ಬೆಳವಡಿ ಮಲ್ಲಮ್ಮ ಕೃತಿ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ

0
19

ಹಾವೇರಿ :

         ಇತಿಹಾಸದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮವು ಅಂದು ಅದ್ಭುತ ಮೈಲಿಗಲ್ಲಾಗಿದ್ದು, ಅದರಲ್ಲಿ ಕನ್ನಡ ನಾಡಿನ ವೀರ ಮಹಿಳೆಯರಾದ ಕಿತ್ತೂರು ಚೆನ್ನಮ್ಮ ಮತ್ತು ಬೆಳವಡಿ ಮಲ್ಲಮ್ಮ ತಮ್ಮ ಸಾಹಸ ಮತ್ತು ತ್ಯಾಗ ಬಲಿದಾನಗಳಿಂದ ಈ ನೆಲದ ನಕ್ಷತ್ರವಾಗಿದ್ದಾರೆ ಎಂದು ಹುಕ್ಕೇರಿಮಠ ಸದಾಶಿವ ಸ್ವಾಮೀಜಿ ಹೇಳಿದರು.

          ನಗರದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಯ.ರು. ಪಾಟೀಲರ ಎರಡು ಕಾದಂಬರಿ ಕಿತ್ತೂರುರಾಣಿ ಚನ್ನಮ್ಮ ಮತ್ತು ಬೆಳವಡಿ ಮಲ್ಲಮ್ಮ ಕೃತಿ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

            ವೀರರಾಣಿ ಬೆಳವಡಿ ಮಲ್ಲಮ್ಮ ಕಾದಂಬರಿ ಕುರಿತು ಪ್ರೊ. ಪಿ.ಸಿ ಹಿರೇಮಠ ಮಾತನಾಡಿ, ಐತಿಹಾಸಿಕ ಕಾದಂಬರಿ ಬರೆಯುವದು ಒಂದು ಸವಾಲಿನ ಕೆಲಸವಾಗಿದ್ದು, ಅಪಾರ ಪ್ರಮಾಣದ ಶ್ರಮ ಮತ್ತು ಸಂಶೋಧನೆ ಅವಶ್ಯವಾಗಿರುತ್ತದೆ. ಈ ಕೃತಿಯಲ್ಲಿ ಲೇಖಕರ ಶ್ರಮ ಅನನ್ಯವಾಗಿದ್ದು, ಮಲ್ಲಮ್ಮಳ ಸಾಹಸ ಮತ್ತು ದೈರ್ಯವನ್ನು ರೋಚಕವಾಗಿ ಚಿತ್ರಿಸಿದ್ದು ಓದುಗನನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದು ಹೇಳಿದರು.

           ಐತಿಹಾಸಿಕ ಕಾದಂಬರಿ ಬರೆಯುವಾಗ ಇತಿಹಾಸಕ್ಕೆ ಅಪಚಾರವಾಗುವ ಅಂಶಗಳು ಅದರಲ್ಲಿ ಹೊಕ್ಕು ವ್ಯಕ್ತಿತ್ವಕ್ಕೆ ಮಸಿ ಬಳೆಯುವ ಸಾಧ್ಯತೆ ಹೆಚ್ಚಾಗಿದ್ದು, ಇಂತಹ ಸವಾಲನ್ನು ಲೇಖಕ ಸಮರ್ಥವಾಗಿ ನಿಭಾಯಿಸಿದ್ದು, ಬೆಳವಡಿ ನಾಡಿನ ಸಾಮಾಜಿಕ, ಸಾಂಸ್ಕತಿಕ, ಜನಪದೀಯ ಪರಂಪರೆಯನ್ನು ಅದ್ಭುತವಾಗಿ ಕಟ್ಟಿಕೊಟಿದ್ದು ಮುಂದಿನ ಜನಾಂಗಕ್ಕೆ ದಾರಿದೀಪದ ಕೃತಿಯಾಗಿದೆ ಎಂದು ಹೇಳಿದರು.

           ನಾನು ಕಿತ್ತೂರು ರಾಣಿ ಚೆನ್ನಮ್ಮ ಮಾತನಾಡುತ್ತಿದ್ದೇನೆ ಕೃತಿ ಕುರಿತು ಡಾ|| ಸಿದ್ಧಲಿಂಗಮ್ಮ ಮಾತನಾಡಿ, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಮುಂಚೆಯೆ ಬ್ರಿಟೀಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ಕಿತ್ತೂರ ರಾಣಿ ಚೆನ್ನಮ್ಮಳಾಗಿದ್ದು, ಇತಿಹಾಸದಲ್ಲಿ ಮಾತ್ರ ಅವಳಿಗೆ ಸಿಗಬೇಕಾದ ಪ್ರಮುಖ್ಯತೆ ಸಿಗಲಿಲ್ಲ ಎನ್ನುವದು ದುರ್ದೈವದ ಸಂಗತಿ ಎಂದು ಹೇಳಿದರು.

            ರಾಣಿ ಕಿತ್ತೂರು ಚೆನ್ನಮ್ಮ ಕುರಿತು ಈಗಾಗಲೇ ಹಲವಾರು ಕೃತಿಗಳು ಬಂದಿದ್ದರೂ ಅವಲ್ಲೆಕ್ಕಿಂತ ಭಿನ್ನ ಕಾದಂಬರಿ ಇದಾಗಿದ್ದು, ಲೇಖಕ ಅದೇ ಊರಿನಲ್ಲಿ ಬೆಳೆದಿದ್ದರಿಂದ ಸ್ಥಳೀಯ ಮಣ್ಣಿನ ಗುಣ, ಪರಂಪರೆ ಹಾಗೂ ನೈಜ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದು ಈ ಕಾದಂಬರಿಯ ಅಗ್ಗಳಿಕೆಯಾಗಿದ್ದು ನಮಗೆಲ್ಲಾ ಸ್ಪೂರ್ತಿಯ ಚಿಲುಮೆಯಾಗಿದೆ ಎಂದು ಹೇಳಿದರು.

             ಕಾದಂಬರಿಯ ಲೇಖಕ ಯ.ರು ಪಾಟೀಲ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಐತಿಹಾಸಿಕ ಕಾದಂಬರಿಗಳಿಗೆ ಮಹತ್ತರವಾದ ಸ್ಥಾನವಿದ್ದು, ಸಂಶೋಧನೆ ಮತ್ತು ಶಾಸನಗಳ ಅಧ್ಯಯನದಿಂದ ಇಲ್ಲಿಯ ವರೆಗೆ ಗೊತ್ತಿರಲಾದ ಅನೇಕ ಸಂಗತಿಗಳನ್ನು ಬರೆದಿದ್ದು, ಅದಕ್ಕೆ ಕಾದಂಬರಿಯ ರೂಪ ಕೊಡುವದು ಸವಾಲಿನ ಕೆಲಸವಾಗಿರುತ್ತದೆ. ಅಂಥ ಸವಾಲನ್ನು ಎದುರಿಸಿ ಓದುಗರಿಂದ ಉತ್ತಮ ವಿಮರ್ಶೆ ಬಂದಾಗ ಕೃತಿಕಾರನ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.

             ಮುಖ್ಯ ಅತಿಥಿಯಾಗಿದ್ದ ಮಾಜಿ ಕೇಂದ್ರ ಕಸಾಪ ಕಾರ್ಯದರ್ಶಿ ಸಿ.ಕೆ ರಾಮೇಗೌಡ ಮಾತನಾಡಿ, ಇಂದಿನ ಯುವ ಜನಾಂಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಪುಸ್ತಕ ಸಂಸ್ಕøತಿ ಕಡಿಮೆಯಾಗುತ್ತಿರುವದು ವಿಷಾದನೀಯ. ಈ ಪರಿಸ್ಥಿತಿಯಲ್ಲಿ ಇಂಥ ಐತಿಹಾಸಿಕ ಕಾದಂಬರಿಗಳ ಓದು ನಮಗೆ  ವೃದ್ಧಿಸುವದಲ್ಲದೇ, ನಮ್ಮ ಭವ್ಯ ಪರಂಪರೆ, ನಾಡು, ನುಡು ಬಗ್ಗೆ ಗೌರವ ಹೆಚ್ಚಾಗುತ್ತದೆ ಎಂದು ಹೇಳಿದರು.

            ಇದೇ ಸಂದರ್ಭದಲ್ಲಿ ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

              ತಾಲೂಕಾ ಕಸಾಪ ಅಧ್ಯಕ್ಷ ವಾಯ್. ಬಿ ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಿವಲಿಂಗೇಶ್ವರ ವಿದ್ಯಾಪೀಠದ ಚೇರಮನ್ನ ಎಸ್.ಸ್ ಮುಷ್ಢಿ ವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಬಿ ಲಿಂಗಯ್ಯ, ಶ್ರೀ ಹರ ಕೋ-ಆಫ ಬ್ಯಾಂಕನ ಅಧ್ಯಕ್ಷ ಜಿ.ವಿ ಹಿರೇಗೌಡ್ರ, ವೀರಣ್ಣ ಅಂಗಡಿ, ಗಂಗಾಧರ ನಂದಿ, ಸತೀಶ ಕುಲಕರ್ಣಿ, ಕೋರಗಲ್ಲ ವಿರುಪಾಕ್ಷಪ್ಪ, ಡಾ|| ಸವಿತಾ ಹಿರೇಮಠ, ಎಸ್.ಬಿ ಅಣ್ಣಿಗೇರಿ, ಲಲಿತಕ್ಕ ಹೊರಡಿ, ಬಿ.ಎಂ ಮಠ, ಜಿಲ್ಲಾ ಕಸಾಪದ ಕೋಶಾಧ್ಯಕ್ಷ ಎಸ್.ಎನ್ ದೊಡ್ಡಗೌಡರ, ಎಸ್.ವಿ ಹಿರೇಮಠ, ಚನ್ನವೀರಪ್ಪ ಅಕ್ಕಿ, ಸಿ.ಸಿ ಪ್ರಭುಗೌಡರ, ಡಾ|| ವಿ.ಪಿ ದ್ಯಾಮಣ್ಣನವರ, ರುದ್ರಪ್ಪ ಜಾಬೀನ, ಅಜ್ಜನಗೌಡ್ರ ಗೌಡಪ್ಪನವರ, ಹುಸೇನಸಾಬ ದೇವಿಹೊಸೂರ, ಎಸ್.ಸಿ ಮರಳಿಹಳ್ಳಿ, ಎಸ್.ಎಂ ಬಡಿಗೇರ, ಸಿ.ಜಿ ತೋಟಣ್ಣನವರ, ಎಂ.ಎಸ್ ಕೋರಿಶೆಟ್ಟರ, ಅಮೃತಕ್ಕ ಶೀಲವಂತರ, ಚಂಪಾ ಹುಣಸಿಕಟ್ಟಿ, ಆರ್.ಎಫ ಕಾಳೆ.ಜರೀನಾ ಹಬ್ಬುಸಾಬನವರ ಸಿ.ಎಸ್ ಮರಳಿಹಳ್ಳಿ ಪ್ರೊ. ಪುಪ್ಷಾ ಶಲವಡಿಮಠ ಎಸ್.ಆರ್ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here