ನಿದ್ರಾ ಪ್ರತಿಭಟನೆ ಮಾಡಿದ ವಾಟಾಳ್

0
10

ಬೆಳಗಾವಿ:

           ಎರಡು ವಾರಗಳ ಕಾಲ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭಕ್ಕೆ ಎರಡು ದಿನಗಳ ಮುನ್ನವೇ ಕನ್ನಡ ಚಳುವಳಿ ನಾಯಕ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ಇಂದು ತಮ್ಮ ಬೆಂಬಲಿಗರೊಂದಿಗೆ ಉತ್ತರ ಕರ್ನಾಟಕ ಭಾಗದ ನಾಯಕರಿಗೆ ರಾಜ್ಯ ಸರ್ಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುವರ್ಣ ವಿಧಾನ ಸೌಧದ ಎದುರು ಕೆಲಕಾಲ ಮಲಗುವ ಮೂಲಕ ವಿಶಿಷ್ಟ ರೀತಿಯಲ್ಲಿ ‘ನಿದ್ರಾ ಪ್ರತಿಭಟನೆ’ ನಡೆಸಿದರು.

          ರಾಜ್ಯದಲ್ಲಿ ಈಗ ಅಧಿಕಾರವೆಲ್ಲ ದಕ್ಷಿಣ ಭಾಗದ ಜಿಲ್ಲೆಗಳನ್ನು ಕೇಂದ್ರೀಕರಿಸಿದೆ. ಇದರಿಂದ ಉಂಟಾಗಿರುವ ಪ್ರಾದೇಶಿಕ ಅಸಮತೋಲನ ನಿವಾರಿಸಲು ಉತ್ತರ ಕರ್ನಾಟಕ ಭಾಗದ ನಾಯಕರೊಬ್ಬರನ್ನು ಕೂಡಲೇ ಎರಡನೇ ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕು, ಅವರಿಗೆ ಈ ಭಾಗದ ಹೊಣೆಯನ್ನು ವಹಿಸಬೇಕು ಎಂದು ಆಗ್ರಹಿಸಿದರು.

            ರಾಜ್ಯ ಈಗ ಮುಖ್ಯಮಂತ್ರಿ ಹಾಗೂ ಒಬ್ಬ ಉಪಮುಖ್ಯಮಂತ್ರಿಯನ್ನು ಹೊಂದಿದ್ದು ಇವರಿಬ್ಬರೂ ದಕ್ಷಿಣ ಕರ್ನಾಟಕದ ಹಳೇ ಮೈಸೂರು ಪ್ರದೇಶದವರಾಗಿದ್ದಾರೆ. ಎರಡನೇ ಉಪ ಮುಖ್ಯಮಂತ್ರಿ ಹುದ್ದೆಗೆ ಉತ್ತರ ಕರ್ನಾಟಕ ನಾಯಕರೊಬ್ಬರನ್ನು ನೇಮಿಸುವ ಮೂಲಕ ಈ ಭಾಗದಲ್ಲಿ ಮೂಡಿರುವ ಅಸಮಾಧಾನ ನಿವಾರಿಸಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಒಳಗೊಂಡ ಉತ್ತರ ಕರ್ನಾಟಕ ಭಾಗ, ರಾಜ್ಯ ಸರ್ಕಾರದ ಮಲತಾಯಿ ಧೋರಣೆಯಿಂದ ನಿರಂತರ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದ್ದು, ಇದರಿಂದ ಈ ಎರಡು ಪ್ರದೇಶಗಳು ಅಭಿವೃದ್ಧಿಯಿಂದ ವಂಚಿತವಾಗಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.

          ಪ್ರತಿಭಟನೆಯ ನಂತರ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದುಕೊಂಡು ನಗರದ ಹೊರವಲಯದಲ್ಲಿ ಬಿಡುಗಡೆಗೊಳಿಸಿದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here