ಪ.ಪೂ. ಕಾಲೇಜುಗಳ ಖೋಖೋ ಪಂದ್ಯಾವಳಿಗೆ ತೆರೆ

ದಾವಣಗೆರೆ:

        ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಖೋಖೋ ಪಂದ್ಯಾವಳಿಗೆ ಸೋಮವಾರ ತೆರೆ ಬಿದ್ದಿದ್ದು, ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ದಾವಣಗೆರೆ ತಂಡ ಹಾಗೂ ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡ ಚಾಂಪಿಯನ್‍ಶಿಪ್ ಪ್ರಶಸ್ತಿ ಪಡೆಸಿದೆ.

      ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ದಾವಣಗೆರೆ ತಂಡವು ದಕ್ಷಿಣ ಕನ್ನಡ ತಂಡವನ್ನು 15-13 ಮತ್ತು ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡವು ದಕ್ಷಿಣ ಕನ್ನಡ ತಂಡವನ್ನು 5-4 ಅಂತರದಿಂದ ಮಣಿಸಿ ವಿಜಯದ ಮಾಲೆ ಧರಿಸಿವೆ. ಇನ್ನೂ ಭಾರೀ ಪೈಪೋಟಿಸಿ ನೀಡಿದ ದಕ್ಷಿಣ ಕನ್ನಡ ತಂಡವು ಎರಡೂ ವಿಭಾಗಗಳಲ್ಲೂ ರನ್ನರ್ ಪ್ರಶಸ್ತಿ ಪಡೆದಿದೆ.

      ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡವು 13-12 ಅಂತರದಿಂದ ಚಿಕ್ಕೋಡಿ ತಂಡವನ್ನು ಹಾಗೂ ದಾವಣಗೆರೆ ತಮಡವು 16-13 ಅಂತರದಿಂದ ಮೈಸೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದವು. ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡವು 9-2 ಅಂತರದಿಂದ ತುಮಕೂರು ತಂಡವನ್ನು ಮತ್ತು ಮೈಸೂರು ತಂಡವು 16-5 ಅಂತರದಿಂದ ಉತ್ತರ ಕನ್ನಡ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು.

       ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ತಂಡದ ಮರಿಯಪ್ಪ, ಬೆಸ್ಟ್ ಚೇಜರ್ ಪ್ರಶಸ್ತಿಯನ್ನು ದಾವಣಗೆರೆ ತಂಡದ ಶಂಕರ್, ಬೆಸ್ಟ್ ಆಲ್‍ರೌಂಡರ್ ಪ್ರಶಸ್ತಿಯನ್ನು ದಾವಣಗೆರೆಯ ಪುನಿತ್ ಕುಮಾರ್ ಪಡೆದುಕೊಂಡರು. ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಮೈಸೂರು ತಂಡದ ಚೈತ್ರಾ, ಬೆಸ್ಟ್ ಚೇಜರ್ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ತಂಡದ ಸುಮಿತ್ರಾ, ಬೆಸ್ಟ್ ಆಲ್‍ರೌಂಡರ್ ಪ್ರಶಸ್ತಿಯನ್ನು ಮೈಸೂರು ತಂಡದ ಎಸ್.ವಿನುತಾ ತಮ್ಮದಾಗಿಸಿಕೊಂಡರು.

       ಸಂಜೆ ನಡೆದ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಹೆಚ್.ಕೆ.ಶೇಖರಪ್ಪ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap