ಬಜೆಟ್ ಅಧಿವೇಶನದ ವೇಳೆ ಉತ್ತರ ನೀಡಲು ಸರ್ಕಾರ ಸಿದ್ಧ: ಡಿಕೆಶಿ

0
14

ಬೆಂಗಳೂರು

         ಹಿಂದುಳಿದ ವರ್ಗಗಳ ಸಚಿವ ಪುಟ್ಟರಂಗಶೆಟ್ಟಿ ಅವರ ಆಪ್ತ ಸಹಾಯಕನ ಬಳಿ ಹಣ ದೊರೆತಿರುವ ಪ್ರಕರಣದ ಬಗ್ಗೆ ಬಿಜೆಪಿ ನಾಯಕರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದು, ಬಿಜೆಪಿಯ ಯಾವುದೇ ಆರೋಪಗಳಿಗೆ ಫೆ. 8 ರಿಂದ ಆರಂಭವಾಗುವ ಬಜೆಟ್ ಅಧಿವೇಶನದ ವೇಳೆ ಉತ್ತರ ನೀಡಲು ಸರ್ಕಾರ ಸಿದ್ಧವಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

         ಸಚಿವ ಪುಟ್ಟರಂಗಣ್ಣ ಶೆಟ್ಟಿ ಹಿಂದುಳಿದ ವರ್ಗಕ್ಕೆ ಸೇರಿದ್ದು, ಅವರ ಏಳಿಗೆ ಸಹಿಸಲಾಗದೆ ಅವರ ವಿರುದ್ಧ ಬಿಜೆಪಿಯವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಆರೋಪ ಮಾಡುವುದೇ ಬಿಜೆಪಿ ಕೆಲಸ ಎಂದು ತರಾಟೆಗೆ ತೆಗೆದುಕೊಂಡರು.

       ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಟ್ಟರಂಗಶೆಟ್ಟಿ ಅವರೇನು ಚೆಕ್‍ನಲ್ಲಿ ಹಣ ಪಡೆದಿಲ್ಲ. ಬಿಜೆಪಿಯವರು ಚೆಕ್ ನಲ್ಲಿ ಹಣ ತೆಗೆದುಕೊಂಡಿಲ್ಲವೇ. ಬಿಜೆಪಿ ನಾಯಕರು ಚೆಕ್ ಮೂಲಕ ಹಣ ಪಡೆದಿಲ್ಲವೆಂದು ಹೇಳಿದರೆ ದಾಖಲೆ ಸಮೇತ ಅದನ್ನು ಬಹಿರಂಗ ಪಡಿಸುವುದಾಗಿ ಶಿವಕುಮಾರ್ ಸವಾಲು ಹಾಕಿದರು.

       ವಿಧಾನಸೌಧದಲ್ಲಿ ಪತ್ತೆ ಆದ ಹಣಕ್ಕೂ ಪುಟ್ಟರಂಗಶೆಟ್ಟಿ ಅವರಿಗೂ ಏನು ಸಂಬಂಧವಿದೆ. ಯಾರೋ ಹಣ ತೆಗೆದುಕೊಂಡು ಹೋದರೆ ಸಚಿವರ ಮೇಲೆ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಈ ಪ್ರಕರಣದಲ್ಲಿ ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.ಒಂದು ವೇಳೆ ಅವರು ಚೆಕ್‍ನಲ್ಲಿ ಹಣ ಪಡೆದಿದ್ದರೆ ಐಟಿಯವರು ಏಕೆ ತನಿಖೆ ಮಾಡುತಿಲ್ಲ.

      ಯಾರ ಮೇಲೆ ಯಾವ ರೀತಿ ಪ್ರಯೋಗ ನಡೆಯುತ್ತಿದೆ ಎಂಬುದು ತಮಗೆ ಗೊತ್ತಿದೆ. ಬಿಜೆಪಿಯವರು ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಸಲು ಸಿದ್ದರಿದ್ದರೆ ಬರಲಿ ನಾವು ಅಲ್ಲೇ ಉತ್ತರ ಕೊಡುತ್ತೇವೆ ಎಂದು ತಿರುಗೇಟು ನೀಡಿದರು.

        ಅಮವಾಸ್ಯೆ, ಗ್ರಹಣ ಎಲ್ಲವೂ ಮುಗಿದ ಬಳಿಕ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳ ನೇಮಕ ನಡೆಯಲಿದೆ. ಜ. 14ರ ನಂತರ ನೇಮಕ ಮಾಡಬೇಕು ಎಂದು ಉದ್ದೇಶಿಸಲಾಗಿತ್ತು. ಆದರೆ, ನಮ್ಮವರು ಈಗಲೇ ಮಾಡೋಣ ಎನ್ನುತ್ತಿದ್ದಾರೆ. ಹಾಗಾಗಿ, ರಾಜಕೀಯ ಹುದ್ದೆಗಳ ನೇಮಕಾತಿ ವಿಷಯದಲ್ಲಿ ಯಾವುದೇ ಆತಂಕ ಬೇಡ ಎಂದರು.

        ಲೋಕಸಭಾ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲು ಆಸಕ್ತರಾಗಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅದು ಅವರ ಚಿಂತನೆಯಾಗಿದ್ದು, ಆಸೆ ಪಡುವುದರಲ್ಲಿ ತಪ್ಪೇನಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳೆ ಸ್ಫರ್ಧಿ ಮಾಡಲಿದ್ದಾರೆ ಎಂದು ಶಿವಕುಮಾರ್ ಹೇಳಿದರು.

          ಕೆಆರ್‍ಎಸ್ ಅನ್ನು ಡಿಸ್ನಿ ಲ್ಯಾಂಡ್ ಮಾದರಿಯಾಗಿ ಅಭಿವೃದ್ಧಿ ಪಡಿಸಲು ಸರ್ಕಾರ ಬದ್ಧವಾಗಿದೆ. ಈ ಯೋಜನೆಗಾಗಿ ಅಲ್ಲಿ ಯಾರ ಜಮೀನನ್ನು ನಾವು ಸ್ವಾಧೀನ ಪಡಿಸಿಕೊಳ್ಳುವುದಿಲ್ಲ. ಬೃಂದಾವನಕ್ಕೆ ಯಾವುದೇ ಧಕ್ಕೆಯೂ ಆಗುವುದಿಲ್ಲ. ಹಿಂದಿನ ಸಿದ್ದರಾಮಯ್ಯ ಅವರ ಆಡಳಿತದಲ್ಲೇ ಈ ಯೋಜನೆ ಸಿದ್ಧವಾಗಿತ್ತು ಎಂದು ಸ್ಪಷ್ಟಪಡಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here