ಮೋದಿ ಕಟ್ಟಿ ಹಾಕಲು ಚುನಾವಣಾ ಅಖಾಡಕ್ಕೆ ಇಳಿಯುವರೇ ಪ್ರಿಯಾಂಕಾ ?

0
3

ನವದೆಹಲಿ

       ಪ್ರಧಾನಿ ನರೇಂದ್ರ ಮೋದಿ ಅವರನ್ನು ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಕಟ್ಟಿಹಾಕಲು ಕಾಂಗ್ರೆಸ್ ಪಕ್ಷ ಯುವ ನಾಯಕಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸಲಿದೆಯೇ?

        ಉತ್ತರಪ್ರದೇಶದ ಚುನಾವಣಾ ಜವಾಬ್ದಾರಿಯನ್ನು ಹಾಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಮತ್ತು ಜ್ಯೋತಿರಾದಿತ್ಯ ಅವರಿಗೆ ವಹಿಸಿಕೊಟ್ಟ ನಂತರ ಉತ್ತರಪ್ರದೇಶದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಬೇಕು ಎಂಬ ಅಭಿಲಾಷೆ, ಒತ್ತಡ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರಿಂದ ಕೇಳಿ ಬರುತ್ತಲೇ ಇದೆ.

       ಮಳೆ ನಿಂತರೂ, ಮರದ ಹನಿ ನಿಲ್ಲುವುದಿಲ್ಲ ಎಂಬ ಗಾದೆ ಮಾತಿನಂತೆ, ಈಗಾಗಲೇ ಚುನಾವಣೆಗೆ ಸ್ಪರ್ಧಿಸಲು ಒಲವು ಇಲ್ಲ ಎಂಬ ಮಾತುಗಳು ಪಕ್ಷದ ಮಟ್ಟದಲ್ಲಿ ಹರಿದಾಡುತ್ತಿದ್ದರೂ ಪ್ರಿಯಾಂಕಾ ಸ್ಪರ್ಧೆ ಮಾಡುತ್ತಾರಾ, ಇಲ್ಲವೇ ಪಕ್ಷದ ಗೆಲುವಿಗೆ ತಮ್ಮ ಶಕ್ತಿಯನ್ನು ಧಾರೆ ಎರೆಯುತ್ತಾರೆಯೇ ಎಂಬುದು ಇನ್ನೂ ನಿಗೂಢವಾಗಿದೆ. ಈಗಾಗಲೇ ಮೊದಲ ಹಂತದ ಚುನಾವಣೆ ಮುಗಿದು ಹೋಗಿದೆ.

      ವಾರಾಣಸಿಯಲ್ಲಿ ಪ್ರಧಾನಿ ಮೋದಿ ಅವರನ್ನು ಕಟ್ಟಿಹಾಕಬೇಕಾದರೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕಾದರೆ, ಪ್ರಿಯಾಂಕಾ ಅವರನ್ನು ಮೋದಿ ವಿರುದ್ಧ ಕಣಕ್ಕೆ ಇಳಿಸಲೇಬೇಕು ಎಂಬ ಅಭಿಪ್ರಾಯ ಕಾಂಗ್ರೆಸ್ ನಾಯಕರಲ್ಲಿ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಲೇ ಇದೆ.

      ಶತಮಾನಗಳಷ್ಟು ಹಳೆಯದಾದ ಪಕ್ಷದ ಗತವೈಭವವನ್ನು ಮರಳಿ ಸ್ಥಾಪಿಸಲು ಯುವ ನಾಯಕತ್ವ ಬಹಳ ಮುಖ್ಯವಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಮೋದಿ ಅವರನ್ನು ಕಟ್ಟಿಹಾಕಲು ಪ್ರಿಯಾಂಕಾ ಅವರಿಂದ ಸಾಧ್ಯವಿದೆ. ಹೀಗಾಗಿ ಅವರನ್ನು ಕಣಕ್ಕೆ ಇಳಿಸಲೇಬೇಕು. ಇದರಿಂದ ಪಕ್ಷಕ್ಕೆ ಹೆಚ್ಚು ಲಾಭವಾಗಲಿದೆ. ದೇಶಾದ್ಯಂತ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಬಲಿಯಲಿದೆ. ಕಾಂಗ್ರೆಸ್ ಪುನಶ್ಚೇತನಕ್ಕೆ ಇದೊಂದು ದೊಡ್ಡ ಚೇತರಿಕೆಯ ಟಾನಿಕ್ ಆಗಬಲ್ಲದು ಎಂಬ ಕಾರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು, ಚುನಾವಣೆಯ ದಿನಗಳು ಹತ್ತಿರ ಬರುತ್ತಿದ್ದಂತೆಯೇ, ಪ್ರಿಯಾಂಕಾ ಬರಬೇಕು, ಪ್ರಿಯಾಂಕಾ ಚುನಾವಣೆಗೆ ನಿಲ್ಲಬೇಕು, ಅವರಿಂದ ಪಕ್ಷಕ್ಕೆ ಹೆಚ್ಚು ಚೈತನ್ಯ ಬರುತ್ತದೆ. ಮೋದಿಯನ್ನು ಕಟ್ಟಿಹಾಕಲು ಸದ್ಯದ ಪರಿಸ್ಥಿತಿಯಲ್ಲಿ ಅವರೊಬ್ಬರೇ ಸಮರ್ಥರು ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ನಿತ್ಯವೂ ಗುನುಗುನಿಸುತ್ತಿವೆ.

      ಈ ಕುರಿತು ಎಐಸಿಸಿ ಮಾಧ್ಯಮ ವಕ್ತಾರ ರಣ್‌ದೀಪ್‌ ಸಿಂಗ್ ಸುರ್ಜೇವಾಲಾ ಪ್ರತಿಕ್ರಿಯೆ ನೀಡಿ, ಕಾರ್ಯಕರ್ತರು ಮತ್ತು ನಾಯಕರಲ್ಲಿ ಪ್ರಿಯಾಂಕಾ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ಕೇಳಿಬರುತ್ತಿರುವುದು ಸತ್ಯ. ಆದರೆ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ. ಒಂದು ವೇಳೆ ಅಂತಹ ಮಹತ್ವದ ನಿರ್ಧಾರ ತೆಗೆದುಕೊಂಡರೆ ಅದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ಮುಗುಂ ಆಗಿ ಹೇಳಿದ್ದಾರೆ.

        ರಾಜ್ಯದಲ್ಲಿ ಹೇಗಾದರೂ ಮಾಡಿ ಕಾಂಗ್ರೆಸ್ ಪಕ್ಷವನ್ನು ಚೇತರಿಕೆ ಮಾಡಲೇಬೇಕು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಂಡಿತ್ತು. ಮೋದಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿತ್ತು. ಇನ್ನು ರಾಜ್ಯದ ಮಟ್ಟಿಗೆ ಹೇಳುವುದಾದರೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು, ಸುಮಾರು 30 ವರ್ಷಗಳೇ ಕಳೆಯುತ್ತಾ ಬಂದಿದೆ. ಇಂತಹ ಸನ್ನಿವೇಶದಲ್ಲಿ ಬಿಜೆಪಿ ವಿರುದ್ಧ ಸೆಟೆದು ನಿಲ್ಲಲು ವಿಶೇಷವಾಗಿ ಮೋದಿ ಅವರನ್ನು ಕಟ್ಟಿಹಾಕಲು ಪ್ರಿಯಾಂಕಾ ಗಟ್ಟಿ ನಿರ್ಧಾರ ಮಾಡಲೇಬೇಕು ಎಂದು ನಾಯಕರು ಹೇಳುತ್ತಲೇ ಬರುತ್ತಿದ್ದಾರೆ.

       “ರಾಜಕೀಯದ ಬಗ್ಗೆ ನನಗೆ ಆಸಕ್ತಿ ಇಲ್ಲ. ಹಾಗೆಂದ ಮಾತ್ರಕ್ಕೆ ಪಕ್ಷ ಹೇಳಿದ ಮಾತನ್ನು ನಿರಾಕರಿಸುವ ಅಹಂಕಾರದ ಭಾವನೆಯೂ ನನ್ನದಲ್ಲ. ಒಂದು ವೇಳೆ ಪಕ್ಷ ವಾರಾಣಸಿಯಲ್ಲಿ ಕಣಕ್ಕಿಳಿಯಬೇಕೆಂದು ಬಯಸಿದಲ್ಲಿ ನಾನು ಸಿದ್ಧಳಿದ್ದೇನು. ಈ ಬಗ್ಗೆ ಪಕ್ಷವೇ ಒಂದು ಅಂತಿಮ ತೀರ್ಮಾನಕ್ಕೆ ಬರಬೇಕು” ಎಂದು ಪ್ರಿಯಾಂಕಾ ತಮ್ಮ ಮನದಾಳದ ಅಭಿಪ್ರಾಯವನ್ನು ಪ್ರಕಟಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸೋಲಿಸಲು ಬಿಎಸ್‌ಪಿ ಮತ್ತು ಎಸ್‌ಪಿ ತಮ್ಮ ಹಳೆಯ ವೈರತ್ವವನ್ನು ಮರೆತು ಒಂದಾಗಿವೆ.

       80 ಸ್ಥಾನಗಳ ಪೈಕಿ, ತಲಾ 37 ಸ್ಥಾನಗಳನ್ನು ಬಿಎಸ್‌ಪಿ ಮತ್ತು ಎಸ್‌ಪಿ ಸಮನಾಗಿ ಹಂಚಿಕೊಂಡಿವೆ. ಅಮೇಥಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿದೆ. ಆ ಎರಡೂ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದು ಎರಡೂ ಪಕ್ಷಗಳು ಘೋಷಣೆ ಮಾಡಿವೆ. ಯಾವಾಗ ಕಾಂಗ್ರೆಸ್ ಜೊತೆ ಮೈತ್ರಿ ರಾಜಕಾರಣಕ್ಕೆ ಎಸ್‌ಪಿ – ಬಿಎಸ್‌ಪಿ ಮುಂದಾಗಲಿಲ್ಲವೋ, ಅಂದಿನಿಂದಲೇ ಪ್ರಿಯಾಂಕಾ ರಾಜಕೀಯಕ್ಕೆ ಬರಬೇಕು, ವಾರಾಣಸಿಯಿಂದ ಸ್ಪರ್ಧಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

       ಅಖಿಲ ಭಾರತ ಮಟ್ಟದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಶೋಚನೀಯವಾಗಿದೆ. ಒಂದು ಹುಲ್ಲು ಕಡ್ಡಿ ಸಿಕ್ಕಿದರೂ ಅದನ್ನು ಹಿಡಿದುಕೊಂಡು ಮೇಲಕ್ಕೆ ಏಳುವಂತಹ ದಯನೀಯ ಪರಿಸ್ಥಿತಿಗೆ ಬಂದಿದೆ. 2009ರ ಲೋಕಸಭಾ ಚುನಾವಣೆಯಲ್ಲೂ ಪಕ್ಷ ಉತ್ತರಪ್ರದೇಶದ ಮಟ್ಟಿಗೆ ಹೇಳುವುದಾದರೆ ಅಂತಹ ಸಾಧನೆಯನ್ನು ಮಾಡಿಲ್ಲ ಎಂಬುದನ್ನು ಅಂಕಿ ಅಂಶಗಳೇ ಸಾರುತ್ತವೆ.

      80 ಲೋಕಸಭಾ ಕ್ಷೇತ್ರಗಳ ಪೈಕಿ 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ 21 ಸ್ಥಾನಗಳನ್ನು ಮಾತ್ರ. ಆದರೆ 2014 ರಲ್ಲಿ ಮಾತ್ರ ಪರಿಸ್ಥಿತಿ ಸಂಪೂರ್ಣ ತಿರುವು ಮುರುವಾಯಿತು. ರಾಹುಲ್ ಮತ್ತು ಸೋನಿಯಾ ಗಾಂಧಿ ಬಿಟ್ಟರೆ ಮೋದಿ ಅಬ್ಬರ ಪ್ರವಾಹದಲ್ಲಿ ಕಾಂಗ್ರೆಸ್ ನ ಯಾವ ಅಭ್ಯರ್ಥಿಯೂ ಗೆಲ್ಲಲಿಲ್ಲ. ಇನ್ನೂ ವಿಶೇಷ ಎಂದರೆ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಠೇವಣಿ ಕೂಡ ಸಿಗಲಿಲ್ಲ.

       ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಂಡಿತ ನಿಖರವಾಗಿ ಭವಿಷ್ಯ ನುಡಿದಿರಲಿಲ್ಲ. ಆದರೆ ಉತ್ತರಪ್ರದೇಶದ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಬಹುಮತ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಂದಿತು. ಆಗ ಇದೇ ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಒಂದು ಮಾತು ಹೇಳಿದ್ದರು. ಅದೇನೆಂದರೆ “ನಾವು 2019ರ ಲೋಕಸಭಾ ಚುನಾವಣೆಯನ್ನು ಈಗಲೇ ಮರೆತುಬಿಡುವುದು ಒಳ್ಳೆಯದು”.

        ಇದಾದ ನಂತರ ಬಿಹಾರದ ರಾಜಕಾರಣದಲ್ಲೂ ಸಾಕಷ್ಟು ಬದಲಾವಣೆಯಾಯಿತು. ಮೊದಲಿಗೆ ಮೋದಿ ವಿರೋಧಿಯಾಗಿದ್ದ ನಿತೀಶ್ ಕುಮಾರ್, ಲಾಲೂಗೆ ಡಿಕ್ಕಿ ಹೊಡದು ಮತ್ತೆ ಬಿಜೆಪಿಯನ್ನು ಅಪ್ಪಿಕೊಂಡರು. ಆ ನಂತರವೂ ದೇಶದ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸಲು ಪ್ರಾರಂಭವಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಆಗ ಕೇಂದ್ರ ಸಚಿವ ರಾಮ್‌ ವಿಲಾಸ್ ಪಾಸ್ವಾನ್, ಒಮರ್ ಅಬ್ದುಲ್ಲಾ ಮಾತಿನ ಪ್ರತಿರೂಪದಂತೆ ಮತ್ತೊಂದು ರಾಜಕೀಯ ಪಂಡಿತರು ಗಮನಿಸಲೇಬೇಕಾದ ಹೇಳಿಕೆ ನೀಡಿದ್ದರು. “ 2019 ರ ಚುನಾವಣೆ ಮಾತ್ರವಲ್ಲ. 2024 ರ ಸಾರ್ವತ್ರಿಕ ಚುನಾವಣೆಯನ್ನು ವಿರೋಧ ಪಕ್ಷಗಳು ಮರೆಯಬೇಕು” ಎಂದು ಅಚ್ಚರಿಕೆ ಹೇಳಿಕೆ ನೀಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here