ಶಾಸಕ ಶ್ರೀರಾಮುಲು ಬಳ್ಳಾರಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ : ಬೊಮ್ಮಣ್ಣ

0
14

ಕೂಡ್ಲಿಗಿ:

      ಶಾಸಕ ಶ್ರೀರಾಮುಲು ಬಳ್ಳಾರಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಜೆಡಿಎಸ್ ಮುಖಂಡ ಎನ್.ಟಿ. ಬೊಮ್ಮಣ್ಣ ಹೇಳಿದರು. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಅವರ ಗೆಲುವಿನ ಹಿನ್ನಲೆಯಲ್ಲಿ ಬುಧವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ನಮ್ಮ ಎಲ್ಲಾ ನೋವುಗಳನ್ನು ಮರೆತು ಈ ಹಿಂದೆ ನಾವು ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿ ಬೆಳೆಸಿದ್ದೆವು. ಆದರೆ ಶ್ರೀರಾಮುಲು ಸಾಮಾಜಿಕ ನ್ಯಾಯದ ಬಗ್ಗೆ ಯಾವತ್ತು ಚಿಂತನೆ ಮಾಡದೇ ತಾವು ಹಾಗೂ ತಮ್ಮವರ ಬಗ್ಗೆ ಮಾತ್ರ ಕಾಳಜಿ ತೋರಿದರು ಎಂದು ದೂರಿದ ಅವರು ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿದ್ದರಿಂದ ಬಿಜೆಪಿ ಸೋಲಿಸಲು ಸಾಧ್ಯವಾಗಿದ್ದು, ಎರಡು ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಮೈತ್ರಿ ಧರ್ಮ ಪಾಲಿಸಬೇಕು. ಬಿಜೆಪಿಯಲ್ಲಿ ಪಕ್ಷಕ್ಕಾಗಿ ನಿಷ್ಟಾವಂತ ಕಾರ್ಯಕರ್ತರ ಪಡೆ ಇದ್ದು, ಯಾವುದೇ ಫಲಾಪೇಕ್ಷೆ ಇಲ್ಲದೆ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಅವರಂತೆ ನಾವು ಸಹ ನಮ್ಮಲ್ಲಿನ ವೈಮನಸ್ಸುನ್ನು ಬದಿಗಿಟ್ಟು ಮುಂದಿನ ದಿನಗಳಲ್ಲಿಯೂ ಚುನಾವಣೆ ಎದುರಿಸಬೇಕಾಗಿದೆ ಎಂದರು.

       ಅಭಿವೃದ್ಧಿ ಕಾರ್ಯಗಳಿಗೆ ನಾವು ಕ್ಷೇತ್ರದಲ್ಲಿ ಶಾಸಕರಾಗಿರಬೇಕೆಂದೇನು ಇಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದು, ದೇವೇಗೌಡರ ಮುಖಾಂತರ ತಾಲ್ಲೂಕಿಗೆ ಕುಡಿಯುವ ನೀರು, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ ಹಾಗೂ ಪಟ್ಟಣದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಿಸಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

      ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಳಿಗಿ ವಿರೇಂದ್ರ ಮಾತನಾಡಿ, ಈ ಹಿಂದೆ ನಮ್ಮಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳಿಂದ ಪಕ್ಷಕ್ಕೆ ಸಾಕಷ್ಟು ಹಿನ್ನಡೆಯಾಗುತ್ತಿತ್ತು. ಆದರೆ ಈ ಬಾರಿ ಜೆಡಿಎಸ್ ನೊಂದಿಗೆ ಕೈಜೋಡೀಸಿಕೊಂಡು ನಮ್ಮ ಪಕ್ಷದ ಎಲ್ಲಾ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಿದ್ದರಿಂದ ಉಗ್ರಪ್ಪ ಅವರು ಊಹಿಸಲು ಸಾಧ್ಯವಾಗದಷ್ಟು ಅಂತರದಿಂದ ಗೆಲವು ಸಾಧಿಸಿದರು. ದೇಶದಲ್ಲಿ ಮೋದಿ ಅಲೆ ಮಾಯವಾಗಿರುವುದು ಉಪ ಚುನಾವಣೆಗಳಿಂದ ಸಾಬೀತಾಗಿದೆ ಎಂದರು.

     ಕಾಂಗ್ರೆಸ್ ಮುಖಂಡರಾದ ಗುಜ್ಜಲ್ ರಘು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಿ. ಕಾರಪ್ಪ, ಕೆಪಿಸಿಸಿ ಸದಸ್ಯ ಉದಯ ಜನ್ನು, ಡಿಸಿಸಿ ಕಾರ್ಯದರ್ಶಿ ಜಿ. ನಾಗಮಣಿ, ಬಿ. ಭೀಮೇಶ್, ಜೆಡಿಎಸ್ ಮುಖಂಡರಾದ ದುಗ್ಗಪ್ಪ, ಕಾವಲ್ಲಿ ಶಿವಪ್ಪ ನಾಯಕ ಮಾತನಾಡಿದರು.

      ಕಾಂಗ್ರೆಸ್ ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ಸಿ.ಬಿ. ಜಯರಾಮ್ ನಾಯಕ, ತಾಲ್ಲೂಕು ಘಟಕದ ಅಧ್ಯಕ್ಷ ಬೊಮ್ಮಣ್ಣ, ಯುವ ಮೋರ್ಚಾದ ಅಧ್ಯಕ್ಷ ಮಯೂರ್ ಮಂಜುನಾಥ, ಕಾರ್ಮಿಕ ಘಟಕದ ಅಧ್ಯಕ್ಷ ಎನ್. ದುರುಗೇಶ, ತಾಲ್ಲೂಕು ಎಸ್ಸಿ ಘಟಕದ ಅಧ್ಯಕ್ಷ ಡಿ.ಎಚ್. ದುರುಗೇಶ್, ಪಟ್ಟಣ ಪಂಚಾಯ್ತಿ ಸದಸ್ಯರಾದ ಸಣ್ಣ ಕೊತ್ಲಪ್ಪ, ಚೌಡಪ್ಪ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಶುಕುರ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಕುಮಾರಸ್ವಾಮಿ, ಚನ್ನಬಸಪ್ಪ, ತಿಪ್ಪೇಸ್ವಾಮಿ, ಕಾಟೇರ್ ಹಾಲೇಶ, ಎನ್. ನಾಗಜ್ಜ, ಇಮಾಮ್ ಸಾಬ್, ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here