ಮೈತ್ರಿ ಅಭ್ಯರ್ಥಿ ಗೆಲುವಿಗೆ ಮುಖಂಡರ ಸಂಕಲ್ಪ

ಚಿತ್ರದುರ್ಗ:

         ಕಾಂಗ್ರೆಸ್ ಮತ್ತು ಜೆಡಿಎಸ್. ಒಗ್ಗಟ್ಟಾಗಿ ಶಕ್ತಿ ಪ್ರದರ್ಶಿಸುವ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಕೋಮುವಾದಿ ಬಿಜೆಪಿ.ಯನ್ನು ಕಿತ್ತೊಗೆಯೋಣ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಉಭಯ ಪಕ್ಷಗಳ ಕಾರ್ಯಕರ್ತರಿಗೆ ಹಾಗೂ ಮುಖಂಡರುಗಳಿಗೆ ಕರೆ ನೀಡಿದರು.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಮಾಪತಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಮತ್ತು ಜೆಡಿಎಸ್.ಜಂಟಿ ಸಭೆ ಉದ್ಘಾಟಿಸಿ ಮಾತನಾಡಿದರು.

         ಬಿಜೆಪಿ.ಯವರ ವ್ಯವಸ್ಥಿತ ಅಪಪ್ರಚಾರದಿಂದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತಿರಬಹುದು. ಅದಕ್ಕೆ ಪ್ರತ್ಯುತ್ತರವಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಂದ್ರಪ್ಪನವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿಕೊಳ್ಳೋಣ. ಸುಳ್ಳು ಘೋಷಣೆಗಳನ್ನು ನೀಡುತ್ತ ಅಸತ್ಯವನ್ನು ಸತ್ಯವನ್ನಾಗಿ ಮಾಡಿರುವುದೇ ಬಿಜೆಪಿ.ಸಾಧನೆ. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮ ಮಾಡುತ್ತೇವೆ.

       ವರ್ಷಕ್ಕೆ ಎರಡು ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವುದಾಗಿ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ ನರೇಂದ್ರಮೋದಿ ಬಡವರ ಹಾಗೂ ರೈತರ ಪರವಾಗಿಲ್ಲ. ರಾಜ್ಯ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದಿರುವ ಎಲ್ಲಾ ಯೋಜನೆಗಳನ್ನು ಮುಂದುವರೆಸಿದ್ದಾರೆ ಎಂದು ಗುಣಗಾನ ಮಾಡಿದರು.

             ಬಿಜೆಪಿ.ಗೆ ಯಾವ ಸಾಧನೆಯೂ ಇಲ್ಲ. ಯೋಜನೆಯೂ ಇಲ್ಲದಿರುವುದರಿಂದ ಭಯ ಶುರುವಾಗಿದೆ. ಬಿಜೆಪಿ.ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಲೋಕಸಭಾ ಚುನಾವಣೆಯಲ್ಲಿ 22 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಜೆಡಿಎಸ್.ಕಾಂಗ್ರೆಸ್‍ನವರು ಒಟ್ಟಾಗಿ ಶಕ್ತಿ ಪ್ರದರ್ಶಿಸಿದರೆ ನಾವು 22 ಸೀಟುಗಳನ್ನು ಗೆಲ್ಲುತ್ತೇವೆ. ಹಾಗಾಗಿ ಎರಡು ಪಕ್ಷಗಳವರು ಸೇರಿ ಚುನಾವಣೆಯಲ್ಲಿ ಸೋದರರಂತೆ ಕೆಲಸ ಮಾಡಿ ರಾಹುಲ್‍ಗಾಂಧಿ ಕೈಬಲಪಡಿಸೋಣ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೇಲೆ ನಮ್ಮ ಪಕ್ಷದವರಿಗೆ ಗೌರವವಿದೆ.

         ಅದೇ ರೀತಿ ದೇವೇಗೌಡರಿಗೂ ರಾಹುಲ್‍ಗಾಂಧಿ ಮೇಲೆ ಗೌರವವಿದೆ. ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸುವಲ್ಲಿ ಪಣತೊಡಬೇಕಾಗಿದೆ ಎಂದು ಹೇಳಿದರು.ಜೆಡಿಎಸ್.ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡುತ್ತ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸುವ ಜವಾಬ್ದಾರಿ ಕಾಂಗ್ರೆಸ್‍ನವರಿಗಿಂತ ನಮಗೆ ಜಾಸ್ತಿಯಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಕೋಮುವಾದಿ ಬಿಜೆಪಿ.ಯವರು ದೇಶವನ್ನು ಗಂಡಾಂತರಕ್ಕೆ ತಂದು ನಿಲ್ಲಿಸಿದ್ದಾರೆ.

         ನೋಟು ಅಮಾನ್ಯೀಕರಣಗೊಳಿಸಿ ರೈತರು, ಕಾರ್ಮಿಕರು, ಬಡವರನ್ನು ದಿವಾಳಿಯನ್ನಾಗಿಸಿರುವ ಪ್ರಧಾನಿ ಮೋದಿರವರಿಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಸವಾಲು ಕಾಂಗ್ರೆಸ್ ಮತ್ತು ಜೆಡಿಎಸ್.ನವರ ಮೇಲಿದೆ. ಒಂದು ವೇಳೆ ನಮ್ಮ ಅಭ್ಯರ್ಥಿ ಸೋತರೆ ಇಡೀ ಜಿಲ್ಲೆಯಲ್ಲಿಯೇ ಮುಖಭಂಗ ಅನುಭವಿಸಬೇಕಾಗುತ್ತದೆ ಎಂಬ ಭಯವಿಟ್ಟುಕೊಂಡು ಚುನಾವಣೆಯಲ್ಲಿ ಕೆಲಸ ಮಾಡಬೇಕಿದೆ.

           ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಎರಡು ಪಕ್ಷಗಳ ಕಾರ್ಯಕರ್ತರಿಗೆ ತಿಳಿಸಿದರು.
ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳನ್ನು ಬೆಳೆಯಲು ಬಿಡಬಾರದು. ಚಿತ್ರದುರ್ಗ ಜಿಲ್ಲೆ ಬಿಜೆಪಿ.ಗೆ ಎಂದೂ ಶಕ್ತಿ ಕೊಟ್ಟಿದ್ದಲ್ಲ. ವಿಧಾನಸಭೆ ಚುನಾವಣೆಯಲ್ಲಿ ಆದ ತಪ್ಪಿನಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಜೆಡಿಎಸ್.ಸೋತಿರಬಹುದು. ತಿನ್ನುವ ಆಹಾರವನ್ನು ಪ್ರಶ್ನಿಸುವವರು ನಮ್ಮ ದೇಶದಲ್ಲಿದ್ದಾರೆ. ಅಂತಹ ದುಷ್ಟ ಶಕ್ತಿಗಳಿಗೆ ಅಧಿಕಾರ ಹಿಡಿಯಲು ಅವಕಾಶ ಕೊಡಬಾರದೆಂದರೆ ಬಿ.ಎನ್.ಚಂದ್ರಪ್ಪನವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿಕೊಳ್ಳೋಣ ಎಂದರು.

          ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡುತ್ತ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್.ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದೆ. ಅದರಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಎರಡು ಪಕ್ಷದ ಅಭ್ಯರ್ಥಿಯಾಗಿ ನನ್ನನ್ನು ವರಿಷ್ಟರು ಕಣಕ್ಕಿಳಿಸಿದ್ದಾರೆ. ದೇವೇಗೌಡರ ಸೂಚನೆಯಂತೆ ಜೆಡಿಎಸ್.ಕಚೇರಿಗೆ ಹೋಗಿದ್ದಾಗ ನಿಮ್ಮ ಮಾರ್ಗದರ್ಶನದಂತೆ ನಾವು ನಡೆದುಕೊಂಡು ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆಂದು ಜೆಡಿಎಸ್.ಜಿಲ್ಲಾಧ್ಯಕ್ಷ ಡಿ.ಯಶೋಧರ ಹೇಳಿದ್ದು, ಅವರ ದೊಡ್ಡತನ ಎಂದು ಸಂತಸ ವ್ಯಕ್ತಪಡಿಸಿದರು.
ಹೆಚ್.ಡಿ.ದೇವೇಗೌಡ, ರಾಹುಲ್‍ಗಾಂಧಿ, ಕುಮಾರಸ್ವಾಮಿ, ಸಿದ್ದರಾಮಯ್ಯ ಇವರುಗಳೆಲ್ಲಾ ಸೇರಿಕೊಂಡು ರಾಜ್ಯದಲ್ಲಿ ಉತ್ತಮ ಮೈತ್ರಿ ಸರ್ಕಾರ ನಡೆಸುತ್ತಿದ್ದಾರೆ. ಅದೇ ರೀತಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್.ಒಂದಾಗಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದ ಅಭಿವೃದ್ದಿಗೆ ಶ್ರಮಿಸೋಣ. ಇದಕ್ಕೆ ಉಭಯ ಪಕ್ಷಗಳ ಕಾರ್ಯಕರ್ತರ ಹಾಗೂ ಮುಖಂಡರುಗಳ ಬೆಂಬಲ ಬೇಕು ಎಂದು ಕೋರಿದರು.

          ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರುಗಳಾದ ಬಿ.ಜಿ.ಗೋವಿಂದಪ್ಪ, ಡಿ.ಸುಧಾಕರ್, ತಿಪ್ಪೇಸ್ವಾಮಿ ಇವರುಗಳು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಪೌರ ನೌಕರರ ಸಂಘಧ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಜೆಡಿಎಸ್.ಮುಖಂಡರುಗಳಾದ ಬಿ.ಕಾಂತರಾಜ್, ತಿಮ್ಮಣ್ಣ, ಮೀನಾಕ್ಷಿನಂದೀಶ್, ಗೀತ, ಶ್ರೀನಿವಾಸ್‍ಗದ್ದಿಗೆ, ಜೆಡಿಎಸ್.ಜಿಲ್ಲಾ ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ, ಎತ್ತನಟ್ಟಿಗೌಡ, ಯುವ ವಕೀಲ ಪ್ರತಾಪ್‍ಜೋಗಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಬಿ.ಟಿ.ಜಗದೀಶ್, ಕೆ.ಪಿ.ಸಂಪತ್‍ಕುಮಾರ್, ಉಪಾಧ್ಯಕ್ಷ ಆರ್.ಕೆ.ನಾಯ್ಡು, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಮಹಡಿಶಿವಮೂರ್ತಿ, ಸೈಯದ್ ವಲಿಖಾದ್ರಿ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್.ಮುಖಂಡರುಗಳು ವೇದಿಕೆಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap