ಕಾಂಗ್ರೆಸ್ ಮೈತ್ರಿಕೂಟ, ಬಿಜೆಪಿ ನಡುವಿನ ಹೋರಾಟಕ್ಕೆ ಅಖಾಡ ಸಜ್ಜು

ಬೆಂಗಳೂರು

        ಮೂರು ಲೋಕಸಭಾ ಹಾಗೂ ಎರಡು ವಿಧಾನ ಸಭಾ ಉಪ ಚುನಾವಣೆಯ ಮತದಾನ ನಾಳೆ ನಡೆಯಲಿದ್ದು, ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟ, ಬಿಜೆಪಿ ನಡುವಿನ ಹೋರಾಟಕ್ಕೆ ಅಖಾಡ ಸಜ್ಜಾಗಿದೆ.

         ಸುಗಮ ಮತದಾನಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿದ್ದು, ಮಂಡ್ಯ, ಶಿವಮೊಗ್ಗ, ಬಳ್ಳಾರಿ ಲೋಕಸಭೆ ಮತ್ತು ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಅಗತ್ಯ ವ್ಯವಸ್ಥೆ ಕೈಗೊಂಡಿದೆ.

        ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಸೂಕ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೊನೆಯ ದಿನ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮನೆ ಮನೆ ಪ್ರಚಾರದಲ್ಲಿ ನಿರತರಾದರು.

       ಎಲ್ಲಾ ಹೋಟೆಲ್,ಲಾಡ್ಜ್‍ಗಳ ಮೇಲೆ ದಾಳಿ ನಡೆಸಿ ಕ್ಷೇತ್ರದ ಹೊರಗಿನ ಜನಪ್ರತಿನಿಧಿಗಳನ್ನು ಹೊರ ಕಳುಹಿಸಲಾಗಿದೆ. ಚುನಾವಣೆ ಮುಗಿಯುವವರೆಗೂ ಮುಖ್ಯಮಂತ್ರಿಯಾದಿಯಾಗಿ ಯಾವುದೇ ಪಕ್ಷದ ಕಾರ್ಯಕರ್ತರಾಗಲಿ, ನಾಯಕರಾಗಲಿ ಕ್ಷೇತ್ರಗಳಿಗೆ ಕಾಲಿಡುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ.

        ಆ ಹಿನ್ನೆಲೆಯಲ್ಲಿ ಕ್ಷೇತ್ರಗಳಲ್ಲಿ ತಪಸಾಣೆ ನಡೆಸುತ್ತಿದ್ದು, ಹಣ, ಹೆಂಡ ಹಂಚಿಕೆಯಾಗದಂತೆ ಮತ್ತು ಮತದಾರರ ಮೇಲೆ ಒತ್ತಡ ತಂತ್ರ ಹೇರದಂತೆ ಎಚ್ಚರಿಕೆವಹಿಸಿದೆ. ಇದಕ್ಕಾಗಿ ಎರಡು-ಮೂರು ತಂಡಗಳಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಪೊಲೀಸ್ ಸರ್ಪಗಾವಲಿನಲ್ಲಿ ಚುನಾವಣೆ ನಡೆಸಲು ಆಯೋಗ ಸಜ್ಜಾಗಿದೆ. ಮತದಾನ ನಡೆಯುವ ಎಲ್ಲಾ ಕ್ಷೇತ್ರಗಳಲ್ಲು 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿಗಳು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

      ಇದಲ್ಲದೆ,ರಾಮನಗರದಲ್ಲಿ ಬಿಜೆಪಿಗೆ ಅಭ್ಯರ್ಥಿ ಕೈಕೊಟ್ಟು ಕಣದಿಂದ ಹಿಂದೆ ಸರಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದ ಬಿಜೆಪಿ ಕಾರ್ಯಕರ್ತರು ಹೊಸ ಮಾದರಿಯಲ್ಲಿ ಪ್ರಚಾರ ನಡೆಸಿದರು. ಚುನಾವಣಾ ಕರಪತ್ರದಲ್ಲಿ ಅಭ್ಯರ್ಥಿ ಫೋಟೋ, ಹೆಸರನ್ನು ತೆಗೆದುಹಾಕಿದರು.

       ಅಭ್ಯರ್ಥಿ ಫೋಟೋವಿದ್ದ ಜಾಗದಲ್ಲಿ ಪಕ್ಷದ ಚಿಹ್ನೆ ಕಮಲದ ಗುರುತು ಮುದ್ರಿಸಲಾಗಿದೆ. ಅಭ್ಯರ್ಥಿ ಹೆಸರಿದ್ದ ಜಾಗದಲ್ಲಿ `ದೇಶ ಮೊದಲು’ ಎಂಬ ಬರಹವನ್ನು ಬರೆಯಲಾಗಿದೆ.

        ಇದೇ ವೇಳೆ ಶಿವಮೊಗ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಮತದಾರರಿಗೆ ಹಣದ ಆಮಿಷವೊಡ್ಡುತ್ತಿರುವ ವಿಡಿಯೋ ವೈರಲ್ ಆಗಿದೆ.

     ಬಿಜೆಪಿಯವರು ಎನ್ನಲಾದ ಕೆಲವರು ಮತದಾರರಿಗೆ ಹಣ ಹಂಚುವಾಗ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ದಾಳಿ ನಡೆಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದಲ್ಲಿ ನಡೆದಿದೆ.

       ಶಿವಮೊಗ್ಗದ ವಿನೋಬನಗರದಲ್ಲಿರುವ ಕಲ್ಲಹಳ್ಳಿಯ ಬಡಾವಣೆಯಲ್ಲಿ ಬೆಳ್ಳಂಬೆಳಗ್ಗೆ ಮನೆಯೊಂದರಲ್ಲಿ ಹಣ ಹಂಚಲಾಗುತ್ತಿತ್ತು. ಕಲ್ಲಹಳ್ಳಿಯ ಮನೆಯಲ್ಲಿ ಮಹಿಳಾ ಸಂಘದವರಿಗೆ ವೋಟರ್ ಲಿಸ್ಟ್ ಪ್ರಕಾರ ಮಹಿಳೆಯರಿಗೆ 500 ರೂ. ನೀಡಲಾಗಿದೆ.

      ಹಣ ಹಂಚುವ ಖಚಿತ ಮಾಹಿತಿ ಮೇರೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ದಾಳಿ ನಡೆಸಿ ಮತದಾರರಿಗೆ ಹಂಚಲು ತಂದಿದ್ದ 1.50 ಲಕ್ಷ ರೂ.ಗಳನ್ನು ವಶಕ್ಕೆ ಪಡೆದು ವಿನೋಬನಗರ ಪೊಲೀಸರಿಗೆ ಒಪ್ಪಿಸಿದರು.ಇದಲ್ಲದೆ,ಬಳ್ಳಾರಿಯಲ್ಲೂ ಕೂಡ ಕಾಂಚಾಣದ ಸದ್ದು ಕೇಳಿ ಬಂದಿದ್ದು,ಆ ಕ್ಷೇತ್ರದಲ್ಲೂ ಹಣ ಮದ್ಯ ಹಂಚಿಕೆ ಆರೋಪ ಕೇಳಿ ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap