ಅಂಬಿಗೆ ಮುಖ್ಯಮಂತ್ರಿ ಹುದ್ದೆಗೇರುವ ಸಾಮರ್ಥ್ಯವಿತ್ತು….!!

ಬೆಂಗಳೂರು

     ಚಿತ್ರರಂಗದಲ್ಲಿದ್ದ ಶ್ರೆದ್ಧೆ, ಬದ್ಧತೆಯನ್ನು ರಾಜಕಾರಣದಲ್ಲಿ ಪ್ರದರ್ಶಿಸಿದ್ದ ಅಂಬರೀಷ್ ರಾಜಕೀಯ ಕ್ಷೇತ್ರದಲ್ಲಿ ಬಾನೆತ್ತರಕ್ಕೆ ಏರುತ್ತಿದ್ದರು.ಚಿತ್ರರಂಗದಂತೆ ರಾಜಕಾರಣದಲ್ಲೂ ಅವರ ಸಾಧನೆ ಕಡಿಮೆಯೇನು ಅಲ್ಲ. ಆದರೆ ನಿರೀಕ್ಷಿತ ಮಟ್ಟದಲ್ಲಿ ರಾಜಕಾರಣದಲ್ಲಿ ಮೇಲೆರಲಿಲ್ಲ. ಸಕ್ರಿಯವಾಗಿ ರಾಜಕಾರಣದಲ್ಲಿ ಮುಂದುವರೆದಿದ್ದರೆ ಒಂದಲ್ಲಾ ಒಂದು ದಿನ ಅವರು ಮುಖ್ಯಮಂತ್ರಿ ಹುದ್ದೆಗೇರುವ ಸಾಮಥ್ರ್ಯ ಪಡೆಯುತ್ತಿದ್ದರು.

       ಚಿತ್ರರಂಗದಲ್ಲಿ ತಮಿಳಿನ ಎಂ.ಜಿ.ಆರ್., ತೆಲುಗಿನ ಎನ್.ಟಿ.ಆರ್. ಅವರಂತೆ ಭಾರೀ ಸಾಧನೆ ಮಾಡದಿದ್ದರೂ ಅವರ ಹಾದಿಯಲ್ಲಿ ಸ್ಪಷ್ಟವಾಗಿ ಸಾಗುತ್ತಿದ್ದರು.

        ಯುಪಿಎ ಸರ್ಕಾರದ ಅವಧಿಯಲ್ಲಿ ಅಂಬರೀಷ್ ಅವರನ್ನು ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವರನ್ನಾಗಿ ಮಾಡಲಾಗಿತ್ತು. ಆದರೆ ಅವರು ಒಮ್ಮೆಯೂ ದೆಹಲಿಯ ತಮ್ಮ ಕಚೇರಿಗೆ ಭೇಟಿ ನೀಡಲಿಲ್ಲ. ಸಚಿವ ಸ್ಥಾನವನ್ನು ಅವರು ಗಂಭೀರವಾಗಿ ಪರಿಗಣಿಸಲಿಲ್ಲ. ಜತೆಗೆ ಸಂಸತ್ತಿನಲ್ಲೂ ಸಹ ಅವರು ನಿಯಮಿತವಾಗಿ ಪಾಲ್ಗೊಳ್ಳುತ್ತಿರಲಿಲ್ಲ. ಅವರ ಹಾಜರಾತಿ ಅತಿ ಕಡಿಮೆ ಪ್ರಮಾಣದಲ್ಲಿತ್ತು.

        ಇನ್ನು ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದಾಗ ಹಿಂದಿನಂತೆ ನಿರ್ಲಕ್ಷ್ಯ ತೋರಲಿಲ್ಲ. ಅಧಿಕಾರಿಗಳ ಸಭೆ ಕರೆದು ಬಡವರಿಗೆ ಸೂರು ಒದಗಿಸಲು ಸಾಕಷ್ಟು ರೀತಿಯಲ್ಲಿ ಪ್ರಯತ್ನ ನಡೆಸಿದ್ದರು. ಆದರೆ ಅಷ್ಟರಲ್ಲಾಗಲೇ ಅವರಿಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗಿತ್ತು.

       22 ವರ್ಷಗಳ ಕಾಲ ರಾಜಕೀಯದಲ್ಲಿದ್ದ ಅಂಬರೀಶ್, ರಾಜಕೀಯ ಕ್ಷೇತ್ರದಲ್ಲಿ ಹಲವು ಏಳು ಬೀಳುಗಳನ್ನು ಕಂಡವರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಂಬರೀಶ್ “ಬೇಕಿದ್ದರೆ ನನ್ನ ಮನೆಗೆ ಬಂದು ಬಿ ಫಾರ್ಮ್ ತಂದುಕೊಡುತ್ತಾರೆ ,” ಎಂದು ನೀಡಿದ್ದ ಹೇಳಿಕೆ, ಅದರಂತೆ ಕಾಂಗ್ರೆಸ್ ಅವರ ಮನೆ ಬಾಗಿಲಿಗೆ ಬಿ ಫಾರ್ಮ್ ತೆಗೆದುಕೊಂಡು ಹೋಗಿ ನೀಡಿದ್ದು, ಅಂಬರೀಶ್ ಅವರ ವರ್ಚಸ್ಸನ್ನು ತೋರಿಸುತ್ತದೆ. ಆದರೆ, ಆ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವಲ್ಲಿ ಅಂಬರೀಶ್ ಹೆಚ್ಚು ಮುತುವರ್ಜಿ ತೋರಲಿಲ್ಲ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಚೆನ್ನಾಗಿ ಗೊತ್ತು.

        ಚಿತ್ರರಂಗದಲ್ಲಿ  ಖ್ಯಾತಿಯ ಉತ್ತುಂಗದಲ್ಲಿದ್ದ ಅಂಬರೀಶ್ 90ರ ದಶಕದಲ್ಲಿ ರಾಜಕೀಯದತ್ತ ಮುಖ ಮಾಡಿದರು. 1994ರಲ್ಲಿ ರಾಮನಗರ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದ ಎಚ್?.ಡಿ.ದೇವೇಗೌಡರು ನಂತರ ಪ್ರಧಾನಮಂತ್ರಿಯಾದರು.  ದೇವೇಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜನತಾ ದಳ ತಾರಾ ವರ್ಚಸ್ಸಿನ ಅಂಬರೀಶ್ ಅವರನ್ನು ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿಸಿತ್ತು. ದೇವೇಗೌಡರ ವಿರುದ್ಧ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ 9,594 ಮತಗಳಿಂದ ಪರಾಭವಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಎಂ.ಸಿ.ಲಿಂಗಪ್ಪ ಹೆಚ್ಚು ಕಡಿಮೆ ಇಷ್ಟೇ ಮತಗಳ ಅಂತರದಿಂದ ಅಂಬರೀಷ್ ಅವರನ್ನು ಮಣಿಸಿದ್ದರು.

          1998ರಲ್ಲಿ ಎದುರಾದ ಲೋಕಸಭೆ ಚುನಾವಣೆಯಲ್ಲಿ ಜನತಾ ದಳ ಅಂಬರೀಶ್ ಅವರನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಿತು. ಅವರ ವಿರುದ್ಧ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಜಿ. ಮಾದೇಗೌಡರನ್ನು ಅಂಬರೀಶ್ 1.80 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ, ಇದರ ಮರುವರ್ಷ ಸರ್ಕಾರ ಪತನವಾದ್ದರಿಂದ ಮತ್ತೆ ಚುನಾವಣೆ ಅನಿವಾರ್ಯವಾಗಿತ್ತು.

         ಈ ವೇಳೆಗಾಗಲೇ ಜನತಾ ದಳ ಜೆಡಿಎಸ್ ಮತ್ತು ಜೆಡಿಯುಗಳಾಗಿ ಎರಡು ಹೋಳಾಗಿತ್ತು. ಅಂಬರೀಶ್ ಈ ಎರಡು ಪಕ್ಷಗಳಲ್ಲಿ ಗುರುತಿಸಿಕೊಳ್ಳದೆ ಕಾಂಗ್ರೆಸ್ ಸೇರಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ, ಸಂಸದರಾಗಿ ಆಯ್ಕೆಯಾದರು.

          ರಾಷ್ಟ್ರ ರಾಜಕಾರಣ ಸಾಕೆಂದು ರಾಜ್ಯ ರಾಜಕಾರಣಕ್ಕೆ ಹಿಂದಿರುಗಿದ ಅಂಬರೀಶ್? ಅವರು 2008ರ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ, ಜೆಡಿಎಸ್?ನ ರಮೇಶ್? ಬಂಡೀಸಿದ್ದೇಗೌಡ ವಿರುದ್ಧ 5,160 ಮತಗಳನ್ನು ಕಡಿಮೆ ಪಡೆಯುವ ಮೂಲಕ ವಿಧಾನಸಭೆಗೆ ಸ್ಪರ್ಧಿಸಿದ್ದ ಎರಡನೇ ಬಾರಿಗೂ ಮುಖಭಂಗ ಅನುಭವಿಸಿದರು.

           ಅದರ ಮರುವರ್ಷವೇ ನಡೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ, ಎನ್.ಚೆಲುವರಾಯಸ್ವಾಮಿ ವಿರುದ್ಧ  ಮತ್ತೊಮ್ಮೆ ಸೋಲಿನ ರುಚಿ ಕಂಡರು. ರಾಷ್ಟ್ರ ರಾಜಕಾರಣಕ್ಕೆ ಸಂಪೂರ್ಣವಾಗಿ ಗುಡ್?ಬೈ ಹೇಳಿದ ಅಂಬರೀಶ್ 2013ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ 42,937 ಬೃಹತ್ ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ಒಟ್ಟಾರೆ ಅಂಬರೀಶ್ ತಮ್ಮ ರಾಜಕೀಯ ಜೀವನದಲ್ಲಿ ಎದುರಿಸಿದ ಏಳು ಚುನಾವಣೆಗಳಲ್ಲಿ (ಮೂರು ವಿಧಾನಸಭೆ, ನಾಲ್ಕು ಲೋಕಸಭೆ) ನಾಲ್ಕು ಬಾರಿ ಗೆಲುವು ಸಾಧಿಸಿದರೆ, ಮೂರು ಬಾರಿ ಸೋಲಿನ ಕಹಿ ಸವಿದಿದ್ದಾರೆ.

        ಅಂಬರೀಶ್ ಅವರ ರಾಜಕೀಯ ಜೀವನದ ಮೇಲೆ ಒಮ್ಮೆ ಕಣ್ಣಾಯಿಸಿದಾಗ ಅದು ಏಳು ಸುತ್ತಿನ ಕೋಟೆಯಾಗಿಯೇ ಇತ್ತು. ಒಮ್ಮೊಮ್ಮೆ ರಾಜಕೀಯದಲ್ಲಿ ತಟಸ್ಥರಾದರು ಎಂಬಂತೆ ಕಂಡುಬಂದರೂ ಮತ್ತೊಮ್ಮೆ ಫಿನಿಕ್ಸ್‍ನಂತೆ ಎದ್ದು ಬರುತ್ತಿದ್ದರು. ರಾಜಕೀಯದಲ್ಲಿ ತಾವು ಇದ್ದರೂ, ಇಲ್ಲದಿದ್ದರೂ ಎಷ್ಟು ಪ್ರಬಲ ಎಂಬುದಕ್ಕೆ ಕಳೆದ ವಿಧಾನಸಭೆ ಚುನಾವಣೆಯೇ ಸಾಕ್ಷಿಯಾಗಿತ್ತು. ಇದಕ್ಕೆ ಅವರಿಗಿದ್ದ ದೊಡ್ಡ ಅಭಿಮಾನಿಗಳ ಬಳಗ, ಹಳೇ ಮೈಸೂರು ಭಾಗದಲ್ಲಿ ಗೌಡ ಸಮುದಾಯದ ಶಕ್ತಿ ಇವುಗಳು ಕಾರಣವಾಗಿರಬಹುದು. ಒಂದು ವೇಳೆ ಅಂಬರೀಶ್ ನಟನಾಗಿ ತೋರಿದ ಸಂವೇದನಾಶೀಲತೆಯನ್ನು ರಾಜಕೀಯ ಕ್ಷೇತ್ರದಲ್ಲೂ ತೋರಿದ್ದರೆ ಬಹುಶಃ ಅವರು ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಮಟ್ಟದ ಹೆಸರು ಗಳಿಸುವುದು ಅವರಿಗೆ ಸವಾಲಿನ ಕೆಲಸವೇ ಆಗಿರುತ್ತಿರಲಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap