ಕರ್ನಾಟಕದಿಂದ ಸ್ಪರ್ಧಿಸುವರೇ ರಾಹುಲ್???

ಬೆಂಗಳೂರು

        ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಿಂದಲೇ ಸ್ಪರ್ಧೆ ಮಾಡಲಿದ್ದಾರೆಯೇ ? ಇದಕ್ಕೆ ಪುಷ್ಠಿ ಎಂಬಂತೆ ಬೀದರ್ ಜಿಲ್ಲಾ ಕಾಂಗ್ರೆಸ್ ನಿಯೋಗ ಸದ್ಯವೇ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮನವೊಲಿಸಲು ಮುಂದಾಗಿರುವುದು ರಾಜಕೀಯ ಪಡಸಾಲೆಯಲ್ಲಿ ಈ ಆಶಯ ಚಿಗುರೊಡೆಯುವಂತೆ ಮಾಡಿದೆ.

          ಸಂವಿಧಾನದ 371 (ಜೆ) ಕಲಂಗೆ ತಿದ್ದುಪಡಿ ತಂದು ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಹೆಚ್ಚಿನ ಅನುದಾನ ಒದಗಿಸಿರುವ ಹಿನ್ನೆಲೆಯಲ್ಲಿ ಬೀದರ್‍ನಿಂದ ಸ್ಪರ್ಧೆ ಮಾಡಿದರೆ ಪಕ್ಷಕ್ಕೆ ದೊಡ್ಡ ಮಟ್ಟದ ಲಾಭವಾಗಲಿದೆ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಅವರ ಮನವೊಲಿಸಲು ನಿಯೋಗ ಮುಂದಾಗಿದೆ.

          ಬೀದರ್ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು ಇಲ್ಲಿಂದ ರಾಹುಲ್ ಗಾಂಧಿ ಅವರು ಸ್ಪರ್ಧೆ ಮಾಡಿದರೆ ಸುಲಭವಾಗಿ ಜಯ ಸಾಧಿಸಬಹುದು ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ನಿಯೋಗ ರಾಹುಲ್ ಮನವೊಲಿಕೆಗೆ ಮುಂದಾಗಿದೆ. ಇತ್ತೀಚೆಗೆ ತಾನೆ ಮಾಡಲಾದ ಸಂಪುಟ ಪುನಾರಚನೆ ಹಾಗೂ ನಿಗಮ ಮಂಡಳಿ ನೇಮಕಾತಿಯಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ಸಿಂಹಪಾಲು ಅವಕಾಶ ನೀಡಲಾಗಿದ್ದು ಇದೂ ಕೂಡ ಪರೋಕ್ಷವಾಗಿ ರಾಹುಲ್ ಗಾಂಧಿ ಅವರ ಗೆಲುವಿಗೆ ವರದಾನವಾಗಲಿದೆ ಎಂಬ ದೂರದೃಷ್ಟಿ ಇಟ್ಟುಕೊಳ್ಳಲಾಗಿದೆ.

           ರಾಹುಲ್ ಗಾಂಧಿ ಅವರ ಸ್ಪರ್ಧೆಯನ್ನೇ ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಬೀದರ್ ಜಿಲ್ಲೆಗೆ ಹೆಚ್ಚಿನ ಅವಕಾಶಗಳನ್ನು ಸಚಿವ ಸಂಪುಟ ಮತ್ತು ನಿಗಮ ಮಂಡಳಿಗಳಲ್ಲಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಹುಲ್ ಅವರು ಬೀದರ್‍ನಿಂದ ಸ್ಪರ್ಧೆ ಮಾಡುವ ಸಾಧ್ಯತೆಗಳು ಹೆಚ್ಚು ಎನ್ನಲಾಗಿದೆ.

          2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಪ್ರತಿನಿಧಿಸುವ ಅಮೇಥಿಯಲ್ಲಿ ಕಾಂಗ್ರೆಸ್ ದಯನೀಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಸುರಕ್ಷಿತ ಕ್ಷೇತ್ರ ಕಂಡುಕೊಳ್ಳುವ ಪ್ರಯತ್ನದ ಭಾಗವಾಗಿ ಈ ಹೊಸ ಬೆಳವಣಿಗೆ ಕಾಣಿಸಿಕೊಂಡಿದೆ ಎನ್ನಲಾಗಿದೆ.

        ಸಂವಿಧಾನದ 371 (ಜೆ) ಗೆ ತಿದ್ದುಪಡಿ ತಂದು ಈ ಭಾಗಕ್ಕೆ ಶಿಕ್ಷಣ ಮತ್ತು ಉದ್ಯೋಗಾವಕಾಶ ಒದಗಿಸಿಕೊಟ್ಟಿರುವುದಕ್ಕಾಗಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡಿರುವುದರಿಂದ ಬೀದರ್ ಜನತೆ ರಾಹುಲ್ ಗಾಂಧಿ ಅವರನ್ನು ಭಾರೀ ಬಹುಮತದ ಅಂತರದಿಂದ ಆಯ್ಕೆ ಮಾಡಿ ಕಳುಹಿಸಿದ್ದಾರೆ ಎಂಬ ವಿಶ್ವಾಸವನ್ನು ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವ್ಯಕ್ತಪಡಿಸಿದ್ದಾರೆ. ಏನೇ ಆಗಲಿ, ರಾಹುಲ್ ಗಾಂಧಿ ಬೀದರ್ ನಿಂದ ಸ್ಪರ್ಧೆ ಮಾಡಿದರೆ ಗೆಲುವು ನಿಶ್ಚಿತ, ಈ ರಾಜಕೀಯ ಲೆಕ್ಕಾಚಾರ ಕೇವಲ ಬೀದರ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ.

         ಹೈದರಾಬಾದ್ ? ಕರ್ನಾಟಕಕ್ಕೆ ಹೊಂದಿಕೊಂಡಂತಿರುವ ತೆಲಂಗಾಣ ಮತ್ತು ಮರಾಠಾವಾಡ ಭಾಗದಲ್ಲೂ ಇದರಿಂದ ಪಕ್ಷಕ್ಕೆ ಹೆಚ್ಚಿನ ಚೈತನ್ಯ ಬರಲಿದ್ದು ರಾಹುಲ್, ಬೀದರ್ ನಿಂದ ಸ್ಪರ್ಧಿಸಿದ್ದಲ್ಲಿ ಅದರ ಪರಿಣಾಮ 25 ಸುತ್ತಮುತ್ತಲ ಲೋಕಸಭಾ ಕ್ಷೇತ್ರಗಳ ಮೇಲೂ ಆಗಲಿದ್ದು, ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ದೊರಕಲಿವೆ ಎಂಬ ಲೆಕ್ಕಾಚಾರ ಹಾಕಲಾಗಿದೆ.

          1999ರ ಲೋಕಸಭಾ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ವಿರುದ್ಧ ಬಳ್ಳಾರಿಯಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಇದಕ್ಕೂ ಮುಂಚೆ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ವೀರೇಂದ್ರ ಪಾಟೀಲ್ ಅವರನ್ನು ಮಣಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ಹೀಗಾಗಿ ನೆಹರೂ ಕುಟುಂಬಕ್ಕೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ ಬಹಳ ಹಿಂದಿನಿಂದ ಬೆಳೆದುಕೊಂಡು ಬಂದಿದೆ. ಅದನ್ನು ಲೋಕಸಭಾ ಚುನಾವಣೆಯಲ್ಲಿ ಸಮರ್ಥವಾಗಿ ಬಳಕೆ ಮಾಡಿಕೊಂಡು ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಲು, ಕಾಂಗ್ರೆಸ್ ಈ ಪ್ರಯತ್ನಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.

         ರಾಹುಲ್ ಕರ್ನಾಟಕದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳ ನಡುವೆಯೇ ಅತ್ತ ಕಡೆ ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯನ್ನು ಬಿಟ್ಟು ಒಡಿಶಾದ ಪುರಿಯಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap