1200 ಅಡಿ ವರೆಗೂ ಕೊಳವೆಬಾವಿ ಕೊರೆಸಿ

0
7

ದಾವಣಗೆರೆ

        ಕೊಳವೆ ಬಾವಿ ಎಂಟನೂರು ಅಡಿಗೆ ಸೀಮಿತ ಬೇಡ, ಒಂದು ಸಾವಿರದಿಂದ ಹನ್ನೆರಡು ನೂರು ಅಡಿಯ ವರೆಗೆ ಕೊರೆಸಿ, ಕೆರೆ ಒತ್ತುವರಿ ತೆರವುಗೊಳಿಸಿ, ಮೇವು ಬೆಳೆಯಲು ರೈತರಿಗೆ ಉತ್ತೇಜ ನೀಡಿ, ನರೇಗಾದಲ್ಲಿ ಮಾನವ ದಿನ ಹೆಚ್ಚಿಸಿರುವ ಬಗ್ಗೆ ಕರಪತ್ರ ಮುದ್ರಿಸಿ ಜಾಗೃತಿ ಮೂಡಿಸಿ, ಹಳ್ಳಿ-ಹಳ್ಳಿಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ…

        ಇವು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭಾನುವಾರ ಸಚಿವ ಸಂಪುಟ ಉಪಸಮಿತಿಯಿಂದ ಜಿಲ್ಲೆಯ ಬರ ನಿರ್ವಹಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಾಲ್ವರು ಸಚಿವರು ಅಧಿಕಾರಿಗಳಿಗೆ ನೀಡಿದ ಪ್ರಮುಖ ಸೂಚನೆಗಳು.

        ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲೆಯಲ್ಲಿ ಒಟ್ಟು 29 ಗ್ರಾಮಗಳನ್ನು ಜಲಕ್ಷಾಮ ಮತ್ತು ಸಮಸ್ಯಾತ್ಮಕ ಗ್ರಾಮಗಳನ್ನಾಗಿ ಗುರುತಿಸಲಾಗಿದ್ದು, ಈ ಗ್ರಾಮಗಳ ಜನ-ಜಾನುವಾರುಗಳಿಗೆ ಪ್ರತಿದಿನ 31 ಟ್ಯಾಂಕರ್‍ಗಳ ಮೂಲಕ 131 ಟ್ಯಾಂಕ್ ನೀರು ಪೂರೈಸಲಾಗುತ್ತಿದೆ. ಅಲ್ಲದೆ, 32 ಹಳ್ಳಿಗಳಿಗೆ 43 ಖಾಸಗಿ ಕೊಳವೆ ಬಾವಿಗಳಿಂದ ಬಾಡಿಗೆ ಆಧಾರದಲ್ಲಿ ನೀರು ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್, ಬರೀ ಟ್ಯಾಂಕರ್ ಮೂಲಕ ನೀರು ಪೂರೈಸಿ, ನೀರಿನ ಬವಣೆ ತಪ್ಪಿಸಲಾಗಲ್ಲ. ಜಿಲ್ಲೆಯಲ್ಲಿ ಬರೀ 300ರಿಂದ 800 ಅಡಿಗಳ ವರೆಗೆ ಬೊರ್‍ವೆಲ್ ಕೊರೆಸಲಾಗುತ್ತಿದ್ದು, ನೀರು ಸಿಗದಿದ್ದರೆ ಹಾಗೆಯೇ ಬಿಟ್ಟುಬಿಡುವುದು ಸರಿಯಲ್ಲ. 1000ದಿಂದ 1200 ಅಡಿಗಳ ವರೆಗೆ ಕೊಳವೆಬಾವಿ ಕೊರೆಸಿ, ನೀರು ಪೂರೈಸಿ ಎಂದು ಸೂಚನೆ ನೀಡಿದರು.

          ಈ ವೇಳೆ ಮಾತನಾಡಿದ ಅಧಿಕಾರಿ ಜಿಯೋಲಜಿಸ್ಟ್‍ಗಳು 750 ಅಡಿಗಳಿಗೆ ಮಾತ್ರ ಅನುಮತಿ ಕೊಡುತ್ತಿದ್ದಾರೆಂದು ಹೇಳುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ಸಚಿವ ಎಸ್.ಆರ್.ಶ್ರೀನಿವಾಸ್ ಎಲ್ಲದಕ್ಕೂ ಜಿಯೋಲಜಿಸ್ಟ್‍ಗಳೇ ಅಂತಿಮವಲ್ಲ. ಎಲ್ಲೆಲ್ಲಿ ಕೊಳವೆಬಾವಿ ವಿಫಲಗೊಂಡಿವೆಯೋ ಅಲ್ಲೆಲ್ಲಾ 1200 ಅಡಿಗಳ ವರೆಗೆ ಡಿಗ್ಗಿಂಗ್ ಮಾಡಿಸಿ ಎಂದು ತಾಕೀತು ಮಾಡುತ್ತಿದ್ದಂತೆ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಈ ಬಗ್ಗೆ ಇಂದೇ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ ಎಂದರು.

ಶುದ್ಧ ನೀರು ಪೂರೈಸಿ:

          ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಮಾತನಾಡಿ, ಇಂದು ಭೇಟಿ ಕೊಟ್ಟ ಗ್ರಾಮಗಳಲ್ಲಿ ಗ್ರಾಮಸ್ಥರು ಫ್ಲೋರೈಡ್ ಯುಕ್ತ ನೀರು ಪೂರೈಕೆಯಾಗುತ್ತಿದೆ ಎಂಬುದಾಗಿ ದೂರಿದ್ದಾರೆ. ಆದ್ದರಿಂದ ಕುಡಿಯುವ ನೀರನ್ನು ಶುದ್ಧೀಕರಿಸಿ ಪೂರೈಸಬೇಕೆಂದು ಸಲಹೆ ನೀಡಿದರು.

ಆರ್‍ಒ ಯುನಿಟ್ ಸ್ಥಾಪಿಸಿ:

         ಇದಕ್ಕೆ ದನಿಗೂಡಿಸಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಜಿಲ್ಲೆಯಲ್ಲಿ ಎಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯತ್ ಸಿಇಒ ಎಸ್.ಅಶ್ವತಿ, ಜಿಲ್ಲೆಯಲ್ಲಿ 910 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಬಹುತೇಕ ಎಲ್ಲವೂ ಸುಸ್ಥಿತಿಯಲ್ಲಿವೆ ಎಂದರು.

         ಈ ವೇಳೆ ಮಾತನಾಡಿದ ಸಚಿವ ತಮ್ಮಣ್ಣ, ದುರಸ್ತಿಗೆ ಬಂದಿರುವ ಘಟಕಗಳನ್ನು ರಿಪೇರಿ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳುವುದರ ಜತಗೆ, ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಲ್ಲಿ, ಹಳ್ಳಿ, ಹಳ್ಳಿಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕೆಂದು ಸೂಚಿಸಿದರು.

ಒತ್ತುವರಿ ತೆರವುಗೊಳಿಸಿ:

          ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಪದೇ, ಪದೇ, ಬರಕ್ಕೆ ತುತ್ತಾಗುವ ಜಗಳೂರು ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸುವ ಮೂಲಕ ಅಲ್ಲೂ ನೀರಾವರಿ ಸೌಲಭ್ಯ ಕಲ್ಪಿಸುವಂತಾಗಬೇಕೆಂದು ಎನ್ನುತ್ತಿದ್ದಂತೆ, ದನಿಗೂಡಿಸಿದ ಜಿಲ್ಲಾ ಮಂತ್ರಿ ಎಸ್.ಆರ್.ಶ್ರೀನಿವಾಸ್, ಯಾರೇ ಕೆರೆ ಒತ್ತುವರಿ ಮಾಡಿದ್ದರೂ, ಮುಲಾಜಿಲ್ಲದೇ, ತೆರವುಗೊಳಿಸಿ, ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಮೂಲಕ ಕೆರೆಗಳನ್ನು ತುಂಬಿಸಿ, ಅಂತರ್ಜಲ ಮಟ್ಟ ಹೆಚ್ಚಿಸುವ ಮೂಲಕ ನೀರನ ಬವಣೆ ನೀಗಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

23 ವಾರಕ್ಕೆ ಮೇವು:

          ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, 2012ರ ಜಾನುವಾರು ಗಣತಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 4,04,933 ಜಾನುವಾರುಗಳಿದ್ದು, ವಾರಕ್ಕೆ 13,092 ಮೆಟ್ರಿಕ್ ಟನ್ ಮೇವು ಬೇಕಾಗಿದೆ. ಈಗ ಪ್ರಸ್ತುತ ಜಿಲ್ಲೆಯಲ್ಲಿ 3,03,898 ಮೆಟ್ರಿಕ್ ಟನ್ ಮೇವು ಸಂಗ್ರಹವಿದ್ದು, ಇನ್ನೂ 23 ವಾರಗಳ ವರೆಗೆ ಮೇವಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದರು.

          ಈ ಸಂದರ್ಭದಲ್ಲಿ ಸಚಿವ ಶಿವಶಂಕರರೆಡ್ಡಿ ಮಾತನಾಡಿ, ಅತೀ ಹೆಚ್ಚು ನಷ್ಟಕ್ಕೆ ಒಳಗಾಗಿರುವ ಜಗಳೂರು ತಾಲೂಕಿನಲ್ಲಿ ಮೇವಿಗೆ ಸಮಸ್ಯೆ ಇಲ್ಲವ್ವೇ? ಎಂದು ಪ್ರಶ್ನಿಸಿದರು.

           ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಇಲ್ಲೂ ಸಹ 24 ವಾರಗಳಿಗೆ ಬೇಕಾಗುವಷ್ಟು ಮೇವು ಸಂಗ್ರವಿದೆ. ಜಿಲ್ಲೆಯಲ್ಲಿ 42 ಮೇವು ಬ್ಯಾಂಕ್ ಹಾಗೂ 24 ಗೋಶಾಲೆ ತೆರೆಯುವ ಅವಶ್ಯಕತೆ ಇದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

          ಕಾರ್ಮಿಕ ಸಚಿವ ವೆಂಕಟರಮಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಭತ್ತದ ಹುಲ್ಲು ಇದೆ. ಹೀಗಾಗಿ ಮುಂದೆ ಬೇಸಿಗೆಯೆಲ್ಲಿ ಮೇವಿಗೆ ತೊಂದರೆಯಾಗದಂತೆ ಮೇವು ಸಂಗ್ರಹಿಸಿ ಇಟ್ಟುಕೊಳ್ಳಿ. ಅಲ್ಲದೆ, ರೈತರಿಗೆ ಮೇವಿನ ಕಿಟ್ ನೀಡಿ, ಮೇವಿಗೆ ಜಿಲ್ಲಾಡಳಿತವೇ ಮಾರುಕಟ್ಟೆ ಒದಗಿಸಲಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಮೇವು ಬೆಳೆಯಲು ಉತ್ತೇಜನ ನೀಡಬೇಕೆಂದು ಸೂಚಿಸಿದರು.

          ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಮಾನವ ದಿನಗಳನ್ನು ನೂರರಿಂದ ನೂರಾ ಐವತ್ತು ದಿನಗಳಿಗೆ ಹೆಚ್ಚಿಸಲಾಗಿದೆ. ಆದರೆ, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಆದ್ದರಿಂದ ಕರಪತ್ರ ಮುದ್ರಿಸಿ, ಹಳ್ಳಿ-ಹಳ್ಳಿಗಳಲ್ಲಿ ಹಂಚಿಸಿ ಜಾಗೃತಿ ಮೂಡಿಸಬೇಕೆಂದು ತಾಕೀತು ಮಾಡಿದರು.

        ಸಭೆಯಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಕೆ.ಅಬ್ದುಲ್ ಜಬ್ಬಾರ್, ಜಿ.ಪಂ. ಪ್ರಭಾರ ಅಧ್ಯಕ್ಷೆ ಜೆ.ಸವಿತಾ, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಶ್ವರರಾವ್, ಜಿಲ್ಲಾ ಪಂಚಾಯತ್ ಸಿಇಒ ಎಸ್.ಅಶ್ವತಿ, ಮೇಯರ್ ಶೋಭಾ ಪಲ್ಲಾಘಟ್ಟೆ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ತಹಶೀಲ್ದಾರ್ ಸಂತೋಷಕುಮಾರ್, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವೇದಮೂರ್ತಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಯೋಜನಾ ನಿರ್ದೇಶಕಿ ನಜ್ಮಾ ಭಾನು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕಿ ಕೌಸರ್ ಭಾನು, ಜಿಲ್ಲಾ ಅಬಕಾರಿ ಅಧಿಕಾರಿ ನಾಗರಾಜ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here