ಆಪರೇಶನ್ ಕಮಲದ ಬಗ್ಗೆ ಕಾಂಗ್ರೆಸಿಗೆ ಯಾವುದೇ ಆತಂಕ ಇಲ್ಲ : ಪರಮೇಶ್ವರ್

ಬೆಂಗಳೂರು

       ಆಪರೇಶನ್ ಕಮಲದ ಬಗ್ಗೆ ಕಾಂಗ್ರೆಸಿಗೆ ಯಾವುದೇ ಆತಂಕ ಇಲ್ಲ. ಬಿಜೆಪಿಯವರು ನಡೆಸುತ್ತಿರುವ ಪ್ರಯತ್ನಕ್ಕೆ ಫಲ ಸಿಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

        ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರ ಸ್ಥಿರವಾಗಿದ್ದು, ಪಕ್ಷದಿಂದ ಒಂದುವೇಳೆ ಯಾರಾದರೂ ಬಿಜೆಪಿಗೆ ಹೋದರೆ ಅವರನ್ನು ವಾಪಸ್ ಕರೆ ತರುವ ಪ್ರಯತ್ನ ಮಾಡುತ್ತೇವೆ. ನಮ್ಮ ಶಾಸಕರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಯಾರು ಬಿಜೆಪಿ ಸೇರುವುದಿಲ್ಲ ಎಂದರು.

         ಆದರೆ ಬಿಜೆಪಿ ಮುಖಂಡರು ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದು ಸಫಲವಾಗುವುದಿಲ್ಲ. ದೇವಸ್ಥಾನಕ್ಕೋ ಅಥವಾ ಸಮುದ್ರ ತೀರ ನೋಡಲಿಕ್ಕೋ ನಮ್ಮ ಶಾಸಕರು ಮುಂಬೈಗೆ ತೆರಳಿರಬಹುದು. ಯಾವ ಕಾರಣಕ್ಕೆ ಎಂಬುದು ನಮಗೆ ಗೊತ್ತಿಲ್ಲ. ಅದನ್ನು ಬೇರೆ ರೀತಿಯಲ್ಲಿ ವಿಶ್ಲೇಷಿಸುವುದು ಬೇಡ. ಆದರೆ ಕಾಂಗ್ರೆಸ್‍ನ ಯಾವ ಶಾಸಕರು ಬಿಜೆಪಿ ಸೇರುತ್ತೇವೆ ಎಂದು ಹೇಳಿಕೆ ನೀಡಿಲ್ಲ. ಅನಗತ್ಯವಾಗಿ ಅಪಾರ್ಥ ಮಾಡಿಕೊಳ್ಳುವುದು ಬೇಡ. ನಮ್ಮಶಾಸಕರ ಮೇಲೆ ನಮಗೆ ವಿಶ್ವಾಸವಿದೆ ಎಂದು ಹೇಳಿದರು.

        ಫೆಬ್ರವರಿಯಲ್ಲಿ ಬಜೆಟ್ ಮಂಡನೆಯಾಗಲಿದ್ದು, ಈ ಸಂಬಂಧ ಇಂದು ಸಭೆ ನಡೆಸಲಾಯಿತು. ಸಮ್ಮಿಶ್ರ ಸರ್ಕಾರ ಅಸ್ಥಿತ್ವದಲ್ಲಿ ಇರುವುದರಿಂದ ಎರಡೂ ಪಕ್ಷಗಳ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಜಾರಿಗೊಳಿಸಬೇಕಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳ ಮೇಲೆ ಯಾವುದನ್ನು ಬಜೆಟ್‍ನಲ್ಲಿ ಸೇರಿಸಬೇಕು. ಯಾವುದು ಸಾಧ್ಯ ಎಂಬ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆಯೇ ಹೊರತು

        ಆಪರೇಷನ್ ಕಮಲದ ಬಗ್ಗೆ ಚರ್ಚೆ ಮಾಡಿಲ್ಲ. ಆಪರೇಷನ್ ಕಮಲದ ಬಗ್ಗೆ ನಮಗೆ ಭಯವಿಲ್ಲ. ಸರ್ಕಾರದ ಸ್ಥಿರತೆ ಬಗ್ಗೆ ನಮಗೆ ಗೊತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

        ಬಿಜೆಪಿ ನಾಯಕರು ಅಪರೇಷನ್ ಕಮಲ ಮಾಡಲು ಪ್ರಯತ್ನ ಪಡುತ್ತಿರುವುದು ನಿಜ ಎಂದು ಒಪ್ಪಿಕೊಂಡ ಪರಮೇಶ್ವರ್, ನಮ್ಮವರು ಯಾವ ಕಾರಣಕ್ಕೆ ಮುಂಬೈಗೆ ಕಡೆ ಹೋಗಿದ್ದಾರೆ ಗೊತ್ತಿಲ್ಲ. ಯಾವೆಲ್ಲ ಶಾಸಕರು ಹೋಗಿದ್ದಾರೆ ಎಂಬ ಮಾಹಿತಿ ತರಿಸಿಕೊಳ್ಳುತ್ತಿದ್ದೇವೆ .ಯಾವುದೇ ಕಾರಣಕ್ಕೂ ಸರ್ಕಾರ ಅಸ್ಥಿರವಾಗುವುದಿಲ್ಲ. ನಮ್ಮ ಶಾಸಕರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದರು.

       ಶಾಸಕ ಉಮೇಶ್ ಜಾಧವ್ ಬಿಜೆಪಿ ಸೇರುವುದಿಲ್ಲ. ಅವವರ ಸಹೋದರ ರಾಮಚಂದ್ರ ಜಾಧವ್ ಅವರು ನೀಡುವ ಹೇಳಿಕೆಗಳಿಗೆ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

      ಫೆಬ್ರವರಿ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡಲು ಹಣಕಾಸು ಇಲಾಖೆ ಜವಾಬ್ದಾರಿ ಹೊಂದಿರುವ ಮುಖ್ಯಮಂತ್ರಿವೆಚ್.ಡಿ. ಕುಮಾರ ಸ್ವಾಮಿ ತೀರ್ಮಾನಿಸಿದ್ದಾರೆ. ಹೀಗಾಗಿ ಇಲಾಖಾವಾರು ಚರ್ಚಿಸಲು ಎಲ್ಲ ಸಚಿವರುಗಳನ್ನು ಇಂದು ಸಭೆಗೆ ಆಹ್ವಾನಿಸಲಾಗಿತ್ತು.

        ಸಮ್ಮಿಶ್ರ ಸರಕಾರದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವು ಪ್ರತ್ಯೇಕವಾಗಿ ಪ್ರಣಾಳಿಕೆಯನ್ನು ಹೊರಡಿಸಲಾಗಿದೆ. ಅಂತೆಯೇ ಈ ಎರಡೂ ಪ್ರಣಾಳಿಕೆಯಲ್ಲಿರುವ ಪ್ರಮುಖ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಈಗಾಗಲೇ ನಿರ್ಧರಿಸಲಾಗಿತ್ತು. ಕಳೆದ ಬಾರಿ ಸಿದ್ದರಾಮಯ್ಯ ಅವರ ಸರಕಾರದ ಆಯವ್ಯಯದಲ್ಲಿ ಘೋಷಿಸಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೊಳ್ಳುತ್ತಿವೆ. ಈ ಬಜೆಟ್‍ನಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಗಮನದಲ್ಲಿಟ್ಟುಕೊಂಡು ಆದ್ಯತೆ ಮೇರೆಗೆ ಪ್ರಮುಖ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತದೆ. ಕಳೆದ ಬಾರಿ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಘೋಷಿಸಿ, ಇನ್ನೂ ಜಾರಿಗೆ ಬಾರದ ಕಾರ್ಯಕ್ರಮಗಳನ್ನು ಸಹ ಅನುಷ್ಠಾನಗೊಳಿಸಲಾಗುವುದು ಎಂದರು.

           ಸಾಲಮನ್ನಾ ಘೊಷಿಸಿರುವುದರಿಂದ ಅದಕ್ಕೆ ಇಂತಿಷ್ಠು ಹಣ ಮೀಸಲಿರಿಸಿ, ಇತರೆ ಪ್ರಮುಖ ಕಾರ್ಯಕ್ರಮಗಳ ಪಟ್ಟಿ ನೀಡುವಂತೆಯೂ ಇಲಾಖಾವಾರು ಸಚಿವರುಗಳಿಗೆ ಸೂಚನೆ ನೀಡಲಾಗಿದೆ. ಇಂದುದು ಚರ್ಚಿಸಿದ ಅಂಶಗಳನ್ನು ಹಾಗೂ ಸಚಿವರುಗಳ ಬೇಡಿಕೆಯನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap