ಫಲಿತಾಂಶದಿಂದ ಬಿಜೆಪಿ ಕಂಗಾಲು

0
7

ಬೆಂಗಳೂರು

         ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮೈತ್ರಿಕೂಟ ಸಾಧಿಸಿದ ಗೆಲುವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಗುರಿಗೆ ದುಸ್ವಪ್ನವಾಗಿ ಪರಿಣಮಿಸಿದೆ.
ಕಳೆದ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭೆ ಕ್ಷೇತ್ರವನ್ನು ಗೆದ್ದುಕೊಂಡಿದ್ದ ಬಿಜೆಪಿ ಈ ಬಾರಿ ಅಲ್ಲಿ ಹೀನಾಯ ಸೋಲು ಅನುಭವಿಸಿದ್ದು, ಪ್ರಬಲ ಲಿಂಗಾಯತ ಸಮುದಾಯ ಸೇರಿದಂತೆ ಹಲ ಸಮುದಾಯಗಳು ಬಿಜೆಪಿಗೆ ತಿರುಗಿ ಬಿದ್ದಿರುವುದು ಸ್ಪಷ್ಟವಾಗಿದೆ.

         ಅದೇ ರೀತಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಗೆದ್ದುಕೊಂಡಿದ್ದ ಯಡಿಯೂರಪ್ಪ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರಾದರೆ ಈ ಬಾರಿ ಅವರ ಪುತ್ರ ರಾಘವೇಂದ್ರ ಐವತ್ತು ಸಾವಿರದಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

      ಅರ್ಥಾತ್,ಬಿಜೆಪಿಗೆ ಬಿದ್ದಿದ್ದ ಮತಗಳು ಈ ಬಾರಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟಕ್ಕೆ ವರ್ಗಾವಣೆಯಾಗಿರುವುದು ಕಣ್ಣಿಗೆ ಕಾಣುವಂತಿದೆ. ಇನ್ನು ಮಂಡ್ಯದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಿದ್ದರೂ ಕಾಂಗ್ರೆಸ್ ವಿರೋಧಿ ಮತಗಳನ್ನು ಸ್ವಲ್ಪ ಮಟ್ಟಿಗೆ ಎನ್‍ಕ್ಯಾಶ್ ಮಾಡಿಕೊಂಡಿದೆ.

       ಅಂದ ಹಾಗೆ ಯಡಿಯೂರಪ್ಪ ಅವರನ್ನು ಬೇಕೆಂದೇ ನಿರ್ಲಕ್ಷಿಸಲಾಗುತ್ತಿದೆ ಎಂಬ ಅಸಮಾಧಾನ ಲಿಂಗಾಯತ ಸಮುದಾಯದಲ್ಲಿದ್ದು ಮುಂದಿನ ಲೋಕಸಭಾ ಚುನಾವಣೆಯ ತನಕ ಅವರನ್ನು ಬಳಸಿಕೊಂಡು ನಂತರ ಮೂಲೆಗುಂಪು ಮಾಡಲಾಗುತ್ತದೆ ಎಂಬ ಅನುಮಾನ ಆ ಸಮುದಾಯದಲ್ಲಿ ಕಾಣಿಸಿಕೊಂಡಿದೆ.

       ಯಡಿಯೂರಪ್ಪ ಅವರಿಗೆ ಸಿಎಂ ಪಟ್ಟ ದಕ್ಕುವಂತಹ ವಾತಾವರಣವನ್ನು ನಿರ್ಮಿಸುವ ಬದಲು ಅದನ್ನು ತಪ್ಪಿಸಲು ಎಲ್ಲ ರೀತಿಯಲ್ಲೂ ಪಕ್ಷದ ಹೈಕಮಾಂಡ್ ಯತ್ನಿಸುತ್ತಿದೆ ಎಂಬ ಅನುಮಾನ ವ್ಯಾಪಕವಾಗುತ್ತಿದ್ದು ಈ ಅಂಶವೂ ಬಿಜೆಪಿಗೆ ದೊಡ್ಡ ಸಮಸ್ಯೆಯಾಗಿ ಕಾಡುವುದು ಸ್ಪಷ್ಟವಾಗಿದೆ.

        ಈ ಮಧ್ಯೆ ರಾಮನಗರ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೈತ್ರಿಕೂಟದ ಕ್ಯಾಂಡಿಡೇಟುಗಳು ಜಯಗಳಿಸಿದ್ದರೂ ಕಳೆದ ಬಾರಿಯೂ ಅಲ್ಲಿ ಯಥಾ ಪ್ರಕಾರ,ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳೇ ಜಯ ಗಳಿಸಿದ್ದರು
ಆದರೆ ಈ ಬಾರಿ ಮೈತ್ರಿ ಸಾಧಿತವಾದ ನಂತರ ಗೆಲುವಿನ ಅಂತರ ಹೆಚ್ಚಾಗಿರುವುದು ಸಹಜವಾಗಿಯೇ ಮೈತ್ರಿಕೂಟದ ಶಕ್ತಿಯನ್ನು ಹೆಚ್ಚಿಸಿದಂತಾಗಿದೆ.

        ಈ ಮಧ್ಯೆ ಬಿಜೆಪಿಯಲ್ಲಿ ದಿನ ಕಳೆದಂತೆ ಒಡಕು ಹೆಚ್ಚುತ್ತಿದ್ದು ಪಕ್ಷದ ನಾಯಕ ಸ್ಥಾನಕ್ಕೆ ಬರಲು ಹಲವರು ಒಳಗಿಂದೊಳಗೇ ಪೈಪೋಟಿ ನಡೆಸುತ್ತಿದ್ದಾರೆ.ಹೀಗಾಗಿ ಈ ಅಂಶವೂ ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿಯ ಶಕ್ತಿಯನ್ನು ಹೆಚ್ಚಿಸಲಿದೆ.
ಅಂದ ಹಾಗೆ ಕೇಂದ್ರ ಸರ್ಕಾರದ ಆರ್ಥಿಕ ಕ್ರಮಗಳಿಂದ ದೇಶದ ಜನತೆ ರೋಸತ್ತಿದ್ದು ದಿನ ಕಳೆದಂತೆ ಮೋದಿ ಹವಾ ಹಬ್ಬುವ ಬದಲು ಬಿಜೆಪಿಯೇ ಕಾದ ತವಾದ ಮೇಲೆ ಕೂರಲು ಸಜ್ಜಾಗಬೇಕಾಗಿದೆ.

       ಉತ್ತರ ಭಾರತದ ರಾಜ್ಯಗಳಲ್ಲಿ ಬಿಜೆಪಿಯ ವರ್ಚಸ್ಸು ಕುಗ್ಗುತ್ತಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಂದಷ್ಟು ಪ್ರಮಾಣದ ಕಡಿಮೆ ಸೀಟುಗಳು ಬಂದರೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಸೀಟುಗಳನ್ನು ಗೆಲ್ಲುವ ಮೂಲಕ ಆ ಕೊರತೆಯನ್ನು ನೀಗಿಸಿಕೊಳ್ಳಬೇಕು ಎಂದು ಬಿಜೆಪಿ ವರಿಷ್ಟರು ಯೋಚಿಸಿದ್ದರು.

       ಇದೇ ಕಾರಣಕ್ಕಾಗಿ ಕಳೆದ ಕೆಲ ಕಾಲದಲ್ಲಿ ತಮಿಳುನಾಡು, ಸೀಮಾಂಧ್ರ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದರು. ಆದರೆ ಕರ್ನಾಟಕದಲ್ಲಿ ಬದಲಾದ ಪರಿಸ್ಥಿತಿ ಈಗ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಹೇಗಾದರೂ ಮಾಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಬೇಕು ಎಂದು ಯೋಚಿಸಿದ್ದ ಬಿಜೆಪಿ ನಾಯಕರು, ಈಗ ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಹದಿನೈದು ಸೀಟುಗಳನ್ನು ಗಳಿಸಲೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

        ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ತೊರೆದು ಒಗ್ಗೂಡಿ ಹೋರಾಡಿದರೆ ಬಿಜೆಪಿಯನ್ನು ಸುಲಭವಾಗಿ ಮಣಿಸಬಹುದು ಎಂಬ ವಸ್ತುಸ್ಥಿತಿಯನ್ನೂ ಅರ್ಥ ಮಾಡಿಕೊಂಡಿವೆ.

      ಬಿಜೆಪಿಯ ಭದ್ರಕೋಟೆ ಅನ್ನಿಸಿಕೊಂಡಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿನ ಗೆಲುವು ಅದರ ಲೆಕ್ಕಾಚಾರಕ್ಕೆ ಮತ್ತಷ್ಟು ಬಲ ತುಂಬಿದ್ದು ಈ ಹಿನ್ನೆಲೆಯಲ್ಲಿ ಕಮಲ ಪಾಳೆಯ ಕಂಗಾಲಾಗಿರುವುದು ಸ್ಪಷ್ಟವಾಗಿದೆ.

      ತಾವು ಕಾಂಗ್ರೆಸ್ ಸೇರದಿದ್ದರೆ ಸಿಎಂ ಆಗುತ್ತಿರಲಿಲ್ಲ ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಮಾತು,ಅವರು ಪಕ್ಷದ ಬಗ್ಗೆ ಹೊಂದಿರುವ ಗೌರವ ಬಾವನೆಯ ಸಂಕೇತವಾಗಿ ಕಾಣಿಸುತ್ತಿದ್ದು,ಅದೇ ಕಾಲಕ್ಕೆ ಯಾವ ಕಾರಣಕ್ಕೂ ಅವರು ಪಕ್ಷದ ಶಕ್ತಿಯನ್ನು ಕುಗ್ಗಿಸುವ ಕೆಲಸಕ್ಕೆ ಕೈ ಹಾಕಲಾರೆ ಎಂಬ ಸಂದೇಶವನ್ನು ಈ ಚುನಾವಣೆಯ ಮೂಲಕ ರವಾನಿಸಿದ್ದಾರೆ.ಪರಿಣಾಮ ದಕ್ಷಿಣ ಭಾರತದ ಹೆಬ್ಬಾಗಿಲಿನಲ್ಲೇ ಭಾರೀ ಪ್ರತಿರೋಧವನ್ನು ಎದುರಿಸಿರುವ ಮತ್ತು ಲಿಂಗಾಯತ ಸಮುದಾಯದ ವಿಶ್ವಾಸ ಕಳೆದುಕೊಳ್ಳುತ್ತಿರುವ ಬಿಜೆಪಿ ಸಧ್ಯದ ಫಲಿತಾಂಶದಿಂದ ಕಂಗಾಲಾಗಿರುವುದಂತೂ ಸ್ಪಷ್ಟ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here