ಅಖಂಡ ಭಾರತದ ನಿರ್ಮಾತೃ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್

0
18

ಮಧುಗಿರಿ :

        ಸ್ವಾತಂತ್ರೋತ್ತರ ಭಾರತದಲ್ಲಿ ಸುಮಾರು 565 ಪ್ರತ್ಯೇಕ ರಾಜಮನೆತನಗಳಡಿಯಲ್ಲಿ ಆಳಿಸಿಕೊಳ್ಳುತ್ತಿದ್ದ, ವಿವಿಧ ಭಾಷೆ, ಪ್ರಾಂತ್ಯಗಳಾಗಿ ಹಂಚಿಹೋಗಿದ್ದ ಪ್ರಾಂತ್ಯಗಳನ್ನು ಭಾರತೀಯ ಒಕ್ಕೂಟದ ಒಳಗೆ ವಿಲೀನಗೊಳಿಸುವಲ್ಲಿ ನಿಪುಣ ತಂತ್ರಗಾರಿಕೆ, ಧೃಢತೆಯನ್ನು ಮೆರೆದು ಅಖಂಡ ಭಾರತ ನಿರ್ಮಿಸಿದ ಕೀರ್ತಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್‍ರವರಿಗೆ ಸಲ್ಲಬೇಕು. ಅವರ ಆದರ್ಶಗಳನ್ನು ಇಂದಿನ ಯುವಜನತೆ ಅರಿಯುವ ಮೂಲಕ ಅಖಂಡ ಭಾರತದ ಕೀರ್ತಿಯನ್ನು ಹೆಚ್ಚಿಸಬೇಕೆಂದು ಪ್ರಾಂಶುಪಾಲರಾದ ನರಸಿಂಹಮೂರ್ತಿ ಟಿ.ಎನ್.ಕರೆ ನೀಡಿದರು.

          ಅವರು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಏಕತಾ ದಿವಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪಟೇಲ್‍ರವರದು ಬಹುಮುಖ ವ್ಯಕ್ತಿತ್ವ, ವಕೀಲ ವೃತ್ತಿನಡೆಸುತ್ತಾ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಅನೇಕ ಹೋರಾಟಗಳನ್ನು ರೂಪಿಸಿ ಯಶಸ್ವಿಗೊಳಿಸಿದ ಸ್ಥಿರಚಿತ್ತ ಮನಸ್ಸಿನ ಮುತ್ಸದ್ದಿತನ ಸಂಕೇತವಾಗಿದ್ದರು. ಖೇಡಾ, ಬಾರ್ಡೋಲಿ ಮುಂತಾದೆಡೆ ಕರನಿರಾಕರಣ ಚಳುವಳಿಯನ್ನು ಬಹುದೊಡ್ಡ ಮಟ್ಟದಲ್ಲಿ ಸಂಘಟಿಸಿ ಸರ್ದಾರ್ ಎಂಬ ಬಿರುದು ಪಡೆದ ಮೇರು ವ್ಯಕ್ತಿ.

        ಸ್ವಾತಂತ್ರ್ಯನಂತರದಲ್ಲಿ ಉಂಟಾದ ಜಟಿಲ ಪರಿಸ್ಥಿತಿಯಲ್ಲಿ ದೇಶದ ಏಕತೆಗೆ ಧಕ್ಕೆ ಒದುಗವಂಥ ಸಂಧರ್ಭದಲ್ಲಿ ಸಿಡಿಲಿನಂತೆ ಸಿಡಿದು ತಾಯ್ನೆಲವನ್ನು ಒಗ್ಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ನೆನಪಿನಲ್ಲಿ ನರ್ಮದಾ ಅಣೆಕಟ್ಟಿನ ಬಳಿ ವಿಶ್ವದಲ್ಲೇ ಅತಿ ಎತ್ತರದ ಪಟೇಲರ ಮೂರ್ತಿ ಲೋಕಾರ್ಪಣೆಗೊಳ್ಳುತ್ತಿರುವುದು ಭಾರತೀಯರೆಲ್ಲರಿಗೂ ಹೆಮ್ಮೆಯಾಗಿದೆ. ಇದು ಭಾರತದ ಏಕತೆ, ಧೃಢತೆ, ಸ್ಥಿರತೆಗಾಗಿ ಪಟೇಲರು ನೀಡಿದ ಅನನ್ಯವಾದ ಕೊಡುಗೆಯನ್ನು ಸ್ಮರಿಸಲು ಸಹಕಾರಿಯಾಗಿದೆ. ಪ್ರಸ್ತುತ ಯುವಜನತೆ ತಮ್ಮ ಕೆಲಸಕಾರ್ಯಗಳಲ್ಲಿ ಅವರ ಗುಣಗಳನ್ನು ಅಳವಡಿಸಿಕೊಂಡು, ಅವರ ಸ್ಥಿರ, ಧೃಢತೆ, ಏಕತೆಯನ್ನು ಅಳವಡಿಸಿಕೊಂಡಾಗ ಭಾರತವನ್ನು ಜ್ವಲಂತವಾಗಿ ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.

       ಎನ್.ಎಸ್.ಎಸ್. ಅಧಿಕಾರಿ ಮುನಿರಾಜ ಇ ಮಾತನಾಡಿ ಪ್ರತಿಯೊಂದು ದೇಶದಲ್ಲಿ ಕೆಲ ನಾಯಕರು ಉದಯಿಸುತ್ತಾರೆ. ನಾಯಕರು ಅಳಿದರೂ, ಅವರ ಕೊಡುಗೆ, ತತ್ವ ಸಿದ್ದಾಂತಗಳು ಚಿರಸ್ಥಾಯಿಯಾಗಿ, ಮುಂಬರುವ ಪೀಳಿಗೆಗೆ ದಾರಿದೀಪವಾಗಿ ಬೆಳಕಾಗುತ್ತದೆ. ಪಟೇಲರದು ಧೃಢ ವ್ಯಕ್ತಿತ್ವ, ಅವರ ಅಚಲ ನಿರ್ಧಾರಗಳಿಂದ ಭಾರತ ಸಧೃಢವಾಗಿ ಬೆಳೆಯಲು ಸಹಕಾರಿಯಾಯಿತು. ರಕ್ತರಹಿತವಾಗಿ ಎಲ್ಲರನ್ನೂ ಒಗ್ಗೂಡಿಸಿ ಅಖಂಡ ಭಾರತ ನಿರ್ಮಿಸಿ ವಿಶ್ವದ ಬೃಹತ್ ರಾಷ್ಟ್ರಗಳ ಪಾಲಿಗೆ ಭಾರತವನ್ನು ಸೇರಿಸಿದ ಕೀರ್ತಿ ಪಟೇಲರಿಗೆ ಸಲ್ಲುತ್ತದೆ. ಅವರ ಮಾರ್ಗದರ್ಶನ ಆದರ್ಶಪ್ರಾಯವಾದುದು. ಭಾರತದ ಮೊದಲ ಗೃಹಸಚಿವರಾಗಿ, ಉಪಪ್ರಧಾನಿಯಾಗಿ ಸಲ್ಲಿಸಿದ ಸೇವೆ ಆಧುನಿಕ ಭಾರತದ ಇಂದಿಗೂ ಪ್ರಸ್ತುತವಾಗಿದೆ ಎಂದರು.

          ಇದೇ ಸಂದರ್ಭದಲ್ಲಿ ಏಕತೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಸಿದರು. ಸಿದ್ದಗಂಗಾ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಬಿ.ಮಾರಪ್ಪ, ಉಪನ್ಯಾಸಕರಾದ ಲಕ್ಷ್ಮೀನಾರಾಯಣ ಆರ್, ಮಹೇಶ್ ಎ, ಕಛೇರಿ ಸಿಬ್ಬಂದಿ ರಹಮತ್, ಸುರೇಶ್ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here