ಬಿಜೆಪಿ ಕಾರ್ಯಕರ್ತರ ಬೃಹತ್ ಪ್ರತಿಭಟನೆ

0
10

ಬೆಂಗಳೂರು

        ರಾಜ್ಯ ಸರ್ಕಾರವು ಟಿಪ್ಪು ಜಯಂತಿ ಆಚರಿಸುವುದನ್ನು ವಿರೋಧಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು..

      ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ಮುಖಂಡ ಹಾಗೂ ಶಾಸಕ ಆರ್. ಅಶೋಕ್ ನೇತೃತ್ವದಲ್ಲಿ ನಗರದ ಬಿಜೆಪಿ ಶಾಸಕರು ಬಿಬಿಎಂಪಿ ಬಿಜೆಪಿ ಸದಸ್ಯರು ಪಕ್ಷದ ಮುಖಂಡರು ನೂರಾರು ಕಾರ್ಯಕರ್ತರು ಟಿಪ್ಪು ಜಯಂತಿ ಆಚರಿಸುವುದನ್ನು ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.

      ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ಟಿಪ್ಪು ಒಬ್ಬ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಹಿಂದೂ ಧರ್ಮದ ವಿರೋಧಿ ಕಳೆದ 200 ವರ್ಷಗಳಿಂದಲೂ ಇಂತಹ ದೇಶ ದ್ರೋಹಿಯ ಜಯಂತಿ ಆಚರಿಸಲು ಹಿಂದೇಟು ಹಾಕುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಇಂದು ಓಟ್ ಬ್ಯಾಂಕ್‍ಗಾಗಿ ಟಿಪ್ಪು ಜಯಂತಿ ಆಚರಿಸಲು ಮುಂದಾಗಿದೆ ಎಂದರು. 

        ಯಾರಿಗೂ ಬೇಡವಾಗಿರುವ ಟಿಪ್ಪು ಜಯಂತಿ ಆಚರಿಸಿದರೆ ಮೈತ್ರಿ ಸರ್ಕಾರ ಬಹಳ ದಿನ ಉಳಿಯಲ್ಲ,ಮುಖ್ಯಮಂತ್ರಿಗಳು ಆಚರಣೆಯಲ್ಲಿ ಪಾಲ್ಗೊಂಡರೆ ಹಾಳಾಗಿ ಹೋಗ್ತಾರೆ ಎಂದು ಆರ್.ಅಶೋಕ್ ಎಚ್ಚರಿಕೆ ನೀಡಿದರು

        ಟಿಪ್ಪು ಜಯಂತಿ ಆಚರಿಸಲು ಮುಂದಾದ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋತು ಮೂಲೆಗುಂಪಾಗಿದ್ದಾರೆ. ಟಿಪ್ಪು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದ ಅಂಜಯ್ ಖಾನ್ ಅಗ್ನಿ ಅನಾಹುತಕ್ಕೆ ಈಡಾಗುವುದರೊಂದಿಗೆ ನೂರಾರು ಕಾರ್ಮಿಕರ ಮರಣಕ್ಕೆ ಕಾರಣರಾಗಿದ್ದಾರೆ. ಬಿಜೆಪಿ ಎಚ್ಚರಿಕೆ ಕಡೆಗಣಿಸಿ ಸಮ್ಮಿಶ್ರ ಸರ್ಕಾರ ದೇಶದ್ರೋಹಿ ಟಿಪ್ಪು ಜಯಂತಿ ಆಚರಿಸಿದರೆ ಮನೆಗೆ ಹೋಗುವುದು ಗ್ಯಾರಂಟಿ ಎಂದು ಎಚ್ಚರಿಸಿದರು.

       ಕೊಡಗಿನಲ್ಲಿ ಮೋಸದಿಂದ ಲಕ್ಷಾಂತರ ಹಿಂದೂಗಳ ನರಮೇದ ನಡೆಸಿದ ಟಿಪ್ಪು ಒಬ್ಬ ಹೇಡಿ. ಬ್ರಿಟೀಷರ ವಿರುದ್ಧ ಯುದ್ಧ ಮಾಡಲು ಹೆದರಿ ಜೀವ ಉಳಿಸಿಕೊಳ್ಳಲು ಪರಾರಿಯಾಗಿದ್ದ ಹೇಡಿ. ಆತ ಮೈಸೂರು ಹುಲಿ ಅಲ್ಲ, ಇಲಿ ಎಂದು ತೀವ್ರ ವಾಗ್ದಾಳಿ ನಡೆಸಿದರು.

      ಟಿಪ್ಪುವಿನ ಇತಿಹಾಸ ರಕ್ತದ ಇತಿಹಾಸ. ಹಿಂದೂ ಧರ್ಮ ವಿರೋಧಿ ಇತಿಹಾಸ. ಟಿಪ್ಪು ಸತ್ತಿದ್ದು 1797ರಲ್ಲಿ, ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದ್ದು 1857ರಲ್ಲಿ, ಇತಿಹಾಸ ತಿಳಿಯದ ಕಾಂಗ್ರೆಸ್‍ನವರು ಟಿಪ್ಪು ಸುಲ್ತಾನ್ ಬ್ರಿಟೀಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಎಂದು ಬಣ್ಣಿಸುತ್ತಿರುವುದು ವೋಟಿಗಲ್ಲದೆ ಮತ್ಯಾಕೆ ಎಂದು ಪ್ರಶ್ನಿಸಿದರು.

      ಸಮ್ಮಿಶ್ರ ಸರ್ಕಾರಕ್ಕೆ ಆಸಕ್ತಿ ಇದ್ದರೆ ದೇಶದ್ರೋಹಿ ಟಿಪ್ಪು ಆಚರಣೆ ಕೈಬಿಟ್ಟು ಶಿಶಿನಾಳ ಷರೀಫರ, ಅಬ್ದುಲ್ ಕಲಾಂರ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ನಾಯಕರ ಜಯಂತಿಯನ್ನು ಆಚರಿಸಲಿ ಎಂದ ಅವರು, ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಭಯದಿಂದ ಸಿಎಂ ಕುಮಾರಸ್ವಾಮಿ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎಂದು ವ್ಯಂಗ್ಯವಾಡಿದರು.

      ಪ್ರತಿಭಟನೆಯಲ್ಲಿ ಮಾಜಿ ಶಾಸಕ ಮುನಿರಾಜು, ಬಿಬಿಎಂಪಿ ಕೌನ್ಸಿಲರ್ ಉಮೇಶ್ ಶೆಟ್ಟಿ, ಬಿಬಿಎಂಪಿ ಮಾಜಿ ಉಪಮೇಯರ್ ಶ್ರೀನಿವಾಸ್, ಎಸ್.ಕೆ. ನಟರಾಜು, ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ. ರಾಮು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here