ಸುಪ್ರೀಂ ಕೋರ್ಟ್ ಆದೇಶದಿಂದ ಪರಂಪರೆಗೆ ಧಕ್ಕೆ

ಬೆಂಗಳೂರು

     ಶ್ರೀ ಕ್ಷೇತ್ರ ಶಬರಿಮಲ ದೇವಸ್ಥಾನಕ್ಕೆ 10 ರಿಂದ 50 ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದನ್ನು ಪ್ರತಿಭಟಿಸಿ ಅಯ್ಯಪ್ಪ ಟೆಂಪಲ್ ಅಸೋಸಿಯೇಷನ್‍ನಿಂದ ಭಾನುವಾರ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.

       ಸುಪ್ರೀಂ ಕೋರ್ಟ್ ಆದೇಶ ಪ್ರಶ್ನಿಸಿ ಕೇರಳ ಸರ್ಕಾರ ಕೂಡಲೇ ಮೇಲ್ಮನವಿ ಸಲ್ಲಿಸಬೇಕು. ಸುಪ್ರೀಂ ಕೋರ್ಟ್ ಆದೇಶದಿಂದ ಶಬರಿಮಲೆ ದೇವಸ್ಥಾನದ ನಂಬಿಕೆ, ಪರಂಪರೆಗೆ ಧಕ್ಕೆಯಾಗಿದ್ದು, ಇದನ್ನು ರಕ್ಷಿಸಲು ಸುಗ್ರಿವಾಜ್ಞೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆ.

       ಶಬರಿಮಲೆಯ ಸಂಪ್ರದಾಯ ಮತ್ತು ಆಚರಣೆಯನ್ನು ಮೂಲ ಸ್ವರೂಪದಲ್ಲಿ ಉಳಿಸಿಕೊಳ್ಳುವ ಉದ್ದೇಶದಿಂದ ಫ್ರೀಡಂ ಪಾರ್ಕ್‍ನಲ್ಲಿ ಅಂದು ಸಾಮೂಹಿಕ ಪ್ರಾರ್ಥನಾ ರ್ಯಾಲಿ ಆಯೋಜಿಸಲಾಗಿದೆ. ನಂತರ ರಾಜ್ಯಪಾಲರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಲು ಫ್ರೀಡಂ ಪಾರ್ಕ್‍ನಿಂದ ರಾಜಭವನದವರೆಗೆ ಮೌನ ರ್ಯಾಲಿ ನಡೆಸಲು ತೀರ್ಮಾನಿಸಲಾಗಿದೆ. ಗತಕಾಲದ ಸಂಪ್ರದಾಯವನ್ನು ಎತ್ತಿಹಿಡಿಯುವ ಹಾಗೂ ಕೋಟ್ಯಂತರ ಅಯ್ಯಪ್ಪ ಭಕ್ತರ ನಂಬಿಕೆ ಅಪಾಯಕ್ಕೆ ಸಿಲುಕುವುದನ್ನು ತಪ್ಪಿಸಲು ಕೇರಳ ಮತ್ತು ಕೇಂದ್ರ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒಕ್ಕೂಟದ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.

       ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಯ್ಯಪ್ಪ ಟೆಂಪಲ್ ಅಸೋಸಿಯೇಷನ್‍ನ ಸಂಚಾಲಕ ಕೆ.ವಿ. ಗಿರೀಶ್ ಕುಮಾರ್, ನಾವು ಸುಪ್ರೀಂ ಕೋರ್ಟ್ ಆದೇಶಕ್ಕೆ ಗೌರವ ನೀಡುತ್ತೇವೆ. ಆದರೆ ನ್ಯಾಯಾಲಯದ ಆದೇಶದಲ್ಲಿ ಹಲವಾರು ಅಸ್ಪಷ್ಟ ಅಂಶಗಳಿದ್ದು, ಸುಪ್ರೀಂ ಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ಅರ್ಜಿ ಸಂದರ್ಭದಲ್ಲಿ ಇವುಗಳನ್ನು ವಿಮರ್ಶೆಗೊಳಪಡಿಸಬೇಕೆಂದು ನಾವು ಬಯಸುತ್ತೇವೆ. ಕೂಡಲೇ ಕೇರಳ ಸರ್ಕಾರ ತುರ್ತು ವಿಧಾನಸಭೆ ಅಧಿವೇಶನ ಕರೆದು ಈ ಎಲ್ಲಾ ಸಾಧಕ – ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.

         ಶಬರಿಮಲದಲ್ಲಿನ ಸಂಪ್ರದಾಯಗಳು ಅಸಧಾರಣ ಮತ್ತು ಐತಿಹಾಸಿಕವಾಗಿದೆ. ಇಲ್ಲಿನ ನಾಲ್ಕು ಶತಮಾನಗಳ ಪುರಾತನ ಸಂಪ್ರದಾಯಗಳು, ನಂಬಿಕೆ, ದೈನಂದಿನ ಆಚರಣೆಗಳು ಎಲ್ಲಾ ಜಾತಿ, ಧರ್ಮದವರಿಗೆ ಸ್ವೀಕಾರಾರ್ಹವಾಗಿದೆ. ಅಯ್ಯಪ್ಪ ಧರ್ಮವನ್ನು ನಿರ್ದಿಷ್ಟವಾಗಿ ದಕ್ಷಿಣ ಭಾರತೀಯರು ಹಾಗೂ ಸಾಮಾನ್ಯವಾಗಿ ದೇಶ, ವಿದೇಶಗಳ ಭಕ್ತಾದಿಗಳು ಅನುಸರಿಸುತ್ತಿದ್ದು, ಇವರ ಆಚರಣೆಗಳನ್ನು ರಕ್ಷಿಸಬೇಕು ಎಂದರು.

          ಜಂಟಿ ಸಂಚಾಲಕ ಜಿ. ಜಯಪ್ರಕಾಶ್ ಮಾತನಾಡಿ, ಭಕ್ತಾದಿಗಳ ನಂಬಿಕೆ ಮತ್ತು ಆಚರಣೆಗಳನ್ನು ನ್ಯಾಯಾಲಯಗಳು ನಿರ್ಧರಿಸಬಾರದು ಎಂದು ನಾವು ನಂಬಿದ್ದೇವೆ. ಶಬರಿಮಲ ಕುರಿತು ತೀರ್ಪು ಹಲವು ಪ್ರಶ್ನೆಯನ್ನು ಹುಟ್ಟುಹಾಕಿದೆ. ಹೀಗಾಗಿ ಎಲ್ಲಾ ಸಂಘಟನೆಗಳು ಇಂತಹ ಮಹತ್ವದ ಆಂದೋಲನಕ್ಕೆ ಕೈ ಜೋಡಿಸಬೇಕು. ಫ್ರೀಡಂ ಪಾರ್ಕ್‍ನಲ್ಲಿ ಮಧ್ಯಾಹ್ನ 3ಕ್ಕೆ ಅಯ್ಯಪ್ಪ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಗೊಳ್ಳಬೇಕೆಂದು ಮನವಿ ಮಾಡಿದರು.

        ಸಂಘಟನೆಯ ಸಹ ಸಂಚಾಲಕ ಮತ್ತು ಹಿರಿಯ ಚಿತ್ರನಟ ಶಿವರಾಂ, ಕಾನೂನು ಜಾರಿಗೊಳ್ಳುವ ಮುನ್ನ ಸಂಪ್ರದಾಯಗಳು ಹುಟ್ಟಿಕೊಂಡಿತ್ತು. ಎಲ್ಲಾ ಜಾತಿ, ಧರ್ಮಗಳ ನಂಬಿಕೆಗಳನ್ನು ರಕ್ಷಿಸಿ ಉಳಿಸಬೇಕು. ಸಾವಿರಾರು ವರ್ಷಗಳಿಂದ ವೇದ, ಉಪನಿಷತ್ತುಗಳಿವೆ. ಆದರೆ ಕಾನೂನು ಇತ್ತೀಚಿನ ಪರಿಕಲ್ಪನೆ. ಸುಪ್ರೀಂ ಕೋರ್ಟ್ ಆದೇಶದಿಂದ ಅಯ್ಯಪ್ಪ ಭಕ್ತರಿಗೆ ಘಾಸಿಯಾಗಿದೆ. ಹೀಗಾಗಿ ಇದೀಗ ಹೋರಾಟ ನಡೆಸುವುದೊಂದೇ ಮಾರ್ಗ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap