ಕಳೆದ ಬಾರಿ ಶೇ.72.49ರಷ್ಟು ಮತದಾನ : ಈ ಬಾರಿ ಹೆಚ್ಚಳ ಕಾಣುವುದೇ ಮತದಾನದ ಪ್ರಮಾಣ?

0
4

ತುಮಕೂರು

      8 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 18 ರಂದು ಮತದಾನ ನಡೆಯುತ್ತಿದ್ದು, ಈ ಬಾರಿ ಕಳೆದ ಬಾರಿಯ ಶೇಕಡ ಮತದಾನದ ಪ್ರಮಾಣ ಹೆಚ್ಚಾಗುವುದೋ ಅಥವಾ ಕುಸಿತ ಕಾಣುವುದೋ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.

       2014 ರ ಲೋಕಸಭಾ ಚುನಾವಣೆ ಅವಧಿಯಲ್ಲಿ ಮೂರು ಪಕ್ಷಗಳ ನಡುವೆ ಪೈಪೋಟಿ ನಡೆದಿತ್ತು. ಅಷ್ಟೇ ಭರ್ಜರಿ ಪ್ರಚಾರವೂ ನಡೆದಿತ್ತು. ಶೇ.72.49 ರಷ್ಟು ಮತದಾನವಾಗಿತ್ತು. ಈ ಬಾರಿ ಇಷ್ಟೇ ಪ್ರಮಾಣದ ಮತದಾನವಾಗುತ್ತದೆಂಬ ನಿರೀಕ್ಷೆ ಯಾರಲ್ಲಿಯೂ ಇಲ್ಲ.
ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಎಸ್.ಪಿ.ಮುದ್ದಹನುಮೇಗೌಡ ಅವರು 4,29,868 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ಜಿ.ಎಸ್.ಬಸವರಾಜು 3,55,827 ಮತಗಳನ್ನು ಪಡೆದು 2ನೇ ಸ್ಥಾನದಲ್ಲಿದ್ದರು.

       ಮುದ್ದಹನುಮೇಗೌಡ ಅವರ ಗೆಲುವಿನ ಅಂತರದ ಮತಗಳು 74,041. ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಎ.ಕೃಷ್ಣಪ್ಪ 2,58,683 ಮತಗಳನ್ನು ಪಡೆದಿದ್ದರು. 15,18,144 ಒಟ್ಟು ಮತಗಳ ಪೈಕಿ 11,00,617 ಮತಗಳು ಚಲಾವಣೆಯಾಗಿದ್ದವು.

        ಕಾಂಗ್ರೆಸ್‍ನ ಮುದ್ದಹನುಮೇಗೌಡ ಅವರು ಒಟ್ಟು ಮತಗಳ ಪೈಕಿ 28.31 ರಷ್ಟು ಮತಗಳಿಸಿದರೆ, ಚಲಾವಣೆಯಾದ ಮತಗಳ ಪೈಕಿ 39.05 ರಷ್ಟು ಮತ ಪಡೆದಿದ್ದರು. ಇವರಿಗೆ ಅತಿ ಹೆಚ್ಚಿನ ಮುನ್ನಡೆ (ಲೀಡ್) ತಂದುಕೊಟ್ಟದ್ದು ಮಧುಗಿರಿ ಕ್ಷೇತ್ರ. ಇಲ್ಲಿ 1,84,737 ಮತದಾರರ ಪೈಕಿ 1,30,400 ಮಂದಿ ಮತ ಚಲಾಯಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಗೆ ಈ ಕ್ಷೇತ್ರದಲ್ಲಿ ಹೆಚ್ಚುವರಿ 38,536 ಮತಗಳು ಲಭ್ಯವಾಗಿದ್ದವು. ನಂತರದ ಸ್ಥಾನದಲ್ಲಿ ಕೊರಟಗೆರೆ ಇದ್ದು, ಅಲ್ಲಿ 33,583 ಲೀಡ್ ಪಡೆದಿದ್ದರು. ತುರುವೇಕೆರೆಯಲ್ಲಿ 18,732, ಚಿ.ನಾ.ಹಳ್ಳಿಯಲ್ಲಿ 11,999 ಮತಗಳ ಮುನ್ನಡೆಯನ್ನು ಕಾಂಗ್ರೆಸ್ ಅಭ್ಯರ್ಥಿ ಪಡೆದಿದ್ದರು.

         ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ತಿಪಟೂರಿನಲ್ಲಿ ಹೆಚ್ಚಿನ ಲೀಡ್ ಪಡೆದಿದ್ದರು. 14,759 ಮತಗಳ ಮುನ್ನಡೆ ಪಡೆದುಕೊಂಡಿದ್ದರೆ, ತುಮಕೂರಿನಲ್ಲಿ 6,000, ತುಮಕೂರು ಗ್ರಾಮಾಂತರದಲ್ಲಿ 4,000, ಗುಬ್ಬಿಯಲ್ಲಿ 2,700 ಮುನ್ನಡೆ ಮತಗಳನ್ನು ಜಿ.ಎಸ್.ಬಿ. ಗಳಿಸಿದ್ದರು. ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇ.23.43 ಮತ ಗಳಿಸಿದರೆ, ಒಟ್ಟು ಮತಗಳ ಪೈಕಿ ಬಿಜೆಪಿ ಅಭ್ಯರ್ಥಿಯ ಮತಗಳಿಕೆ ಪ್ರಮಾಣ ಶೇ.32.32 ರಷ್ಟಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಪಡೆದ ಒಟ್ಟು ಶೇಕಡಾವಾರು ಮತ 45.34. ಚಲಾವಣೆಯಾದ ಮತಗಳ ಪೈಕಿ ಎರಡೂ ಪಕ್ಷಗಳ ಒಟ್ಟು ಮತ ಗಳಿಕೆ ಶೇ.62.55ರಷ್ಟಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here