ಜೆಸಿಟಿಯು ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ದಾವಣಗೆರೆ:

       ಎಲ್ಲಾ ಕಾರ್ಮಿಕರಿಗೂ ಕನಿಷ್ಟ ವೇತನವಾಗಿ 18 ಸಾವಿರ ರೂ. ನಿಗದಿ ಮಾಡಬೇಕು, ರೈತರಿಗೆ ವೈಜ್ಞಾನಿಕ ಬೆಲೆ ನೀಡುವ ನಿಟ್ಟಿನಲ್ಲಿ ಸ್ವಾಮಿನಾಥನ್ ವರದಿ ಜಾರಿ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ರಾಷ್ಟ್ರವ್ಯಾಪಿ ಕರೆ ನೀಡಿದ್ದ ಮುಷ್ಕರಕ್ಕೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಮುಖ ಸಂಘಟನೆಗಳು:

      ಮುಷ್ಕರದ ಹಿನ್ನೆಲೆಯಲ್ಲಿ ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಐಎನ್‍ಟಿಯುಸಿ, ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘ, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್, ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘಟನೆ, ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್, ಅಖಿಲ ಕರ್ನಾಟಕ ಗೃಹ ಕಾರ್ಮಿಕರ ಸಂಘಟನೆ, ಕರ್ನಾಟಕ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ, ಆಂಜನೇಯ ಮಿಲ್ ಎಂಪ್ಲಾಯಿಸ್ ಅಸೋಸಿಯೇಷನ್, ಫುಟ್‍ಪಾತ್ ವ್ಯಾಪಾರಿಗಳ ಸಂಘ, ಆಶಾ ಕಾರ್ಯಕರ್ತೆಯರ ಸಂಘಟನೆ, ಶ್ರೀವಿಘ್ನೇಶ್ವರ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಹಮಾಲರ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ದೇವದಾಸಿ ಮಹಿಳಾ ವಿಮೋಚನಾ ಸಂಘ, ದಲಿತ ಹಕ್ಕುಗಳ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರರು ಕಾರ್ಮಿಕರು ಜಮಾಯಿಸಿದ್ದರು.

ಬಹಿರಂಗ ಸಭೆ:

         ಇಲ್ಲಿಂದ ಜೆಸಿಟಿಯು ಮುಖಂಡರಾದ ಹೆಚ್.ಕೆ.ರಾಮಚಂದ್ರಪ್ಪ, ಕೆ.ಲಕ್ಷ್ಮೀನಾರಾಯಣ ಭಟ್, ಕೈದಾಳೆ ಮಂಜುನಾಥ್, ಆರ್.ಎಸ್.ತಿಪ್ಪೇಸ್ವಾಮಿ ಸೇರಿದಂತೆ ಇತರರ ನಾಯಕತ್ವದಲ್ಲಿ ಬೃಹತ್ ಮೆರವಣಿಗೆ ಹೊರಟ ಕಾರ್ಮಿಕರು, ಹೊರಗುತ್ತಿಗೆ ನೌಕರರು ಗಾಂಧಿ ವೃತ್ತ ತಲುಪಿ ಮಾನವ ಸರಪಳಿ ರಚಿಸಿ ಕೆಲ ಕಾಲ ರಸ್ತೆ ತಡೆ ನಡೆಸಿ, ನಂತರ ಪಿಬಿ ರಸ್ತೆಯ ಮೂಲಕ ಪಾಲಿಕೆ ಆವರಣಕ್ಕೆ ತೆರಳಿ ಬಹಿರಂಗ ಸಭೆ ನಡೆಸಿ, ಕೇಂದ್ರ ಸರ್ಕಾರದ ರೈತ ಕಾರ್ಮಿಕ ನೀತಿಗಳ ವಿರುದ್ಧ ಕಿಡಿಕಾರಿದರು.

ರಸ್ತೆಗಿಳಿಯದ ಕೆಎಸ್‍ಆರ್‍ಟಿಸಿ:

        ಮುಷ್ಕರಕ್ಕೆ ಕೆಎಸ್‍ಆರ್‍ಟಿಸಿ ನೌಕರರು ಬೆಂಬಲ ವ್ಯಕ್ತಪಡಿಸಿದ್ದರಿಂದ ಸರ್ಕಾರಿ ಬಸ್‍ಗಳು ರಸ್ತೆಗೆ ಇಳಿಯಲಿಲ್ಲ. ಹೀಗಾಗಿ ಸರ್ಕಾರಿ ಬಸ್ಸುಗಳ ಸೇವೆ ಮಾತ್ರ ಇರುವಂತಹ ಮಾರ್ಗಗಳಿಗೆ ಬಸ್ಸು ಸಂಚಾರವಿಲ್ಲದೇ ಜನರು ಪರದಾಡಿದರು. ಆದರೆ ಖಾಸಗಿ ಸಾರಿಗೆ ಸೇವೆ ಎಂದಿನಂತೆ ಲಭ್ಯವಿತ್ತು. ಹೀಗಾಗಿ ಪರಸ್ಥಳಗಳಿಗೆ ಹೋಗುವ ಪ್ರಯಾಣಿಕರು ಖಾಸಗಿ ಬಸ್‍ಗಳ ಮೊರೆ ಹೊದರು.

ದುಬಾರಿ ಆಟೋ ಸವಾರಿ:

         ಆಟೋ ಸಂಚಾರ ಎಂದಿನಂತೆ ಮುಂದು ವರೆದಿತ್ತು. ಆದರೆ, ಮುಷ್ಕರದ ನೆಪದಲ್ಲಿ ಆಟೋ ರಿಕ್ಷಾ, ಅಪೆ ವಾಹನಗಳ ಚಾಲಕರು ಒಂದಿಷ್ಟು ಹೆಚ್ಚಿನ ಬಾಡಿಗೆಯನ್ನೇ ಕೇಳುತ್ತಿದ್ದುದು, ಜನರು ಅಷ್ಟೊಂದು ಹಣ ಯಾಕೆಂದು ಪ್ರಶ್ನಿಸುತ್ತಾ ಆಟೋ ಹತ್ತುತ್ತಿದ್ದುದು ಸಾಮಾನ್ಯವಾಗಿತ್ತು.

ಬ್ಯಾಂಕ್ ಸೇವೆ ವ್ಯತ್ಯಯ:

          ಎಸ್‍ಬಿಐ, ವಿಜಯಾ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಐಡಿಬಿಐ, ಕಾರ್ಪೋರೇಷನ್, ಸಿಂಡಿಕೇಟ್, ಕರ್ನಾಟಕ ಬ್ಯಾಂಕ್ ಎಂದಿನಂತೆ ತೆರೆದಿದ್ದರೂ, ಬ್ಯಾಂಕ್ ನೌಕರರ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ, ಮುಷ್ಕರದಲ್ಲಿ ಭಾಗವಹಿಸಿದ್ದರ ಪರಿಣಾಮವಾಗಿ ಬ್ಯಾಂಕುಗಳಲ್ಲಿ ನೌಕರರು ಇಲ್ಲದ ಕಾರಣ ಬ್ಯಾಂಕ್ ಗ್ರಾಹಕರಿಗೆ ಎಂದಿನಂತೆ ಸೇವೆ ಸಿಗದೇ, ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರಲ್ಲೂ ಕೆನರಾ ಬ್ಯಾಂಕ್‍ನ ಎಲ್ಲಾ ಶಾಖೆಗಳನ್ನು ಬಂದ್ ಮಾಡಿ, ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಇನ್ನೂ ಅಂಚೆ ಇಲಾಖೆಯ ಕಚೇರಿ ಎಂದಿನಂತೆ ತರೆದಿತ್ತು. ಆದರೆ, ನೌಕರರೆಲ್ಲರೂ ಹೊರಗಡೆ ಮುಷ್ಕರ ಬೆಂಬಲಿಸಿ ಹರತಾಳ ನಡೆಸುತ್ತಿದ್ದರೆ, ಪೋಸ್ಟ್ ಮಾಸ್ಟರ್ ಕೆಂಪಲಕ್ಕಮ್ಮ ಮಾತ್ರ ಕಚೇರಿಯ ಒಳಗೆ ಕೂತು ಕಾರ್ಯನಿರ್ವಹಿಸಿದರು ಎಂಬುದಾಗಿ ಮೂಲಗಳು ತಿಳಿಸಿವೆ.

ಶಾಲೆಗಳಿಗೆ ರಜೆ:

         ಮುಷ್ಕರದ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಸರ್ಕಾರಿ, ಅನುದಾನಿತ, ಖಾಸಗಿ ಸೇರಿದಂತೆ ಶಾಲೆಗಳಿಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ರಜೆ ಘೋಷಿಸಿದ್ದರಿಂದ ಮಕ್ಕಳು ಮನೆಯ ಬಳಿ ಆಟವಾಡಿಕೊಂಡು ದಿನ ಕಳೆದರು. ದಾವಣಗೆರೆ ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ರಸಾಯನಶಾಸ ವಿಭಾಗದ ತೃತೀಯ ಸೆಮಿಸ್ಟರ್ ಪರೀಕ್ಷೆ, ಬಿಇಡಿ ಪರೀಕ್ಷೆಯನ್ನು ಬಂದ್ ಹಿನ್ನೆಲೆಯಲ್ಲಿ ವಿವಿ ಮುಂದೂಡಿತ್ತು. ಕಾಲೇಜುಗಳಿಗೆ ರಜೆ ಘೋಷಿಸಿದ್ದಿಲ್ಲವಾದರೂ ಹಾಜರಾತಿ ಪ್ರಮಾಣ ಕಡಿಮೆ ಇತ್ತು.

ಎಂದಿನಂತೆ ವಹಿವಾಟು:

         ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರದಿಂದಾಗಿ ನಗರದಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿತ್ತು. ಆದರೆ, ಕಾರ್ಮಿಕ ಸಂಘಟನೆಗಳು ನಾವು ಮುಷ್ಕರಕ್ಕೆ ಮಾತ್ರ ಕರೆ ನೀಡಿದ್ದೇವೆ. ಬಂದ್‍ಗೆ ಅಲ್ಲ. ನಾವು ಬಂದ್ ಮಾಡಿಸುವುದಿಲ್ಲ. ಮನಸ್ಸಿದ್ದವರು ಬಂದ್ ಮಾಡಿಕೊಂಡು ಬೇಕಾದರೆ, ಮುಷ್ಕರಕ್ಕೆ ಬೆಂಬಲ ನೀಡಬಹುದು ಎಂಬುದಾಗಿ ಹೇಳಿ ಪ್ರತಿಪಾದಿಸಿ, ಕೇವಲ ಹರತಾಳ ನಡೆಸಿದ್ದರಿಂದ ಎಂದಿನಂತೆಯೇ ಹೂವಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆಯಲ್ಲಿ ವಹಿವಾಟು ಸಾಗಿತ್ತು.
ಇನ್ನೂ ಎಪಿಎಂಸಿ ಮಾರುಕಟ್ಟೆಯಲ್ಲೂ ಯಾವುದೇ ರೀತಿಯ ವ್ಯಾಪಾರ ವಹಿವಾಟಿಗೆ ತೊಂದರೆಯಾಗಲಿಲ್ಲ. ಅಂಗಡಿ, ಮುಂಗಟ್ಟುಗಳು, ಹೊಟೆಲ್, ಬೇಕರಿ, ಬಾರ್ ಅಂಡ್ ರೆಸ್ಟೋರೆಂಟ್, ಪೆಟ್ರೋಲ್ ಬಂಕ್, ಔಷಧಿ ಅಂಗಡಿಗಳು, ರಾಜ್ಯ, ಕೇಂದ್ರ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಹೀಗಾಗಿ ಎಂದಿನಂತೆ ಜನ ಜೀವನ ಸಹಜವಾಗಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap