ಸ್ವಾಮಿ ವಿವೇಕಾನಂದ ಎಲ್ಲಾ ಧರ್ಮದವರಿಗೂ ಮಾರ್ಗದರ್ಶಕರಾಗಿದ್ದರೂ : ದಿನೇಶ್ ಗುಂಡೂರಾವ್

ಬೆಂಗಳೂರು

        ಸ್ವಾಮಿ ವಿವೇಕಾನಂದರ ವೈಚಾರಿಕ ನಿಲುವುಗಳು ಎಲ್ಲಾ ಧರ್ಮದವರಿಗೂ ಮಾರ್ಗದರ್ಶನವಾಗಿದ್ದರೂ ಅವುಗಳನ್ನು ತಪ್ಪಾಗಿ ಬಿಂಬಿಸುತ್ತಾ ದ್ವೇಷ ಬಿತ್ತುವ ಕಾರ್ಯ ನಡೆಯುತ್ತಿದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಆತಂಕ ವ್ಯಕ್ತಪಡಿಸಿದರು.

          ವಿವೇಕಾನಂದರ ವೈಚಾರಿಕ ನಿಲುವುಗಳು ಕ್ರಾಂತಿಕಾರಿ ವಿಚಾರಧಾರೆಗಳು ನಮ್ಮ ಮಾನವೀಯ ವೌಲ್ಯಗಳ ಬದಲಾವಣೆಗೆ ಪೇರಕವಾಗಿದೆ. ಆದರೆ, ಇದನ್ನೇ ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ದೂರಿದರು.

         ಪುರಭವನದಲ್ಲಿ ಸಂಕಲ್ಪ ಸಂಸ್ಥೆ ಆಯೋಜಿಸಿದ್ದ, ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರಕವಿ ಕುವೆಂಪು ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ವಿವೇಕಾನಂದರು ಹಿಂದೂ ಧರ್ಮದ ವೌಲ್ಯಗಳನ್ನು ಗುರುತಿಸುವ ಜೊತೆಗೆ, ಇತರೆ ಧರ್ಮದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕೆಂದು ಮಾರ್ಗದರ್ಶನ ಮಾಡಿದ್ದರು ಎಂದು ಹೇಳಿದರು.

         ಯುವಕ ಪೀಳಿಗೆ ಮಾತ್ರ ಈ ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ಇನ್ನೂ, ಸಮಾಜದಲ್ಲಿ ಬದಲಾವಣೆ ಕಾರ್ಯ ನಡೆಯಬೇಕು. ನಮ್ಮ ನಡುವಿನ ಗುಂಪುಗಾರಿಕೆ, ಜಾತಿ ತರತಮ್ಯ, ಕೋಮು ದ್ವೇಷಗಳನ್ನು ಪ್ರತಿಯೊಬ್ಬರು ಹೋಗಲಾಡಿಸಬೇಕು. ವೈಚಾರಿಕ ಮತ್ತು ಸಮಾನತೆ ತತ್ವಗಳು ಎಲ್ಲರಿಗೂ ಬೋಧನೆ ಮಾಡಬೇಕು ಎಂದರು.

          ಯುವ ಪೀಳಿಗೆಗೆ ಹಾಗೂ ಸಾರ್ವಜನಿಕರಿಗೆ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಜೀವನ ಮೌಲ್ಯ, ವಿಶ್ವಶಾಂತಿ ಮತ್ತು ವಿವಿಧತೆಯಲ್ಲಿ ಏಕತೆಯ ಬಗ್ಗೆ ಮಾಡಿರುವ ಭಾಷಣದ ತುಣುಕು ಹಾಗೂ ಸಾರ್ವಜನಿಕ ಸಭೆಗಳಲ್ಲಿ ಮಾಡಿರುವ ಭಾಷಣಗಳನ್ನು ತಲುಪಿಸುವುದು ಅವಶ್ಯವಾಗಿದೆ ಎಂದು ಸಲಹೆ ಮಾಡಿದರು.

          ಸ್ವಾಮಿ ವಿವೇಕಾನಂದರನ್ನು ಅರ್ಥೈಸಿಕೊಳ್ಳದೆ, ಅವರ ಕುರಿತು ಅರಿಯದೆ ಒಬ್ಬ ವ್ಯಕ್ತಿಯ ಬದುಕು ಪರಿಪೂರ್ಣತೆ ಕಂಡುಕೊಳ್ಳಲು ಸಾಧ್ಯವಿಲ್ಲ. ವಿವೇಕಾನಂದರು ಕೇವಲ ಮೂರ್ತಿಯಾಗಿ ನಿಲ್ಲುವುದಕ್ಕಷ್ಟೇ ಸೀಮಿತವಲ್ಲ. ಬದುಕಿನ ವಿವಿಧ ಸ್ಥರವನ್ನು ಸೊಗಸಾಗಿಸುವ ಅದ್ಭುತ ಕಲೆಗಾರ.ಅವರೊಬ್ಬ ಮಹಾನ್ ಶಕ್ತಿ ಕೇಂದ್ರ ಎಂದು ಬಣ್ಣಿಸಿದರು.

         ಸೇವೆ, ಚಾರಿತ್ರ ಹಾಗೂ ಪರಿಶುದ್ಧತೆಗೆ ವಿವೇಕಾನಂದರು ಕರೆ ನೀಡಿದವರು. ಅವರು ಭಾರತವನ್ನು ಅದ್ಭುತ ಹಾಗೂ ಪವಿತ್ರ ಪ್ರದೇಶವಾಗಿ ಕಂಡಿದ್ದರು. ಪ್ರಪಂಚದಲ್ಲಿ ಭಾರತದ ಪಾತ್ರ ಏನು ಎಂಬುದನ್ನು ಚಿಂತಿಸಿದ್ದರು. ಸ್ವಾಮಿ ವಿವೇಕಾನಂದರು ಕೇವಲ ಸಾಮಾನ್ಯ ದೇಶಪ್ರೇಮಿಯಾಗಿರದೆ ಬಹು ವಿಸ್ತಾರವಾದ ಯೋಚನೆಗಳುಳ್ಳ ದೇಶಾರಾಧಕ ಆಗಿದ್ದರು. ಅವರನ್ನು ಕೇವಲ ಭಾರತಕ್ಕಷ್ಟೇ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ದಿನೇಶ್ ಗುಂಡೂರಾವ್ ಬಣ್ಣಿಸಿದರು.

          ಕಾರ್ಯಕ್ರಮದಲ್ಲಿ ಚಿಂತಕ ಕೆ.ಈ.ರಾಧಕೃಷ್ಣ, ಸಂಕಲ್ಪ ಅಧ್ಯಕ್ಷ ನಟರಾಜ್ ಗೌಡ, ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಅದ್ದೆ, ಸೂರ್ಯ ಮುಕಂದರಾಜ್ ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap