ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟದಲ್ಲಿ ಸಂಭ್ರಮಾಚರಣೆ

ಬೆಂಗಳೂರು

      ಉಪ ಚುನಾವಣೆಯ ಫಲಿತಾಂಶಕ್ಕೆ ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟದಲ್ಲಿ ಸಂಭ್ರಮಾಚರಣೆ ಕಂಡು ಬಂದಿದ್ದು, ಬಿಜೆಪಿ ಪಾಳಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಪ್ರತಿಕ್ರಿಯೆ ನೀಡಿ, ಜನಾದೇಶ ಮೈತ್ರಿಕೂಟದ ಪರವಾಗಿ ಬಂದಿದೆ. ತಮ್ಮ ಮೈತ್ರಿಕೂಟ ಉತ್ತಮ ಸಾಧನೆ ಮಾಡಲು ಸಹಕರಿಸಿದ ಎಲ್ಲರಿಗೂ, ಅದರಲ್ಲೂ ನಿರ್ದಿಷ್ಟವಾಗಿ ಕಾಂಗ್ರೆಸ್ ನಾಯಕರ ಸಹಕಾರವನ್ನು ಸ್ಮರಿಸುತ್ತೇವೆ. ಗೆಲುವಿನಿಂದ ನಾವು ಬೀಗುವುದಿಲ್ಲ. ಅಥವಾ ಮೈ ಮರೆಯುವುದಿಲ್ಲ. ಮುಂದಿನ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಪಕ್ಷ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

     ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮಾತನಾಡಿ, ರಾಜ್ಯದಲ್ಲಿ ಮೈತ್ರಿ ಪಕ್ಷಗಳಿಗೆ ಉತ್ತಮ ಫಲಿತಾಂಶ ದೊರೆತಿದೆ. ಮುಂಬರುವ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಯೇತರ ಪಕ್ಷಗಳು ಒಗ್ಗೂಡಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

        ಕಾಂಗ್ರೆಸ್ ಮತ್ತು ಜೆಡಿಎಸ್ ನ ಎಲ್ಲ ಕಾರ್ಯಕರ್ತರು ಮತ್ತು ಮುಖಂಡರು ಒಟ್ಟಾಗಿ ಕೆಲಸ ಮಾಡಿದ ಕಾರಣ ಈ ಫಲಿತಾಂಶ ಬಂದಿದೆ. ಶಿವಮೊಗ್ಗದಲ್ಲಿ ಸ್ವಲ್ಪ ಮೊದಲೇ ಅಭ್ಯರ್ಥಿ ಹಾಕಿದ್ದರೆ ಗೆಲ್ಲುವ ಅವಕಾಶ ಇತ್ತು. 50 ಸಾವಿರ ಮತಗಳ ಅಂತರದಿಂದ ಅಲ್ಲಿ ಸೋತಿರುವುದನ್ನು ಒಪ್ಪುತ್ತೇನೆ. ಹಳೇ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಕೆಲಸ ಮಾಡುತ್ತೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಜತೆ ಚುನಾವಣೆ ಎದುರಿಸುತ್ತೇವೆ. ರಾಹುಲ್ ಗಾಂಧಿ ಸೇರಿದಂತೆ ಸ್ಥಳೀಯ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರಗಳ ಹಂಚಿಕೆ ಪೂರ್ಣಗೊಳಿಸುತ್ತೇವೆ ಎಂದರು.

       ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿ, ಉಪ ಚುನಾವಣೆಯ ಫಲಿತಾಂಶದಿಂದ ನಾವು ಮತ್ತು ನಮ್ಮ ಪಕ್ಷ ಎದೆಗುಂದಿಲ್ಲ. ಮತದಾರರು ನೀಡಿದ ತೀರ್ಪು ಸ್ವಾಗತಾರ್ಹ. ಚುನಾವಣೆಯಲ್ಲಿ ಹಣ ಮತ್ತು ಹೆಂಡದ ಪಾತ್ರ ಹೆಚ್ಚಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಚುನಾವಣೆ ಗೆದ್ದಿವೆ ಎಂದು ಆಪಾದಿಸಿದರು. .

       ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ನಿರೀಕ್ಷಿತ ಮಟ್ಟದಲ್ಲಿ ನಾವು ಗೆದ್ದಿದ್ದೇವೆ. ಬಿಜೆಪಿಯ ವೈಫಲ್ಯಗಳಿಗೆ ಜನ ತಕ್ಕ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಜತೆ ಕಾಂಗ್ರೆಸ್ ಮಾಡಿಕೊಂಡಿರುವ ಮೈತ್ರಿಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಿಲ್ಲ. ಬದಲಾಗಿ ಉತ್ತಮ ಫಲಿತಾಂಶ ಬಂದಿದೆ. ಹಿಂದೆಂದಿಗಿಂತ ಪಕ್ಷಕ್ಕೆ ಎಲ್ಲಾ ಕಡೆ ಉತ್ತಮ ಮತ ಸಿಕ್ಕಿದೆ. ಇದು ಪ್ರಗತಿಯ ಸಂಕೇತವಾಗಿದ್ದು, ಮೈತ್ರಿ ಆಡಳಿತ ಇನ್ನಷ್ಟು ಬಲಗೊಂಡಿದೆ. ಇದು ಬಿಜೆಪಿಗೆ ಭಯ ಮೂಡಿಸಿರುವುದು ಸುಳ್ಳಲ್ಲ ಎಂದರು.

      ನಾವು ಎಲ್ಲಾ ಕಡೆ ಉತ್ತಮ ಅಭ್ಯರ್ಥಿ ಹಾಕಿದ್ದೆವು, ಐಕ್ಯತೆಯಿಂದ ಎಲ್ಲಾ ನಾಯಕರು ಕೆಲಸ ಮಾಡಿದ್ದಾರೆ. ಬಿಜೆಪಿ ಸುಳ್ಳು ಭರವಸೆ, ನಡಾವಳಿಕೆ, ನಕಾರಾತ್ಮಕ ರಾಜಕಾರಣದಿಂದ ಜನ ದೂರವಾಗಿದ್ದಾರೆ ಎನ್ನುವುದು ತೋರಿಸಿದೆ. ಬಿಜೆಪಿಯವರು ಜನರ ಪರವಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಅರಿವಾಗಿದೆ ಎಂದಿದ್ದಾರೆ.

      ಬಳ್ಳಾರಿ ಕ್ಷೇತ್ರದ ಜನತೆ ತಮ್ಮ ಮೇಲೆ ವಿಶ್ವಾಸವಿಟ್ಟು ಆಶಿರ್ವಾದ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‍ನ ವಿ.ಎಸ್. ಉಗ್ರಪ್ಪ, ಬಳ್ಳಾರಿ ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಇದು ನನ್ನ ಗೆಲುವಲ್ಲ, ಜನರ ಗೆಲುವು ಎಂದರು.
ಶ್ರೀರಾಮುಲು ಮಾತನಾಡಿ, ಬಳ್ಳಾರಿಯಲ್ಲಿನ ಸೋಲಿನ ಸೋಲಿನ ಹೊಣೆಯನ್ನು ತಾವೇ ಹೊರುವುದಾಗಿ ತಿಳಿಸಿದ್ದು, ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap