ವೀರ್ ಜವಾನ್ ಅಮರ್ ರಹೇ…

ದಾವಣಗೆರೆ

       ಕಾಶ್ಮೀರದಲ್ಲಿ ಸಿಆರ್‍ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್‍ಗೆ ಸ್ಫೋಟಕ ತುಂಬಿದ ಜೀಪ್‍ವೊಂದನ್ನು ಡಿಕ್ಕಿ ಹೊಡೆಸಿದ ಪರಿಣಾಮ ಹುತಾತ್ಮವಾಗಿರುವ ಯೋಧರಿಗೆ ಜಿಲ್ಲಾ ಮಾಜಿ ಸೈನಿಕ ವಿವಿಧೋದ್ದೇಶ ಸಂಘ, ಜಿಲ್ಲಾ ಬಿಜೆಪಿ, ಹಿಂದು ಜಾಗರಣ ವೇದಿಕೆ, ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನಿಕರು ಶುಕ್ರವಾರ ಸಂಜೆ ಶ್ರದ್ಧಾಂಜಲಿ ಅರ್ಪಿಸಿದರು.

       ನಗರದ ಗಾಂಧಿವೃತ್ತದಿಂದ ಮೇಣದ ಬತ್ತಿ ಹೊತ್ತಿಸಿ, ವೀರ್ ಜವಾನ್ ಅಮರ ರಹೇ…, ಜೈಜವಾನ್.. ಜೈಕಿಸಾನ್.., ಪಾಕಿಸ್ಥಾನ ಮುರ್ದಾಬಾದ್…, ಭಾರತ ಮಾತಾ ಕೀ ಜೈ… ಎಂಬ ಘೋಷಣೆಗಳನ್ನು ಕೂಗುತ್ತಾ ಜಯದೇವ ವೃತ್ತಕ್ಕೆ ತೆರಳಿ ಅಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಕೆಲ ನಿಮಿಷಗಳ ಕಾಲ ಮೌನಾಚರಣೆ ಮಾಡಿ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

       ಅಲ್ಲದೇ ಜಯದೇವ ವೃತ್ತದಲ್ಲಿ ತಯಾರಿಸಿದ್ದ ಹುತಾತ್ಮ ಯೋಧರ ಸ್ಮಾರಕದ ಪ್ರತಿಕೃತಿಗೆ ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರುಗಳಾದ ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರಪ್ಪ, ಜಿಲ್ಲಾ ಮಾಜಿ ಸೈನಿಕ ವಿವಿಧೋದ್ದೇಶ ಸಂಘದ ಅಧ್ಯಕ್ಷ ಎಂ.ಎನ್.ಸತ್ಯಪ್ರಕಾಶ್ ಸೇರಿದಂತೆ ಹಲವರು ನಮನ ಸಲ್ಲಿಸಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ, ಪಾಕಿಸ್ಥಾನವು ಉಗ್ರ ಸಂಘಟನೆಗಳನ್ನು ಬಳಸಿಕೊಂಡು ವಾಮ ಮಾರ್ಗದ ಮೂಲಕ ದಾಳಿ ನಡೆಸಿ, ಸುಮಾರು 44ಕ್ಕೂ ಹೆಚ್ಚು ಯೋಧರನ್ನು ಬಲಿ ಪಡೆದಿರುವುದು ಅತ್ಯಂತ ನೀಚ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ದೇಶ ಕಾಯುವ ಯೋಧರು ವೀರ ಮರಣ ಅಪ್ಪಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಭಯೋತ್ಪಾದನಾ ದಾಳಿಯಲ್ಲಿ ಮಡಿದಿರುವ ಯೋಧರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ. ಈ ವೀರ ಮರಣ ಹೊಂದಿರುವ ಸೈನಿಕರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ, ಕೇಂದ್ರ ಸರ್ಕಾರವು ಈ ಕೃತ್ಯಕ್ಕೆ ಪ್ರತಿಯಾಗಿ ದಿಟ್ಟ ಕ್ರಮ ಕೈಗೊಳ್ಳುವ ಮೂಲಕ ದುಷ್ಟಶಕ್ತಿಗಳನ್ನು ಹತ್ತಿಕ್ಕಬೇಕೆಂದು ಆಗ್ರಹಿಸಿದರು.

       ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಮಾತನಾಡಿ, ಕಾಶ್ಮೀರದಲ್ಲಿ ಉಗ್ರರು ನಡೆಸಿರುವುದು ಒಂದು ಭೀಭತ್ಸ ಕೃತ್ಯವಾಗಿದ್ದು, ಇದು ಅತ್ಯಂತ ಖಂಡನೀಯವಾಗಿದೆ. ಭೂಲೋಕದ ಸ್ವರ್ಗ ಎಂಬುದಾಗಿಯೇ ಹೆಸರಾಗಿರುವ ಶ್ರೀನಗರವು ಭಯೋತ್ಪಾದಕರ ಹೇಯ ಕೃತ್ಯಗಳಿಂದ ನರಕವಾಗಿ ಮಾರ್ಪಟ್ಟಿದೆ. ಆದ್ದರಿಂದ ಕೇಂದ್ರ ಸರ್ಕಾರವು ಭಯೋತ್ಪಾದಕರನ್ನು ಬೇರು ಸಮೇತ ಕಿತ್ತು ಹಾಕಲು ದಿಟ್ಟ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.

       ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಉಗ್ರಗಾಮಿಗಳು ನಡೆಸಿರುವ ದುಕೃತ್ಯಕ್ಕೆ ಇಡೀ ದೇಶವೇ ತಲ್ಲಣಗೊಂಡಿದೆ. ಆದ್ದರಿಂದ ಪ್ರತಿಯೊಬ್ಬರೂ ಎಚ್ಚೆತ್ತು ಭಾರತ ದೇಶದ ರಕ್ಷಣೆಗೆ ಮುಂದಾಗಬೇಕು. ಪ್ರಧಾನಿಗಳು ಸಹ ಇದಕ್ಕೆ ತಕ್ಕ ಪ್ರತೀಕಾರ ಕೈಗೊಳ್ಳುವ ಮೂಲಕ ತಕ್ಕ ಉತ್ತರ ನೀಡುವುದಾಗಿ ಹೇಳಿದ್ದಾರೆ ಎಂದರು.

        ಉಗ್ರರ ದಾಳಿಯಂತಹ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡಬಾರದು. ಆದರೆ, ಹಿಂದೆ ಉಗ್ರ ಅಫ್ಜಲ್‍ಗುರುಗೆ ಗಲ್ಲುಶಿಕ್ಷೆ ವಿಧಿಸಿದ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದವರೇ ನಿನ್ನೆಯಿಂದಲೂ ರಾಜಕೀಯ ಆರಂಭಿಸಿರುವುದು ಅತ್ಯಂತ ನೀಚತನವಾಗಿದೆ ಎಂದರು.

        ಜಿಲ್ಲಾ ಮಾಜಿ ಸೈನಿಕ ವಿವಿಧೋದ್ದೇಶ ಸಂಘದ ಅಧ್ಯಕ್ಷ ಎಂ.ಎನ್.ಸತ್ಯಪ್ರಕಾಶ್ ಮಾತನಾಡಿ, ದೇಶದಲ್ಲಿ ನಡೆಯುವ ದಾಳಿಯನ್ನು ತಡೆಯಲು ಕೇಂದ್ರ ಸರ್ಕಾರವು ಶಾಶ್ವತ ಪರಿಹಾರ ಕೈಗೊಳ್ಳುವತ್ತ ಗಮನ ಹರಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯದರ್ಶಿ ಎಸ್.ಟಿ.ವೀರೇಶ್, ಜಿಲ್ಲಾ ಮಾಜಿ ಸೈನಿಕ ವಿವಿಧೋದ್ದೇಶ ಸಂಘದ ಕಾರ್ಯದರ್ಶಿ ಓ.ಬಿ.ಶಶಿಕಾಂತ್, ಆರ್‍ಎಸ್‍ಎಸ್‍ನ ತಿಪ್ಪೇಸ್ವಾಮಿ ವಿವಿಧ ಸಂಘಟನೆಗಳ ಮುಖಂಡರಾದ ಎನ್.ರಾಜಶೇಖರ್, ಪೈಲ್ವಾನ್ ಶಿವಕುಮಾರ್, ಗೌತಮ್ ಜೈನ್, ಶಂಕರಗೌಡ ಬೀರಾದರ್ ಸೇರಿದಂತೆ ಮಹಿಳೆಯರು, ಮಕ್ಕಳು, ವೃದ್ಧರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap