ಸಂಸದರ ನಿಧಿಯನ್ನು ಸದ್ಬಳಕೆ ಮಾಡಲಾಗಿದೆ :ಎಂಪಿಆರ್

0
7

ಹೊನ್ನಾಳಿ:

         ಸಂಸದರ ನಿಧಿಯನ್ನು ಸದ್ಬಳಕೆ ಮಾಡಲಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ವಿವಿಧೆಡೆ ಸಮುದಾಯ ಭವನ, ಶಾಲಾ-ಕಾಲೇಜು ಕಟ್ಟಡಗಳು, ಕಾಂಕ್ರೀಟ್ ರಸ್ತೆ ಮುಂತಾದ ಕಾಮಗಾರಿಗಳಿಗೆ ಅನುದಾನ ನೀಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

        ತಾಲೂಕಿನ ಚಿಕ್ಕಬಾಸೂರು ತಾಂಡಾ(ವಿಜಯಪುರ)ದಲ್ಲಿ 9.93 ಕೋಟಿ ರೂ.ಗಳ ವೆಚ್ಚದ ಹೊಟ್ಯಾಪುರ ಮತ್ತಿತರ 10 ಗ್ರಾಮಗಳಿಗೆ ನೀರು ಪೂರೈಸುವ ಬಹು ಗ್ರಾಮ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

        ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಸಮಸ್ತ ಜನತೆಗೆ ಶಾಶ್ವತ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ನಮ್ಮ ಗುರಿಯಾಗಿದ್ದು, ಸಾರ್ವಜನಿಕರ ದಿನನಿತ್ಯದ ಜ್ವಲಂತ ಸಮಸ್ಯೆಗಳನ್ನು ಹಂತ-ಹಂತವಾಗಿ ಬಗೆಹರಿಸಲು ತಾವು ಮತ್ತು ಶಾಸಕರು ಒಟ್ಟಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.

        ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯದ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಅಂದಿನ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹಕಾರದಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಅನೇಕ ಯೋಜನೆಗಳನ್ನು ಜಾರಿಗೆ ತಂದು ಈ ಭಾಗದ ಎಲ್ಲಾ ಗ್ರಾಮಗಳಿಗೆ ಸಿಮೆಂಟ್ ರಸ್ತೆ, ಕುಡಿಯುವ ನೀರು, ಶಿಕ್ಷಣದಂತಹ ಅನೇಕ ಸೌಲಭ್ಯಗಳು ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹೀಗೆ ಪ್ರಾಮಾಣಿಕ ಅಭಿವೃದ್ಧಿಗೆ ಶ್ರಮಿಸಿದ್ದೇವೆ ಎಂದರು. ನಾನು ಸಂಸದನಾಗಿ ದಾವಣಗೆರೆ ಕ್ಷೇತ್ರದ 1800 ಗ್ರಾಮಗಳಿಗೆ ಹಲವಾರು ಬಾರಿ ಭೇಟಿ ನೀಡಿ ಅಲ್ಲಿನ ಅನೇಕ ಸಮಸ್ಯೆಗಳನ್ನು ಅಧ್ಯಯನ ಮಾಡಿ ನನ್ನ ಪ್ರಾಮಾಣಿಕ ಪ್ರಯತ್ನದಿಂದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದೇನೆ ಎಂದು ವಿವರಿಸಿದರು.

         ವಿಶ್ವ ಮೆಚ್ಚಿದ ನಾಯಕ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪಧಾನಿ ಮಾಡಲು ದೇಶದ ಜನತೆ ತೀರ್ಮಾನಿಸಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಮತ್ತೊಮ್ಮೆ ಬಿಜೆಪಿ ತೆಕ್ಕೆಗೆ ನೀಡಲು ತಮ್ಮ ಸಹಕಾರ ಮುಖ್ಯವಾಗಿದೆ. ಈಗಿನಿಂದಲೇ ಬಿಜೆಪಿ ಕಾರ್ಯಕರ್ತರು ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಹೊನ್ನಾಳಿ ಕ್ಷೇತ್ರದ ಜನತೆ ಕಳೆದ 25 ವರ್ಷಗಳಿಂದಲೂ ಸೇವೆ ಮಾಡಲು ತಮಗೆ ಅಧಿಕಾರ ನೀಡಿದ್ದೀರಿ. ಮೊದಲು ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಕನಸು ನನ್ನದಾಗಿದ್ದು, ಜನತೆಯ ದುಃಖ-ದುಮ್ಮಾನಗಳಿಗೆ ಸ್ಪಂದಿಸಲು ನಾನು ಸದಾ ಸಿದ್ಧನಿದ್ದೇನೆ. ನೀವು ನೀಡಿದ ಅಧಿಕಾರವನ್ನು ಎಂದೂ ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಸದಾ ತಮ್ಮ ಸೇವೆಗೆ ಸಿದ್ಧನಿದ್ದೇನೆ ಎಂದು ತಿಳಿಸಿದರು.

         ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ನನ್ನ ಹಿಂದಿನ ಆಡಳಿತಾವಧಿಯಲ್ಲಿ ಕ್ಷೇತ್ರದ ಬಹುಪಾಲು ಗ್ರಾಮಗಳಿಗೆ ಬಹು ಗ್ರಾಮ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸಲಾಗಿತ್ತು ಎಂದರು.

         ತಾಲೂಕಿನ ಜನತೆಯ ಹಿತ ರಕ್ಷಣೆ ಮತ್ತು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ನನ್ನ ಗುರಿಯಾಗಿದೆ. ಅದರಲ್ಲೂ ವಿಶೇಷವಾಗಿ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ರಾಜ್ಯದ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವನಾಗಿದ್ದ ಸಂದರ್ಭದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ವಿಶೇಷ ಆದ್ಯತೆ ನೀಡಿ ನೂರಾರು ಕೋಟಿ ರೂ.ಗಳ ವೆಚ್ಚದಲ್ಲಿ ತಾಲೂಕಿನಾದ್ಯಂತ ಬಹುಪಾಲು ಗ್ರಾಮಗಳಿಗೆ ಹೊನ್ನಾಳಿಯ ತುಂಗಭದ್ರಾ ನದಿ ಯಿಂದ ನೀರು ಪೂರೈಸಲಾಗುತ್ತಿದೆ.

          17ಕೋಟಿ ರೂ.ಗಳ ವೆಚ್ಚದಲ್ಲಿ ಕುಂದೂರು ಇತರೆ 14 ಗ್ರಾಮಗಳು, 7 ಕೋಟಿ ರೂ.ಗಳ ವೆಚ್ಚದಲ್ಲಿ ಹನುಮಸಾಗರ ಇತರೆ 7 ಗ್ರಾಮಗಳು, 7.75 ಕೋಟಿ ರೂ.ಗಳ ವೆಚ್ಚದಲ್ಲಿ ಹಿರೇಗೋಣಿಗೆರೆ ಇತರೆ 8 ಗ್ರಾಮಗಳು, 22 ಕೋಟಿ ರೂ.ಗಳ ವೆಚ್ಚದಲ್ಲಿ ಮಾರಿಕೊಪ್ಪ ಇತರೆ 17 ಗ್ರಾಮಗಳು, 6.50 ಕೋಟಿ ರೂ.ಗಳ ವೆಚ್ಚದಲ್ಲಿ ಕೆಂಗಟ್ಟೆ ಇತರೆ 4 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ಈ ಎಲ್ಲಾ ಯೋಜನೆಗಳೂ ಈ ಹಿಂದಿನ ತಮ್ಮ ಶಾಸಕತ್ವದ ಅವಧಿಯಲ್ಲಿ ಪೂರ್ಣಗೊಂಡಿದ್ದವು. 10 ಕೋಟಿ ರೂ.ಗಳ ವೆಚ್ಚದಲ್ಲಿ ಫಲವನಹಳ್ಳಿ ಮತ್ತಿತರ 41 ಗ್ರಾಮಗಳು, 9 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ದೇವರಹೊನ್ನಾಳಿ ಮತ್ತಿತರ 14 ಗ್ರಾಮಗಳಿಗೆ ನೀರು ಪೂರೈಸುವ ಯೋಜನೆಗೆ ಈ ಹಿಂದಿನ ತಮ್ಮ ಶಾಸಕತ್ವದ ಅವಧಿಯಲ್ಲಿ ಮಂಜೂರಾತಿಗೆ ಅನುಮತಿ ಕೋರಲಾಗಿದ್ದು, ಮಂಜೂರಾತಿಗೆ ಸರಕಾರದ ಹಂತದಲ್ಲಿವೆ ಎಂದರು.

       ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಜೊತೆಗೆ ಭವಿಷ್ಯತ್ತಿನ ಹಿತದೃಷ್ಟಿಯಿಂದ ಅಂತರ್ಜಲ ಹೆಚ್ಚಳಕ್ಕೆ ವಿಶೇಷ ಆದ್ಯತೆ ನೀಡಲಾಗುವುದು. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ವತಿಯಿಂದ ಬಹುಪಾಲು ಅನುದಾನ ಮಂಜೂರಾಗಿದೆ. ಯೋಜನೆಗಳ ಸಮರ್ಪಕ ಅನುಷ್ಠಾನ, ಕಾಮಗಾರಿಗಳ ನಿರ್ವಹಣೆ ಮತ್ತು ಸುಗಮವಾಗಿ ಎಲ್ಲಾ ಯೋಜನೆಗಳು ಸಾಗುವ ದೃಷ್ಟಿಯಿಂದ ಗ್ರಾಪಂ ಅಧ್ಯಕ್ಷರು, ಜಿಪಂ, ತಾಪಂ ಸದಸ್ಯರು ನಿರಂತರವಾಗಿ ಸಲಹೆ ನೀಡಬೇಕು ಎಂದು ತಿಳಿಸಿದರು.

       ತಾಲೂಕನ್ನು ಬರ ಮುಕ್ತ ತಾಲೂಕನ್ನಾಗಿಸಲು ಸಂಕಲ್ಪ ಮಾಡಿದ್ದು, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಹಿಂದುಳಿದ ಗ್ರಾಮಗಳಿಗೆ ಬಹು ಗ್ರಾಮ ಶುದ್ಧ ಕುಡಿಯುವ ನೀರು ಯೋಜನೆಗಳನ್ನು ಸಾಕಾರಗೊಳಿಸಲು ಪ್ರಾಮಾಣಿಕ ಚಿಂತನೆ ನಡೆಸಲಾಗುತ್ತಿದೆ ಎಂದರು. ವಸತಿ, ಶಿಕ್ಷಣ ಮತ್ತು ಆರೋಗ್ಯ ಮುಂತಾದ ಸೌಲಭ್ಯಗಳು ಬಡವ-ಶ್ರೀಮಂತ ಎಂಬ ಭೇದವಿಲ್ಲದೇ ಪ್ರತಿಯೊಬ್ಬ ನಾಗರೀಕರಿಗೂ ಲಭಿಸಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.

         ಜಿಪಂ ಸದಸ್ಯರಾದ ಜಿ. ವೀರಶೇಖರಪ್ಪ, ಸಿ. ಸುರೇಂದ್ರನಾಯ್ಕ, ತಾಪಂ ಅಧ್ಯಕ್ಷೆ ಸುಲೋಚನಮ್ಮ ಪಾಲಾಕ್ಷಪ್ಪ, ಸದಸ್ಯೆ ರೇಖಾ ಉಮೇಶನಾಯ್ಕ, ಎಪಿಎಂಸಿ ನಿರ್ದೇಶಕ ಜಿವಿಎಂ ರಾಜು, ಬೆನಕನಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ, ಸದಸ್ಯ ಎ.ಜಿ. ಮಹೇಂದ್ರಗೌಡ, ಬೀರಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ನಾಗೇಂದ್ರಪ್ಪ, ರಾಂಪುರ ಗ್ರಾಪಂ ಅಧ್ಯಕ್ಷ ಕುಬೇಂದ್ರಯ್ಯ, ವಿವಿಧ ಗ್ರಾಪಂಗಳ ಸದಸ್ಯರು ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳ ಅನೇಕ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here