ಚಳ್ಳಕೆರೆ ಗ್ರಾಮೀಣ ರಸ್ತೆಗಳ ಡಾಂಬರೀಕರಣ ಕೈಗೊಳ್ಳಿ

ಚಿತ್ರದುರ್ಗ:

      ಚಳ್ಳಕೆರೆಯಿಂದ ಮೀರಾಸಾಬಿಹಳ್ಳಿ, ಜಾಜೂರು, ಕಾಮಸಮುದ್ರ, ದೊಣೆಹಳ್ಳಿ, ತಿಪ್ಪಾರೆಡ್ಡಿಹಳ್ಳಿ, ಪಾತಪ್ಪನಗುಡಿ, ದೊಡ್ಡಬಾದಿಹಳ್ಳಿಗಳಿಗೆ, ಹೋಗುವ ರಸ್ತೆ ಉಬ್ಬು-ತಗ್ಗುಗಳಿಂದ ಕೂಡಿದ್ದು, ಪ್ರತಿದಿನ ಒಂದಲ್ಲ ಒಂದು ರೀತಿಯ ಅಪಘಾತಗಳು ಸಂಭವಿಸುತ್ತಿರುವುದರಿಂದ ರಸ್ತೆ ಡಾಂಬರೀಕರಣಗೊಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

        ರೈತರು ಬೆಳೆಯುವ ಬೆಳೆಗಳನ್ನು ಪ್ರತಿನಿತ್ಯವೂ ಮಾರುಕಟ್ಟೆಗೆ ಸಾಗಿಸುವಾಗ ಬೈಕ್, ಆಟೋ, ಬಸ್‍ಗಳಲ್ಲಿ ಪ್ರಾಣ ಭಯದಿಂದ ಸಂಚರಿಸುವಂತಾಗಿದೆ. ಶಾಲಾ ಮಕ್ಕಳು ದಿನನಿತ್ಯವೂ ಶಾಲೆಗಳಿಗೆ ಹೋಗುವುದು ಕಷ್ಟಕರವಾಗಿದೆ. ಪ್ರತಿದಿನ ಸಣ್ಣಪುಟ್ಟ ಅಪಘಾತಗಳು ಸಂಭವಿಸಿ ಅನೇಕ ಸಾವು-ನೋವುಗಳಾಗಿದ್ದರೂ ಈ ರಸ್ತೆ ಆಂಧ್ರದ ಗಡಿಭಾಗದಲ್ಲಿರುವುದರಿಂದ ನಿರ್ಲಕ್ಷೆ ಮಾಡಲಾಗುತ್ತಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಆಪಾದಿಸಿದರು.

          ಇನ್ನು ಏಳು ದಿನಗಳೊಳಗಾಗಿ ಈ ರಸ್ತೆಗಳನ್ನು ಡಾಂಬರೀಕರಣಗೊಳಿಸದಿದ್ದರೆ ದೊಣೆಹಳ್ಳಿ-ಕಾಮಸಮುದ್ರ ಗ್ರಾಮಗಳ ನಡುವೆ ರಸ್ತೆತಡೆ ಮಾಡಲಾಗುವುದೆಂದು ಕೆ.ಪಿ.ಭೂತಯ್ಯ ಸರ್ಕಾರವನ್ನು ಎಚ್ಚರಿಸಿದರು.

         ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾದಾಗಿನಿಂದಲೂ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ. ರೈತರು ಇಟ್ಟುಕೊಂಡಿರುವ ನಿರೀಕ್ಷೆ ಈಡೇರದ ಕಾರಣ ಕೃಷಿಗಾಗಿ ಮಾಡಿರುವ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದ 25 ರಾಜ್ಯಗಳ ಲಕ್ಷಾಂತರ ರೈತರು ಸೇರಿ ದೆಹಲಿಯಲ್ಲಿ ಬೃಹತ್ ಚಳುವಳಿ ನಡೆಸಿ ಸಾಲ ಮನ್ನಾಕ್ಕೆ ಒತ್ತಾಯಿಸಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಪಂದಿಸದೆ ರೈತರನ್ನು ಹಗುರವಾಗಿ ಕಾಣುತ್ತಿವೆ. ಅಂಬಾನಿಯ ಸಾಲ ಮನ್ನಾ ಆಗುತ್ತೆ. ರೈತರ ಸಾಲ ಏಕೆ ಮನ್ನಾ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

        ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ನರೇಂದ್ರಮೋದಿ ಚುನಾವಣಾ ಪೂರ್ವದಲ್ಲಿ ವಿದೇಶಗಳಲ್ಲಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಯಾಮಾರಿಸಿದ್ದಾರೆ. ವರ್ಷಕ್ಕೆ ಎರಡು ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದಾಗಿ ನಂಬಿಸಿ ಯುವಕರನ್ನು ವಂಚಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ದ ಹೋರಾಡಲು ಸರ್ದಾರ್‍ವಲ್ಲಭಾಯಿ ಪಟೇಲ್‍ರಂತಹ ಉಕ್ಕಿನ ಯುವಕರನ್ನು ಪ್ರತಿ ಹಳ್ಳಿಯಲ್ಲೂ ಹುಟ್ಟುಹಾಕಬೇಕು ಎಂದು ಹೇಳಿದರು.
ರೈತ ಮುಖಂಡರುಗಳಾದ ಟಿ.ನುಲೇನೂರು ಶಂಕರಪ್ಪ, ಆರ್.ತಿಪ್ಪೇಸ್ವಾಮಿ, ಪಾಲಯ್ಯ, ಕೆ.ಸಿ.ಹೊರಕೇರಪ್ಪ, ಟಿ.ಹಂಪಣ್ಣ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap