ಎಡ ಪಕ್ಷಗಳಿಂದ ಜಾತ್ಯಾತೀತತೆಯ ಸಮರ್ಥನೆಯ ದಿನ

0
6

ದಾವಣಗೆರೆ

        ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಮಹಾ ಪರಿನಿರ್ವಾಣ ದಿನವನ್ನು ಸಿಪಿಐ ಮತ್ತು ಸಿಪಿಎಂ ಕಾರ್ಯಕರ್ತರು ನಗರದಲ್ಲಿ ಗುರುವಾರ ದೇಶದ ಸಂವಿಧಾನ ಮತ್ತು ಜಾತ್ಯಾತೀತತೆಯ ಸಮರ್ಥನೆಯ ದಿನವನ್ನಾಗಿ ಆಚರಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಸಿಪಿಐ ಮತ್ತು ಸಿಪಿಎಂ ಕಾರ್ಯಕರ್ತರು, ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ, ದಲಿತರ ಮೇಲಿನ ದೌರ್ಜನ್ಯ ನಿಲ್ಲಲಿ, ಸಂವಿಧಾನ ರಕ್ಷಿಸಿ, ಸಾಮಾಜಿಕ ನ್ಯಾಯ ಕಲ್ಪಿಸಿದ ಸಂವಿಧಾನಕ್ಕೆ ಜಯವಾಗಲಿ, ಕೋಮುವಾದಿಗಳಿಗೆ ಧಿಕ್ಕಾರ ಸೇರಿದಂತೆ ಇನ್ನಿತರೆ ಘೋಷಣೆಗಳನ್ನು ಮೊಳಗಿಸಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ, ಬಲ ಪಂಥೀಯ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಜಾತಿ–ಧರ್ಮ, ದೇವರ ಹೆಸರಿನಲ್ಲಿ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿವೆ. ಭಾರತದ ಸಂವಿಧಾನವು ಜಗತ್ತಿನಲ್ಲಿಯೇ ಶ್ರೇಷ್ಠ ಗ್ರಂಥವಾಗಿದೆ. ಇಂತಹ ಸಂವಿಧಾನವನ್ನೇ ಬದಲಾವಣೆ ಮಾಡುವಂತಹ ಹೇಳಿಕೆ ನೀಡುತ್ತಿರುವುದು ನಿಜಕ್ಕೂ ದೇಶದ್ರೋಹದ ಕೆಲಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಸಿಪಿಐ(ಎಂ) ಮುಖಂಡ ಕೆ.ಲಕ್ಷ್ಮೀನಾರಾಯಣ ಭಟ್ ಮಾತನಾಡಿ, ಉತ್ತರ ಪ್ರದೇಶದ ಬುಲಹಂದರದಲ್ಲಿ ಪೊಲೀಸರ ಹತ್ಯೆ ಹಿಂದೆ ಬಲಪಂಥೀಯ ಸಂಘಪರಿವಾರದ ಕೈವಾಡವಿದೆ. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಪ್ರಕರಣದ ಬಗ್ಗೆ ಮೌನ ವಹಿಸಿರುವುದು ಏಕೆ?, ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ ಕಲ್ಪಿಸಿದೆ. ಅಂತಹ ಸಂವಿಧಾನ ವಿರುದ್ಧ ಸಂಘ ಪರಿವಾರದವರು ಮಾತನಾಡುತ್ತಿದ್ದು, ನಾವು ಸುಮ್ಮನೇ ಕೂತರೇ ಸಂವಿಧಾನಕ್ಕೆ ಗಂಡಾಂತರ ಎದುರಾಗಲಿದೆ. ಆದ್ದರಿಂದ ನಮ್ಮ ಸಂವಿಧಾನದ ರಕ್ಷಣೆಗಾಗಿ ಪ್ರತಿಯೊಬ್ಬರೂ ಹೋರಾಡಬೇಕಾದ ಅವಶ್ಯಕತೆ ಇದೆ ಎಂದರು.

        ದೇವದಾಸಿ ಮಹಿಳಾ ಸಂಘಟನೆಯ ಟಿ.ವಿ.ರೇಣುಕಮ್ಮ ಮಾತನಾಡಿ, ಸಂವಿಧಾನವೇ ನಮಗೆ ಪವಿತ್ರ ಗ್ರಂಥವಾಗಿದೆ. ಕೋಮುವಾದಿಗಳು ಜಾತಿ, ಧರ್ಮಗಳ ಹೆಸರಿನಲ್ಲಿ ಗಲಭೆ ಹುಟ್ಟು ಹಾಕುತ್ತಿದ್ದಾರೆ. ರಾಮಮಂದಿರ ಕಟ್ಟುವ ನೆಪದಲ್ಲಿ ದೊಂಬರಾಟ ನಡೆಸುತ್ತಿದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

        ಈ ಸಂದರ್ಭದಲ್ಲಿ ಎಡ ಪಕ್ಷಗಳ ಮುಖಂಡರಾದ ಆನಂದರಾಜ್, ಆವರಗೆರೆ ಚಂದ್ರು, ಆವರಗೆರೆ ವಾಸು, ಇ.ಶ್ರೀನಿವಾಸ್, ಕೆ.ಹೆಚ್.ಆನಂದರಾಜ್, ಶ್ರೀನಿವಾಸಮೂರ್ತಿ, ಜಯಣ್ಣ ಜಾಧವ್, ಸರೋಜಾ, ಉಮಾಪತಿ, ಭೀಮಪ್ಪ, ಸೈಯದ್ ಖಾಜಾಪೀರ್, ತಿಪ್ಪೇಶ್, ಗದಿಗೇಶ್, ರಂಗನಾಥ, ಈರಣ್ಣ, ಭರಮಪ್ಪ, ಬಸಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here