ನಂಬರ್ 2 ಕೊಬ್ಬರಿ ವ್ಯಾಪಾರ ತಿಪಟೂರು ಕೊಬ್ಬರಿಗೆ ಅಪಮಾನ : ಜಯೇಶ್ ಮೆಹ್ತಾ

ತಿಪಟೂರು

       ಕಳೆದ ಕೆಲವುದಿನಗಳಿಂದ ದೃಶ್ಯಮಾಧ್ಯಮ ಮತ್ತು ಕೆಲವು ಪತ್ರಿಕೆಗಳಲ್ಲಿ ಬರುತ್ತಿರುವ ತಿಪಟೂರು ಕೊಬ್ಬರಿ ದೋಖಾ ಎಂಬ ಸುದ್ದಿಯಿಂದ ಇಂದು ತಿಪಟೂರು ಕೊಬ್ಬರಿಗೆ ಅಪಮಾನವಾಗುತ್ತಿದೆ ಎಂದು ಜಯೇಶ್ ಮೆಹ್ತಾ ಆರೋಪಿಸಿದರು.

        ನಗರದ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ತಿಪಟೂರು ಕೊಬ್ಬರಿ ವರ್ತಕರ ಸಂಘದಿಂದ ಕರೆದಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಕಾರ್ಯದರ್ಶಿ ಜಯೇಶ್ ಮೆಹ್ತಾ ಇಂದು ನಂಬರ್ 2 ಕೊಬ್ಬರಿ ವ್ಯಾಪಾರದಿಂದ ತಿಪಟೂರಿನ ಎ.ಪಿ.ಎಂ.ಸಿ, ರವಾನೆದಾರರು ಹಾಗೂ ದಲ್ಲಾಳರಿಗೆ ಮತ್ತು ಕೊಬ್ಬರಿಗೆ ಅಪಮಾನವಾಗುತ್ತಿದ್ದು ಮುಂದಿನ ದಿನಗಳಲ್ಲಿ ಏಷ್ಯಾದ ಕೊಬ್ಬರಿ ಮಾರುಕಟ್ಟೆಗಳಲ್ಲೇ ದೊಡ್ಡದಾದ ತಿಪಟೂರು ಕೊಬ್ಬರಿ ಮಾರುಕಟ್ಟೆಯನ್ನು ಮುಚ್ಚಬೇಕಾಗುತ್ತದೆಂದು ವಿಷಾದ ವ್ಯಕ್ತಪಡಿಸಿದರು.

         ಟಿ.ವಿ ಮತ್ತು ಪತ್ರಿಕೆಗಳಲ್ಲಿ ಕೊಬ್ಬರಿಯನ್ನು ಪರವಾನಗಿ ಇಲ್ಲದೆ ಕಳುಹಿಸುತ್ತಿರುವ ವಿಷಯ ಬಂದಿದ್ದು ಸರಿ. ಆದರೆ ಈ ಎಲ್ಲಾ ಗಾಡಿಗಳು ತೆರಿಗೆಯನ್ನು ವಂಚಿಸಿ ಮಾರುಕಟ್ಟೆಯ ಒಳಗೆ ಬಾರದಂತೆ ಹೊರಗಡೆಯಿಂದ ಅಂದರೆ ಚೇಳೂರು, ಗುಬ್ಬಿ, ನಿಟ್ಟೂರು, ಕಡಬ, ಸಿ.ಎನ್.ಹಳ್ಳಿ, ತುರುವೇಕೆರೆ, ಕೆ.ಬಿ.ಕ್ರಾಸ್, ಅರಸೀಕೆರೆ, ಗಂಡಿಸಿ, ಬೆಳ್ಳೂರು, ಮಾಯಸಂದ್ರ, ಯಡಿಯೂರು, ನಾಗಮಂಗಲ, ಹಿರಿಸಾವೆ ಮುಂತಾದ ಕಡೆಗಳಲ್ಲಿ ತಿಪಟೂರು ಕೊಬ್ಬರಿ ಎಂಬ ನಕಲಿ ಚೀಲಗಳನ್ನು ತಯಾರಿಸಿ ಅವುಗಳಲ್ಲಿ ಯಾವುದೇ ತೆರಿಗೆ ಕಟ್ಟದೆ ರೈತರಿಗೆ ಹೆಚ್ಚಿನ ಹಣದ ಆಮಿಷ ತೋರಿಸಿ ತೆರಿಗೆ ವಂಚಿಸುತ್ತಿದ್ದಾರೆ.

         ಇದು ಎಲ್ಲಾ ಗೊತ್ತಿದ್ದರು ಎ.ಪಿ.ಎಂ.ಸಿ ಅಧಿಕಾರಿಗಳು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಬೇಜವಾಬ್ದಾರಿತನದಿಂದ ನಮಗೆ 27 ಜನರ ಸಿಬ್ಬಂದಿ ಇರಬೇಕಿತ್ತು. ಆದರೆ ಕೇವಲ ನಾವು 5 ಜನರು ಕಾರ್ಯನಿರ್ವಹಿಸುತ್ತಿದ್ದು, ಆದ್ದರಿಂದ ಸರಿಯಾದ ರೀತಿಯಲ್ಲಿ ಕೆಲಸನಿರ್ವಹಿಸಲು ಸಾಧ್ಯವಾಗುತ್ತಿಲ್ಲವೆಂದು ಹೇಳಿ ತಮ್ಮ ಕರ್ತವ್ಯದಿಂದ ಜಾರಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಜೊತೆಗೆ ವಾಣಿಜ್ಯ ತೆರಿಗೆ ಇಲಾಖೆಯು ಎಲ್ಲಾ ಗೊತ್ತಿದ್ದರೂ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

       ಇದರ ಮಧ್ಯೆಯೂ ನಾವಿಂದು 2017-18ರಲ್ಲಿ 14 ಕೋಟಿ ಮತ್ತು 2018-19ನೇ ಸಾಲಿನಲ್ಲಿ ನವಂಬರ್ ಅಂತ್ಯದಲ್ಲೇ 10 ಕೋಟಿಯಷ್ಟು ಮಾರುಕಟ್ಟೆ ಶುಲ್ಕ (ಸೆಸ್) ತಿಪಟೂರು ಎ.ಪಿ.ಎಂ.ಸಿಗೆ ಸಂದಾಯವಾಗಿದೆ.

         ಜಿ.ಎಸ್.ಟಿ ಬಂದ ಮೇಲೆ ಕದ್ದಮಾಲು ಸಾಗಿಸುವವರಿಗೆ ಅನುಕೂಲವಾಗುವಂತೆ ಎಲ್ಲಾ ಕಡೆ ಚೆಕ್‍ಪೋಸ್ಟ್‍ಗಳನ್ನು ತೆಗೆದಿರುತ್ತಾರೆ. ಬಿಲ್ ಮಾಡದಿದ್ದರೆ ಒಂದು ಲಾರಿಗೆ ಸುಮಾರು 1.25ಲಕ್ಷ ಉಳಿಯುತ್ತದೆ. ಇದರಲ್ಲಿ ಕೆಲವು ಕಮಿಷನ್ ಏಜೆಂಟರುಗಳು 50 ಸಾವಿರವನ್ನು ತೆಗೆದುಕೊಂಡು ಲಾರಿಗಳನ್ನು ಹೇಳಿದ ಸ್ಥಳಗಳಿಗೆ ಸೇರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆಬೆಲೆ ಬಿಲ್‍ಮಾಡುವ ದಂಧೆಯು ಅವ್ಯಾಹತವಾಗಿ ನಡೆಯುತ್ತಿದೆ ಎಂದು ವರ್ತಕರ ಸಂಘದ ಅದ್ಯಕ್ಷ ಸೂರ್ಯಪ್ರಕಾಶ್ ತಿಳಿಸಿದರು.

         ಬಸವರಾಜು ಮಾತನಾಡುತ್ತ ಬಿಲ್ ಟ್ರೇಡಿಂಗ್ ಹೆಸರಿನಲ್ಲಿ ವರ್ತಕರಿಗೆ ಕಮಿಷನ್ ಆಸೆ ತೋರಿಸಿ ಸರ್ಕಾರಕ್ಕೆ ಸೇರಬೇಕಾದ ತೆರಿಗೆಹಣವನ್ನು ವಂಚಿಸುತ್ತಿದ್ದಾರೆ. ಎಲ್ಲಾ ಗೊತ್ತಿರುವ ವಾಣಿಜ್ಯ ತೆರಿಗೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲವೆಂದು ವಿಷಾದಿಸಿದರು.

         ವರ್ತಕರಾದ ಪ್ರಭುದೇವ್ ಮಾತನಾಡಿ ತೆಂಗಿಗೆ ಇಲ್ಲದೆ ತೆರಿಗೆ ನಮ್ಮ ಕೊಬ್ಬರಿಗೆ ಏಕೆ ಎಂದರು. ಹೊರರಾಜ್ಯಗಳಲ್ಲಿ ಕೊಬ್ಬರಿಯನ್ನು ಒಣಹಣ್ಣು ಮತ್ತು ತರಕಾರಿಗೆ ಸೇರಿಸಿ ಯಾವುದೇ ತೆರಿಗೆಯನ್ನು ಸ್ವೀಕರಿಸುತ್ತಿಲ್ಲ. ಹೀಗಿರುವಾಗ ಕೊಬ್ಬರಿಗೆ ಮಾತ್ರ 1.5% ಎ.ಪಿ.ಎಂ.ಸಿ ಸೆಸ್ ಮತು 5% ಜಿಎಸ್.ಟಿ. ವಿಧಿಸುತ್ತಿರುವುದರಿಂದ ಕೆಲವು ವರ್ತಕರು ಕಳ್ಳದಾರಿಯನ್ನು ಹಿಡಿಯುತ್ತಿದ್ದಾರೆ. ಆದ್ದರಿಂದ ಕೊಬ್ಬರಿಯ ಮೇಲೆ ಇರುವ ಜಿ.ಎಸ್.ಟಿಯನ್ನು ರದ್ದುಪಡಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆಂದು ತಿಳಿಸಿದರು.

         ಇದು ಹೀಗೆ ಮುಂದುವರೆದರೆ ನಮ್ಮ ತಿಪಟೂರು ಕೊಬ್ಬರಿಗೆ ಇರುವ ಬೇಡಿಕೆಯು ಕುಸಿದು ಮುಂದೆ ಮಾರುಕಟ್ಟೆಯನ್ನು ಮುಚ್ಚುವ ಹಂತಕ್ಕೆ ತಲುಪುತ್ತದೆ. ಆದ್ದರಿಂದ ಇದು ನಮ್ಮ ಮತ್ತು ಕೊಬ್ಬರಿಯ ಉಳಿವಿನ ಪ್ರಶ್ನೆಯಾಗಿದ್ದು ಇದರ ಬಗ್ಗೆ ಸರ್ಕಾರ ಸೂಕ್ತ ಕ್ರಮವಹಿಸದಿದ್ದರೆ, ಉಗ್ರವಾದ ಹೋರಾಟವನ್ನು ಮಾಡಲಾಗುವುದೆಂದು ಎಲ್ಲಾ ವರ್ತಕರು, ರವಾನೆದಾರು ಮತ್ತು ದಲ್ಲಾರು ಎಚ್ಚರಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap