ವಿಶ್ವಗ್ರಾಹಕ ಹಕ್ಕುಗಳ ದಿನಾಚರಣೆ

ಹಿರಿಯೂರು :

        ಅಮೇರಿಕಾ ದೇಶದಲ್ಲಿ, 1962ರ ಮಾರ್ಚ್ 15ರಂದು ಜಾನ್‍ಎಫ್‍ಕೆನಡಿಯವರು ಗ್ರಾಹಕ ಹಕ್ಕುಗಳನ್ನು ಕಾಪಾಡುವ ಬಗ್ಗೆ ಭಾಷಣ ಮಾಡಿದ್ದರು. ಇದರ ಅಂಗವಾಗಿ ಕಾನೂನನ್ನು ರೂಪಿಸಿ ಸದರಿ ದಿನವನ್ನು ಗ್ರಾಹಕ ಹಕ್ಕುಗಳ ದಿನವೆಂದು ಆಚರಿಸಲಾಗಿದೆ ಎಂಬುದಾಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಸ್.ಪಲ್ಲೇದ್‍ರವರು ಹೇಳಿದರು.

       ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಭಾರತೀಯ ಅಂಚೆ ಇಲಾಖೆ, ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಗ್ರಾಹಕ ಹಕ್ಕುಗಳ ದಿನ ಮತ್ತು ಅಂಚೆ-ಜೀವಾ ವಿಮಾ ಕುರಿತು ಕಾನೂನು ಅರಿವು ನೆರವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

        ಎಲ್ಲಾ ದೇಶಗಳಲ್ಲಿ ಗ್ರಾಹಕ ಹಕ್ಕುಗಳ ಕಾಯ್ದೆಗಳನ್ನು ರೂಪಿಸಲಾಗಿದೆ. ಭಾರತದಲ್ಲಿ 1986ರಲ್ಲಿ ಕನ್ಸ್ಯೂಮರ್ ಪ್ರೊಟೆಕ್ಷನ್ ಆಕ್ಟ್ ರೂಪಿಸಲಾಗಿದೆ. ಕಾಯ್ದೆಯ ಪ್ರಕಾರ ಮಾಹಿತಿಯ ಹಕ್ಕು, ಸುರಕ್ಷತೆಯ ಹಕ್ಕು, ಆಯ್ಕೆಯ ಹಕ್ಕು ಮತ್ತು ದೂರನ್ನು ನೀಡುವ ಹಕ್ಕು ಈ ನಾಲ್ಕು ಹಕ್ಕುಗಳನ್ನು ಆಧಾರವಾಗಿಸಿ ಕಾಯ್ದೆಯನ್ನು ರೂಪಿಸಲಾಗಿದೆ ಎಂಬುದಾಗಿ ಹೇಳಿದರು.

        ಕಾರ್ಯಕ್ರಮದಲ್ಲಿ ಅಂಚೆ ಜೀವ ವಿಮಾ ಅಭಿವೃದ್ಧಿ ಅಧಿಕಾರಿಗಳಾದ ಷೇಕ್ ಜಾಕೀರ್ ಹುಸೇನ್ ರವರು ಮಾತನಾಡಿ, ಭಾರತೀಯ ಅಂಚೆ ಇಲಾಖೆಯಲ್ಲಿರುವ ಅಂಚೆ ಜೀವವಿಮೆ ಒಂದು ರೀತಿಯ ಅತ್ಯುತ್ತಮ ಯೋಜನೆಯಾಗಿದ್ದು ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು.

         ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಚೆಅಧೀಕ್ಷಕರಾದ ಶಿವರಾಜ್‍ಕಿಂದೆಮಠ ವಹಿಸಿದ್ದರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಶ್ರೀಮತಿ ಎನ್.ಬಿ.ಶೇಖ್, ವಕೀಲರ ಸಂಘದ ಅಧ್ಯಕ್ಷರಾದ ಜಿ.ಎಸ್.ತಿಪ್ಪೇಸ್ವಾಮಿ, ಎಪಿಪಿ ಟಿ.ಮಂಜಣ್ಣ, ವಕೀಲರಾದ ಎಚ್.ಎಸ್.ಕೀರ್ತಿಕುಮಾರ್, ಎಸ್.ಜಯಣ್ಣ, ಬಿ.ಎನ್.ತಿಪ್ಪೇಸ್ವಾಮಿ, ದಯಾನಂದ್, ರಂಗನಾಥ್, ಮಹಾಬಲೆಶ್, ಅಸ್ಗರ್ ಉನ್ನಿಸ್, ಗಿರಿಜಾ, ಅಂಚೆ ನಿರೀಕ್ಷಕರಾದ ಆರ್.ರವಿಕುಮಾರ್ ಷರೀಫ್ ಮತ್ತು ಇಲಾಖೆಯ ಸಿಬ್ಬಂದಿಯವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap