ಸಡಗರದ ದೀಪಾವಳಿ, ಚಿತ್ತಾರ ಮೂಡಿಸಿದ ಪಟಾಕಿ

ದಾವಣಗೆರೆ:

       ಬೆಳಕಿನ ಹಬ್ಬ ದೀಪಾವಳಿಯನ್ನು ಗುರುವಾರ ಜಿಲ್ಲಾದ್ಯಂತ, ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದೀಪಾವಳಿಯ ಹಬ್ಬಕ್ಕೆ ತೆರೆ ಬಿಳುವ ಬಲಿ ಪಾಢ್ಯಮಿಯಂದು ಹೈಸ್ಕೂಲ್ ಮೈದಾನದಲ್ಲಿ ಹೂವು, ಹಣ್ಣು, ಪಟಾಕಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದ್ದರಿಂದ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಜನಜಂಗುಳಿ ಅಧಿಕವಾಗಿತ್ತು. ಪಟಾಕಿ ಖರೀದಿಸುವವರ ಸಂಖ್ಯೆ ಸ್ವಲ್ಪ ಹೆಚ್ಚಾಗಿತ್ತು.

      ನಗರದಲ್ಲಿ ಬಹುತೇಕ ವ್ಯಾಪಾರಿಗಳು ಗುರುವಾರದಂದೂ ಲಕ್ಷ್ಮಿ ಪೂಜೆ ಮಾಡಿದರು. ತಮ್ಮಮ್ಮ ಆತ್ಮೀಯರನ್ನು, ಬಂಧುಗಳು, ಸ್ನೇಹಿತರನ್ನು ಅಂಗಡಿಯ ಲಕ್ಷ್ಮೀ ಪೂಜೆ ಆಹ್ವಾನಿಸಿ ಪೂಜಾ ಕಾರ್ಯಕ್ರಮ ನಡೆಸಿದ್ದು ವಿಶೇಷವಾಗಿತ್ತು. ಇದೆಲ್ಲದರ ಜೊತೆಗೆ ಅಂಗಡಿಯನ್ನು ವಿಶೇಷ ಅಲಂಕಾರದಿಂದ ಸಿಂಗರಿಸಲಾಗಿತ್ತು.

      ಗಡಿಯಾರದ ಕಂಬ, ಕಾಳಿಕಾದೇವಿ ರಸ್ತೆ, ಅಶೋಕ ರಸ್ತೆ, ಎವಿಕೆ ಕಾಲೇಜ್ ರಸ್ತೆ, ರಾಂ ಆಂಡ್ ಕೋ ಸರ್ಕಲ್, ವಿನೋಭ ನಗರ, ಕೆ.ಆರ್. ಮಾರುಕಟ್ಟೆ, ಬಂಬೂ ಬಜಾರ್, ಚಾಮರಾಜ ಪೇಟೆ ಸೇರಿದಂತೆ ವಾಣಿಜ್ಯ ಪ್ರದೇಶದಲ್ಲಿ ಲಕ್ಷ್ಮೀ ಪೂಜೆ ಜೋರಾಗಿಯೆ ನಡೆಯಿತು. ಬೆಳಿಗ್ಗೆ ಅಂಗಡಿ ಮುಂಗಟ್ಟುಗಳಲ್ಲಿ ಪೂಜೆ ಮಾಡಿದ ವರ್ತಕರು, ವ್ಯಾಪಾರಿಗಳು ಮಧ್ಯಾಹ್ನದ ನಂತರ ಬಾಗಿಲು ಹಾಕಿದ್ದರಿಂದ ರಸ್ತೆಯಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

      ಇನ್ನೂ ಮನೆಗಳಲ್ಲಿ ಬೆಳಗ್ಗೆಯಿಂದಲೇ ಹಬ್ಬದ ತಯಾರಿ ಜೋರಾಗಿತ್ತು. ಮನೆಯಂಗಳದಲ್ಲಿ ಸಾಲು ದೀಪ, ರಂಗೋಲಿ ಚಿತ್ತಾರ ಹಬ್ಬಕ್ಕೆ ಮೆರಗು ನೀಡಿತ್ತು. ಹೊಸ ಬಟ್ಟೆ ತೊಟ್ಟಿದ್ದ ಚಿಣ್ಣರು ಲವಲವಿಕೆಯಿಂದ ಓಡಾಡುತ್ತಿದ್ದರು. ಹಬ್ಬದ ಪ್ರಯುಕ್ತ ಮನೆಗಳಲ್ಲಿ ಹೋಳಿಗೆ, ಕಡುಬು ಸೇರಿದಂತೆ ವಿವಿಧ ರೀತಿಯ ಭಕ್ಷ್ಯಭೋಜ್ಯಗಳು ಘಮಘಮಿಸುತ್ತಿದ್ದವು. ಬಂಧು-ಮಿತ್ರರೊಂದಿಗೆ ಹಬ್ಬದೂಟ ಸವಿದ ಜನರು, ಪಟಾಕಿ ಸಿಡಿಸಿ ಸಂಭ್ರಮಪಟ್ಟರು.

      ದಿನವೆಲ್ಲಾ ಅಲ್ಲಲ್ಲಿ ಯಾವಾಗಾದರೊಮ್ಮೆ ಕೇಳಿಬರುತ್ತಿದ್ದ ಪಟಾಕಿ ಸದ್ದು ಸಂಜೆ ವೇಳೆಗೆ ತೀವ್ರಗೊಂಡಿತು. ಒಂದಾದ ಮೇಲೊಂದರಂತೆ ಸರಣಿ ಪಟಾಕಿ ಸದ್ದು ಕಿವಿಗಪ್ಪಳಿಸುವಂತಿತ್ತು. ಕತ್ತಲ ರಾತ್ರಿಯಲ್ಲಿ ಆಗಸದ ತುಂಬೆಲ್ಲಾ ಬೆಳಕಿನ ಚಿತ್ತಾರ ಮೂಡಿಸುತ್ತಿದ್ದ ರಾಕೆಟ್‍ಗಳು ಮುಗಿಲಿಗೇರುತ್ತಿದ್ದವು. ಮಕ್ಕಳು ಅಂಜಿಕೆಯಿಂದಲೇ ಸುರಸುರ ಬತ್ತಿ ಉರಿಸಿ, ಸಂತಸಪಟ್ಟರು.

       ದೀಪಾವಳಿ ಹಬ್ಬ ಅಂದರೆ ಅದು ಸಂಭ್ರಮ. ನಾವುಗಳು ಎಷ್ಟೇ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ ಈ ದಿನದ ಆಚರಣೆ ಕಡ್ಡಾಯವಾಗಿದೆ. ಕುಟುಂಬದ ಸಂತೋಷವೇ ನಮ್ಮ ಸಂತೋಷ ಆಗಿರುವಾಗ. ಹಬ್ಬ ಸ್ವಲ್ಪ ಮಟ್ಟಿಗಾದರೂ ಚಂದವಿರಬೇಕು. ಕುಟುಂಬದ ಸದಸ್ಯರಿಗೆ ಬಟ್ಟೆ, ಮಕ್ಕಳಿಗೆ ಪಟಾಕಿ ತರಲೇಬೇಕು ಎನ್ನುತ್ತಾರೆ ತೆರಿಗೆ ಸಲಹೆಗಾರ ಕೆ.ಸಿ. ನಾಗರಾಜ್.

     ದೀಪಾವಳಿ ವ್ಯಾಪಾರಿಗಳಿಗೆ ಒಂದು ರೀತಿ ಹಬ್ಬ. ಆದರೆ, ಇಂದಿನ ವ್ಯವಹಾರ ಮೊದಲಿನಂತೆ ಇಲ್ಲ. ಆದರೂ ಅಂಗಡಿಗಳು ಇರುವುದರಿಂದ ಲಕ್ಷ್ಮೀ ಪೂಜೆ ಮಾಡಬೇಕು. ಸ್ನೇಹಿತರು, ಬಂಧುಗಳನ್ನು ಕರೆಸಬೇಕು. ಇದು ಮೊದಲಿನಿಂದ ನಡೆದು ಬಂದ ಪದ್ಧತಿ. ಹೀಗಾಗಿ, ಅದನ್ನು ಮುಂದುವರೆಸುತ್ತೇವೆ. ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತವೆ ಎನ್ನುತ್ತಾರೆ ವ್ಯಾಪಾರಿ ಅಜಿತ್.

      ದೀಪಾವಳಿಯಂದು ಶ್ರೀರಾಮ ರಾವಣನನ್ನು ಗೆದ್ದು, ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದನೆಂದು ಹೇಳಲಾಗುತ್ತದೆ. ಅಮಾವಾಸ್ಯೆಯ ಹಿಂದಿನ ದಿನ ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದ್ದರಿಂದ ನರಕ ಚತುರ್ದಶಿ ಆಚರಣೆ ರೂಢಿಯಲ್ಲಿದೆ. ಅಮವಾಸ್ಯೆ ಮರುದಿನವೇ ಮಹಾವಿಷ್ಣುವು ವಾಮನಾವತಾರದಲ್ಲಿ ತ್ರಿವಿಕ್ರಮ ರೂಪ ತಾಳಿ, ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದದ್ದು, ಹಾಗಾಗಿ ಈ ದಿನವನ್ನು ಬಲಿ ಪಾಡ್ಯಮಿಯಾಗಿ ಆಚರಿಸಲಾಗುತ್ತದೆ. ಒಟ್ಟಾರೆ ದೀಪಾವಳಿಯು ಕೇಡಿನ ಮೇಲೆ ಶುಭದ ವಿಜಯವನ್ನು ಸಂಕೇತಿಸುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap