ವಿಶ್ವ ಜಲ ದಿನಾಚರಣೆಗೆ ಸೂಚನೆ

ದಾವಣಗೆರೆ

        ಕರ್ನಾಟಕ ಸರ್ಕಾರ 2019ನ್ನು “ಜಲವರ್ಷ”ವನ್ನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಮಾ.22ರಂದು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ವಿಶ್ವ ಜಲ ದಿನಾಚರಣೆಯನ್ನು ಆಚರಿಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಒ ಹೆಚ್.ಬಸವರಾಜೇಂದ್ರ ಸೂಚಿಸಿದರು.

        ನಗರದ ಜಿಲ್ಲಾ ಪಂಚಾಯತ್‍ನ ಸಿಇಒ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ನೀರಿನ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯಿತಿ, ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳು ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಾ.22 ರಂದು “ವಿಶ್ವ ಜಲ ದಿನಾಚರಣೆ”ಯನ್ನು ಆಚರಿಸಬೇಕು ಹಾಗೂ ವಿಶ್ವ ಜಲ ದಿನಾಚರಣೆಯಲ್ಲಿ ಜಲ ಸಂರಕ್ಷಣೆಯ ಕುರಿತು ಪ್ರತಿಜ್ಞೆ ಸ್ವೀಕಾರ ಮಾಡಿ, ಎಲ್ಲಾ ಕಚೇರಿಗಳಲ್ಲಿ ಒಂದೊಂದು ಸಸಿಯನ್ನು ನೆಡಬೇಕೆಂದು ಸಲಹೆ ನೀಡಿದರು.

        ಕರ್ನಾಟಕ ಸರ್ಕಾರವು 2019ನೇ ವರ್ಷವನ್ನು “ಜಲವರ್ಷ” ಎಂಬುದಾಗಿ ಘೋಷಿಸಿದೆ. ಜಲವರ್ಷದ ಆಚರಣೆಗಾಗಿ ರಾಜ್ಯಾದ್ಯಂತ ವಿವಿಧ ಚಟುವಟಿಕೆ ಹಾಗೂ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಲಾಮೃತ ಕಾರ್ಯಕ್ರಮದ ಅಂಗವಾಗಿ ಜನರಿಗೆ ನೀರಿನ ಬಗ್ಗೆ ಅರಿವು ಮೂಡಿಸಲು ಜಲ ಸಾಕ್ಷರತೆ, ಜಲ ಸಂರಕ್ಷಣೆ, ಜಲ ಪ್ರಜ್ಞೆ, ಹಾಗೂ ಹಸಿರೀಕರಣ ಎಂಬ ನಾಲ್ಕು ಅಂಶಗಳನ್ನು ಪರಿಚಯಿಸಲಾಗುತ್ತಿದೆ.

        ಇದರ ಅಡಿಯಲ್ಲಿ ನೀರನ್ನು ಮಿತವಾಗಿ ಬಳಸಿ ನಾಳೆಗೂ ಉಳಿಸಿ, ನೀರು ಅಮೃತ, ನೀರಿನ ಜವಾಬ್ದಾರಿ ನನ್ನದು, ಸರ್ವರಿಗೂ ಜಲ ಸದಾಕಾಲ, ಎಂಬ ಘೋಷವಾಕ್ಯಗಳ ಮೂಲಕ ಜನರಿಗೆ ನೀರಿನ ಬಳಕೆ ಮತ್ತು ಪ್ರಾಮುಖ್ಯತೆ ಹಾಗೂ ಮುಂದಿನ ಪೀಳಿಗೆಗೆ ನೀರನ್ನು ಉಳಿಸಬೇಕು ಎನ್ನುವುದರ ಮಾಹಿತಿಯನ್ನು ನೀಡಲಾಗುವುದು ಎಂದರು.

         ವಿಶ್ವ ನೀರಿನ ದಿನಾಚರಣೆಗೂ ಮುನ್ನ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಕಿರು ನೀರು ಸರಬರಾಜು ಟ್ಯಾಂಕರ್‍ಗಳು, ಶಾಲೆಗಳು, ಅಂಗನವಾಡಿಗಳು, ಡೇರಿಗಳು, ಕೋ-ಆಪರೇಟಿವ್ ಸಂಘಗಳು, ಸರ್ಕಾರಿ ಕಟ್ಟಡಗಳ ಕಾಂಪೌಂಡ್ ಗೋಡೆಗಳ ಮೇಲೆ ಜಲಸಂರಕ್ಷಣಾ ಸಂದೇಶಗಳು ಮತ್ತು ಚಿತ್ರಗಳನ್ನು ಚಿತ್ರಿಸಬೇಕೆಂದು ಹೇಳಿದರು.

         ಜಿಲ್ಲಾ ಪಂಚಾಯತ್‍ನಿಂದ ಗ್ರಾಮ ಪಂಚಾಯತ್‍ಗಳವರೆಗೆ ಪ್ರತಿ ಹಂತದಲ್ಲೂ ಸರ್ಕಾರಿ ಕಚೇರಿಗಳು, ಶಾಲೆಗಳು, ಅಂಗನವಾಡಿ ಹಾಗೂ ವಸತಿನಿಲಯಗಳಲ್ಲಿ ಜಲಾಮೃತದ ಭಿತ್ತಿಪತ್ರಗಳನ್ನು ಮುದ್ರಿಸಿ ಪ್ರದರ್ಶಿಸಬೇಕು. ಎಲ್ಲಾ ಸರ್ಕಾರಿ ಮತ್ತು ಸಾರ್ವಜನಿಕ ಸಾರಿಗೆ ವಾಹನಗಳು, ಆರ್‍ಓ ಘಟಕಗಳು, ರೆಸ್ಟೋರೆಂಟ್‍ಗಳಲ್ಲಿ ಜಲಾಮೃತ ಸ್ಟಿಕ್ಕರ್‍ಗಳನ್ನು ಮುದ್ರಿಸಿ ಉಪಯೋಗಿಸಬೇಕು ಎಂದರು.

       ಕೃಷಿ, ತೋಟಗಾರಿಕೆ, ಅರಣ್ಯ, ನೀರಾವರಿ ಇಲಾಖೆಗಳು ಜಲಮೂಲಗಳನ್ನು ಪುನಶ್ಚೇತನ ಮಾಡುವ ಕಾರ್ಯಕ್ರಮಗಳು ಮತ್ತು ಇತರೆ ನೀರಿಗೆ ಸಂಬಂಧಿಸಿದ ಯೋಜನೆಗಳಿಗೆ ಹೆಚ್ಚು ಗಮನ ನೀಡಬೇಕು. ಜಲ ಸಂರಕ್ಷಣೆ ಬಗ್ಗೆ ಇರುವಂತಹ ಚಲನಚಿತ್ರಗಳನ್ನು ಹಳ್ಳಿಗಳಲ್ಲಿ ಪ್ರದರ್ಶಿಸಲು ಸರ್ಕಾರಕ್ಕೆ ತಾವು ಮನವಿ ಮಾಡಿ ಪತ್ರ ಬರೆಯಲಾಗುವುದು ಎಂದರು.

          ಜಿ.ಪಂ. ಸಹಾಯಕ ಯೋಜನಾ ನಿರ್ದೇಶಕ ಶಶಿಧರ್ ಮಾತನಾಡಿ, ಕಳೆದ ಹದಿನೇಳು ವರ್ಷಗಳಲ್ಲಿ ಹದಿನಾಲ್ಕು ವರ್ಷಗಳ ಕಾಲ ನಮ್ಮ ರಾಜ್ಯ ಬರಪೀಡಿತವಾಗಿದೆ. ಇದಕ್ಕೆ ಕಾರಣ ನಮ್ಮ ರಾಜ್ಯದಲ್ಲಿ ಹಸಿರು ಕಡಿಮೆಯಾಗಿರುವುದು. ಪ್ರಸಕ್ತ ವರ್ಷವನ್ನು ಜಲವರ್ಷವನ್ನಾಗಿ ಮಾಡಿ ಜಲ ಮರುಪೂರಣ ಯೋಜನೆ ಮತ್ತು ಎರಡು ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

         ಸಭೆಯಲ್ಲಿ ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಆಂಜನೇಯ, ಡಿಡಿಪಿಐ ಪರಮೇಶ್ವರಪ್ಪ, ಡಿಎಚ್‍ಓ ಡಾ.ತ್ರಿಪುಲಾಂಭ, ದಾವಣಗೆರೆ, ಜಗಳೂರು, ಹೊನ್ನಾಳಿ, ಹರಿಹರ, ತಾಲೂಕುಗಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ವಿವಿಧ ವಲಯಗಳ ಅಧಿಕಾರಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap