ಆತಂಕ ಎದುರಿಸುವ ಆತ್ಮ ವಿಶ್ವಾಸ ಬೆಳೆಸಿಕೊಳ್ಳಿ

ಚಿತ್ರದುರ್ಗ,

       ಇಂದು ಸಣ್ಣ-ಸಣ್ಣ ಕಾರಣಗಳಿಗಾಗಿ ಆತಂಕಕ್ಕೊಳಗಾಗುವುದನ್ನು ಎಲ್ಲೆಡೆ ನೋಡುತ್ತಿದ್ದೇವೆ. ನಮ್ಮೊಳಗಡೆ ಇರುವ ಇಂಥ ಆತಂಕಕ್ಕೆ ಒಳಗಾಗುವವರು ನಾವಾದ್ದರಿಂದ ಅದನ್ನು ಹೋಗಲಾಡಿಸುವವರೂ ನಾವೇ ಆಗಬೇಕು. ಬಹಳ ಮುಖ್ಯವಾಗಿ ನಮ್ಮ ಬಗ್ಗೆ ನಾವು ಆತ್ಮವಿಶ್ವಾಸ ಬೆಳೆಸಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

        ರಾಷ್ಟ್ರೀಯ ನಾಟಕೋತ್ಸದ ನಿಮಿತ್ತ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಆಯೋಜನೆಗೊಂಡಿದ್ದ `ಧ್ಯಾನ, ಮೌನ, ಪ್ರಾರ್ಥನೆ, ಚಿಂತನಾ’ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

         ನಮ್ಮ ಮುಂದೆ ಎದುರಾಗುವ ಸಮಸ್ಯೆಗಳನ್ನು, ಆತಂಕಗಳನ್ನು ಸಕಾರಾತ್ಮಕವಾಗಿ ನೋಡಬೇಕೇ ಹೊರತು ನಕಾರಾತ್ಮಕವಾಗಿ ನೋಡಬಾರದು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಾತ್ವಿಕ ಆಹಾರ, ಮತ್ತು ಊಟ ಮಾಡುವ ವಿಧಾನ ಬಹಳ ಮುಖ್ಯ. ಮಧುಮೇಹ, ರಕ್ತದೊತ್ತಡಗಳು ದೇಹದಲ್ಲಿ ಕಂಡು ಬಂದರೆ ಏನೋ ಬರಬಾರದು ಬಂದಂತೆ ಆತಂಕಕ್ಕೆ ಒಳಗಾಗುವವರು. ಇಂತಹ ಚಿಂತೆಯಿಂದ ದೂರಾಗಿ ಚಿಂತನೆಯ ಕಡೆ ಮನಸ್ಸನ್ನು ಹರಿಸಬೇಕು. ಆಲೋಚನಾ ವಿಧಾನಗಳನ್ನು, ಬದುಕಿನ ವಿಧಾನಗಳನ್ನು ಬದಲಾಯಿಸಿಕೊಳ್ಳಬೇಕು. ಮಾನಸಿಕ ಸ್ಥೈರ್ಯ, ಶ್ರದ್ಧೆ, ಏಕಾಗ್ರತೆಗಳು ಆತಂಕಗಳಿಂದ ನಮ್ಮನ್ನು ದೂರ ಇಡುವವು ಎಂದರು,

        ಎಲ್ಲ ದಾನಗಳಿಗಿಂತ ಶ್ರೇಷ್ಠ ದಾನ ಸಮಾಧಾನ.. ಇನ್ನೊಬ್ಬರನ್ನು ಗೌರವಿಸುವ, ಮೆಚ್ಚುವ ಗುಣ ಬೆಳೆಸಿಕೊಂಡರೆ, ಸಕಾರಾತ್ಮಕವಾಗಿ ಯೋಚಿಸಿದರೆ ಆತಂಕಗಳು ತನ್ನಿಂದ ತಾನೇ ಕಡಿಮೆಯಾಗುವವು. ಸಕಾರಾತ್ಮಕ ಚಿಂತನೆ, ಆಂತರಿಕ ನೋಟ ವ್ಯಕ್ತಿಯಲ್ಲಿ, ದೇಶದಲ್ಲಿ ಒಳ್ಳೆಯ ಬದಲಾವಣೆಗಳನ್ನು ತರಲು ಸಾಧ್ಯ. 12 ನೆಯ ಶತಮಾನದ ಶರಣರು ಅದ್ಭುತವಾದ ಬದಲಾವಣೆ ತರಲು ಇಂಥವೇ ಗುಣಗಳನ್ನು ಅವರು ಮೈಗೂಡಿಸಿಕೊಂಡಿದ್ದರು. ಅರಿವು ಆತಂಕಗಳನ್ನು ದೂರಮಾಡುವುದು. ಅನ್ನ, ಅರಿವೆ, ಆಶ್ರಯಗಳನ್ನು ಗಳಿಸುವುದು ಕಷ್ಟವೇನಲ್ಲ; ದುರಾಸೆಯನ್ನು ಬಿಡಬೇಕಷ್ಟೇ. ಹಿತ-ಮಿತ ಜೀವನದಿಂದ ನೆಮ್ಮದಿ ಸಾಧ್ಯ. ಶಿವನಾಗಿ ಶಿವನನ್ನು ಪೂಜಿಸಿದರೆ ಆತಂಕಕ್ಕೆ ಅವಕಾಶವಿರುವುದಿಲ್ಲ ಎಂದರು.

        ಪ್ರಾರ್ಥನಾ ಸಭೆಯಲ್ಲಿ `ಆತಂಕಗಳನ್ನು ಎದುರಿಸುವ ಬಗೆ’ ವಿಷಯ ಕುರಿತಂತೆ ಮಾತನಾಡಿದ ಹೊಸದುರ್ಗದ ವಿಶ್ರಾಂತ ಪ್ರಾಂಶುಪಾಲ ಪಿ ಎಲ್ ಲೋಕೇಶ್ವರ ಮಾತನಾಡಿ ಇಂದು ಜಗತ್ತು ಭಯೋತ್ಪಾದನೆ, ಉಗ್ರಗಾಮಿತನ, ಲೈಂಗಿಕ ದೌರ್ಜನ್ಯ, ರೈತರ ಆತ್ಮಹತ್ಯೆ, ಜಾಗತೀಕರಣ, ಸಂಸ್ಕೃತಿಕ ದಿವಾಳಿತನ ಮುಂತಾದ ಹಲವು ಆತಂಕಗಳನ್ನು ಎದುರಿಸುತ್ತಿದೆ. ಅದರಂತೆ ಮಕ್ಕಳೂ ಸಹ ಪರೀಕ್ಷೆ ಎನ್ನುವ ಭಯವನ್ನು ಅನುಭವಿಸುತ್ತಿದ್ದಾರೆ. ಇಂಥ ಭಯವನ್ನು ಹೋಗಲಾಡಿಸಿ ಮಕ್ಕಳು ಹಬ್ಬದ ರೀತಿಯಲ್ಲಿ ಆಚರಿಸುವಂತಾಗಬೇಕು. ಇಂಥ ಆತಂಕಗಳನ್ನು ಎದುರಿಸಲು ಹೊರಗಿನಿಂದ ಸಾಧ್ಯವಿಲ್ಲ. ನಮ್ಮೊಳಗೆ ಆತ್ಮವಿಶ್ವಾಸ, ದೃಢತೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

      ಇತ್ತೀಚೆಗೆ ನಿವೃತ್ತ ನ್ಯಾಯಾಧೀಶರೊಬ್ಬರು ನೀಡಿದ ಹಿಂದುತ್ವವೇ ಭಾರತೀಯತೆ ಎನ್ನುವ ಹೇಳಿಕೆಯನ್ನು ನೋಡಿ ನನಗೆ ಆತಂಕವಾಯಿತು. ಸಂವಿಧಾನದ ಪ್ರತಿಗಳನ್ನು ಸಾರ್ವಜನಿಕವಾಗಿ ಸುಟ್ಟು ಹಾಕುವಷ್ಟು ಅಸಹನೆ ಬೆಳೆಯುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಎಲ್ಲ ಜಾತಿಯ ಬಡವರಿಗೆ ಮೀಸಲಾತಿ ಸಿಗಬೇಕು. ಸಂವಿಧಾನವನ್ನು ತಿದ್ದುಪಡಿ ಮಾಡಲು ಅವಕಾಶವಿರುವಾಗ ಇಂಥ ಅಸಹನೆಯ ಅಗತ್ಯ ಖಂಡಿತಾ ಇಲ್ಲ. ಹಿಂದೆ ಆದರ್ಶಗಳನ್ನು ಇಟ್ಟುಕೊಂಡಿರುವವರು ಮಾತ್ರ ಜನಪ್ರತಿನಿಧಿಯಾಗಿ ಆಯ್ಕೆ ಆಗುತ್ತಿದ್ದರು. ಆದರೆ ಇಂದು ಹಣವಂತರು, ಬಲಾಢ್ಯರು, ಶ್ರೀಮಂತರು ಮಾತ್ರ ಜನಪ್ರತಿನಿಧಿಗಳಾಗುತ್ತಿದ್ದಾರೆ. ರಾಜಕೀಯ ಒಂದು ಉದ್ಯಮವಾಗಿದೆ.

        ಯಾವ ಪಕ್ಷಗಳಲ್ಲೂ ತತ್ವ ಸಿದ್ಧಾಂತಗಳು ಉಳಿದಿಲ್ಲ. ಒಂದು ವರ್ಗ, ಜಾತಿ, ಧರ್ಮವನ್ನು ಅವಲಂಬಿಸಿ ಮತವನ್ನು ಹಾಕುವ ಕೆಟ್ಟ ಸಂಪ್ರದಾಯ ಬೆಳೆದಿದೆ. ಹೀಗೆ ಹಣ, ಅಧಿಕಾರ, ದರ್ಪ, ದೌರ್ಜನ್ಯಗಳು ದೇಶವನ್ನು ಆಳುವಂತಾಗಿದೆ. ಇದರಿಂದಾಗಿ ಭಾರತದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ. ಲೈಂಗಿಕ ದೌರ್ಜನ್ಯ ಮತ್ತು ಸಾಮೂಹಿಕ ಅತ್ಯಾಚಾರದಿಂದಾಗಿ ನಾಗರೀಕ ಸಮಾಜ ತಲೆಯೆತ್ತದಂತಾಗಿದೆ.

        ಇಂದು ಎಲ್ಲವೂ ವ್ಯಾಪರೀಕರಣವಾಗುತ್ತಿದೆ. ಹಣವಿಲ್ಲದೆ ಹೆಣವೂ ಮಿಸುಗಾಡದ ಸ್ಥಿತಿ ಬಂದೊದಗಿದೆ. ನೆಮ್ಮದಿ, ಶಾಂತಿಗಳು ಮರೀಚಿಕೆಯಾಗುತ್ತಿದೆ. ಇದಕ್ಕೆಲ್ಲ ಕಾರಣ ಮನಸ್ಸಿನ ವಿಕೃತಿ. ಈ ವಿಕೃತಿಯನ್ನು ಹೋಗಲಾಡಿಸಲು ಇಂಥ ಧ್ಯಾನ, ಮೌನ, ಪ್ರಾರ್ಥನೆ, ಸಂಸ್ಕೃತಿ, ಚಿಂತನೆಗಳು ಸಹಕಾರಿಯಾಗಿವೆ ಎಂದರು.

       ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯರಾದ ಹೊನ್ನೇಶಪ್ಪ, ಸಂಗಾಪುರ್, ಶಿವಕುಮಾರ್ ಮೊದಲಾದ ಅಧ್ಯಾಪಕರಿದ್ದರು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ನೌಕರರು, ಗ್ರಾಮಸ್ಥರು, ಕಲಾವಿದರು ಮುಂತಾದವರು ಸಾಮೂಹಿಕ ಪ್ರಾರ್ಥನೆ, ಶಿವಮಂತ್ರಲೇಖನ, ಧ್ಯಾನ, ಮೌನದಲ್ಲಿ ಭಾಗವಹಿಸಿದ್ದರು. ಹೆಚ್ ಎಸ್ ನಾಗರಾಜ್ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap