಕಟ್ಟಿಸಿದ್ದಕ್ಕೆ ಸಾರ್ಥಕತೆ ಲಭಿಸುತ್ತದೆ ಎಂದು ಹೇಳಿದರು.

         ನಿವೃತ್ತ ಉಪನ್ಯಾಸಕ ಹಾಗೂ ಗ್ರಾಮದ ಹಿರಿಯರಾದ ಎಸ್.ಆರ್. ಬಸವರಾಜಪ್ಪ ಮಾತನಾಡಿ, ಗ್ರಾಮದ ಐತಿಹಾಸಿಕ ಹಿನ್ನೆಲೆ, ಶ್ರೀ ವೀರಭದ್ರೇಶ್ವರ ದೇವರ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು.

           ಜಿಪಂ ಸದಸ್ಯೆ ಉಮಾ ರಮೇಶ್, ಗ್ರಾಮದ ಮುಖಂಡರಾದ ರುದ್ರೇಶಪ್ಪ, ಮಲ್ಲೇಶಪ್ಪ, ದೇವಾಲಯದ ವಿನ್ಯಾಸಕಾರ ಇಂಜಿನಿಯರ್ ಜಿ. ರುದ್ರೇಶಪ್ಪ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಮುಖಂಡರಾದ ಬಿ. ಸಿದ್ದಪ್ಪ, ಟಿ. ಮಲ್ಲೇಶಪ್ಪ, ಶಿಕ್ಷಕ ಹಾಲೇಶಪ್ಪ ಇತರರು ಮಾತನಾಡಿದರು

           ಗ್ರಾಪಂ ಮಾಜಿ ಅಧ್ಯಕ್ಷ ಪಿ. ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಜಿ. ಹನುಮಂತಪ್ಪ, ಫಲವನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ಎ.ಕೆ. ಚಂದ್ರಮ್ಮ, ಸದಸ್ಯೆ ಎಂ. ರಜನಿ, ಟಿ. ಗಂಗಮ್ಮ ಇತರರು ಭಾಗವಹಿಸಿದ್ದರು. ಶಿಲ್ಪಿ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು .ಶಿವಮೊಗ್ಗದ ಖ್ಯಾತ ಗಾಯಕ ಹುಮಾಯೂನ್ ಹರ್ಲಾಪುರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಎಲ್ಲಾ ಭಕ್ತರಿಗೂ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap