2019ರ ಲೋಕಸಭಾ ಚುನಾವಣೆ ಜನತೆಯಿಂದ ಬಿಜೆಪಿಗೆ ಸ್ಪಷ್ಟ ಎಚ್ಚರಿಕೆ

0
9

ಬೆಂಗಳೂರು

       ರಾಜ್ಯದಲ್ಲಿ ನಡೆದ ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟಕ್ಕೆ ಶಕ್ತಿ ನೀಡಿದ್ದು, ಬರುವ 2019ರ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಸ್ಪಷ್ಟ ಎಚ್ಚರಿಕೆ ಸಂದೇಶ ರವಾನಿಸಿದೆ.

      ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ವಿ.ಎಸ್. ಉಗ್ರಪ್ಪ ದಾಖಲೆಯ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ನಾಯಕರು ಗಣಿ ರೆಡ್ಡಿ ಪಡೆಯ ಕೋಟೆಯನ್ನು ಛಿದ್ರ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಮಧುಬಂಗಾರಪ್ಪ ವಿರುದ್ಧ ಬಿಜೆಪಿಯ ಬಿ.ವೈ. ರಾಘವೇಂದ್ರ ತಿಣುಕಾಡಿ ಗೆದ್ದಿದ್ದಾರೆ. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ವರ್ಚಸ್ಸಿಗೂ ಮೈತ್ರಿಕೂಟದ ನಾಯಕರು ಧಕ್ಕೆ ತಂದಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್‍ನ ಎಲ್.ಆರ್. ಶಿವರಾಮೇಗೌಡ ನಿರಾಯಾಸವಾಗಿ ಗೆಲುವಿನ ದಡ ಸೇರಿದ್ದಾರೆ.

       ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ, ಮುಖ್ಯಮಂತ್ರಿ ಅನಿತಾಕುಮಾರ ಸ್ವಾಮಿ ಮತ್ತು ಜಮುಖಂಡಿಯಲ್ಲಿ ಆನಂದ್ ನ್ಯಾಮಗೌಡ ಅನುಕಂಪದ ಅಲೆಯಲ್ಲಿ ಸುಗಮವಾಗಿ ತೇಲಿ ದಡ ಸೇರಿದ್ದಾರೆ.

        ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಎರಡು ದಶಕಗಳ ಹಿಂದೆ ಸ್ಪರ್ಧಿಸಿ ಗೆದ್ದಿದ್ದ ಈ ಕ್ಷೇತ್ರ ಇದೀಗ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಉಗ್ರಪ್ಪ ಅವರಿಗೆ ದಾಖಲೆ ಮತಗಳ ಅಂತರದ ಗೆಲುವು ಲಭಿಸಿದ್ದು, ಬಿಜೆಪಿಯ ಜೆ. ಶಾಂತಾ ಹೀನಾಯವಾಗಿ ಸೋತಿದ್ದಾರೆ.

       ಉಗ್ರಪ್ಪ ಬಳ್ಳಾರಿಯಲ್ಲಿ ಘರ್ಜಿಸಿದ್ದು, ಬಿ. ಶ್ರೀರಾಮುಲ ಸಹೋದರಿ ಜೆ. ಶಾಂತಾ ತಣ್ಣಗಾಗಿದ್ದಾರೆ. ಮೈತ್ರಿಕೂಟದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಉರುಳಿದ ದಾಳ ಯಶಸ್ವಿಯಾಗಿದ್ದು, ಡಿ.ಕೆ. ಶಿವಕುಮಾರ್ ಮತ್ತು ಜಾರಿಕಿಹೊಳಿ ಸಹೋದರರ ನಡುವಿನ ಜಗಳವನ್ನು ಲಾಭವಾಗಿ ಬಳಸಿಕೊಂಡು ತಮ್ಮ ನೆಚ್ಚಿನ ಭಂಟ ವಿ.ಎಸ್. ಉಗ್ರಪ್ಪ ಅವರನ್ನು ಲೋಕಸಭೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಕರೆಸಿಕೊಳ್ಳುತ್ತಿದ್ದ ಬಿ. ಶ್ರೀರಾಮುಲು ಅವರಿಗೆ ಈ ಫಲಿತಾಂಶ ಆಘಾತ ಉಂಟು ಮಾಡಿದ್ದು, ಅವರ ವರ್ಚಸ್ಸಿಗೆ ಧಕ್ಕೆಯಾಗಿದೆ. ಸತತ 14 ಚುನಾವಣೆಗಳಲ್ಲಿ ಗೆದ್ದು ನಂತರ ವನವಾಸ ಅನುಭವಿಸಿದ್ದ ಕಾಂಗ್ರೆಸ್‍ಗೆ ಈ ಚುನಾವಣೆ ಮುರು ಹುಟ್ಟು ನೀಡಿದೆ.

      ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಕೋಟೆಗೆ ಕಾಂಗ್ರೆಸ್ ನಾಯಕರು ಲಗ್ಗೆಯಿಟ್ಟಿದ್ದಾರೆ. ರೆಡ್ಡಿ ಪಡೆ ವಿರುದ್ಧ ಮೇಲ್ಮನೆ ಪ್ರತಿಪಕ್ಷ ನಾಯಕರಾಗಿದ್ದಾಗ ತೊಡೆತಟ್ಟಿದ್ದ, ಸಿಂಹ ಸ್ವಪ್ನವಾಗಿ ಕಾಡಿದ್ದ ವಿ.ಎಸ್ ಉಗ್ರಪ್ಪ ಇದೀಗ ಮತ್ತೊಮ್ಮೆ ದುಸ್ವಪ್ನವಾಗಿ ಕಾಡುವುದು ನಿಶ್ಚಿತವಾಗಿದೆ.

      ಕಳೆದ ವಿಧಾನಸಭೆ ಚುನಾವಣೆ ವೇಳೆ ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಅವರ ನಿರಾಯಾಸ ಗೆಲುವಿಗೆ ಅಡ್ಡಿಯಾಗಿದ್ದ ಬಿ.ಶ್ರೀರಾಮುಲುಗೆ ಬಳ್ಳಾರಿ ಜಿಲ್ಲೆಯ ಅವರ ತವರು ಕ್ಷೇತ್ರದಲ್ಲೇ ಕಾಂಗ್ರೆಸ್ ನಾಯಕರು ಪ್ರತ್ಯುತ್ತರ ನೀಡಿದ್ದಾರೆ.

      ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಸೇರಿ ಹಲವು ಸಚಿವರು, 50ಕ್ಕೂ ಹೆಚ್ಚು ಶಾಸಕರು, ಪ್ರಚಾರ ಕೈಗೊಳ್ಳುವ ಮೂಲಕ ರೆಡ್ಡಿ, ರಾಮುಲು ಬಳಗಕ್ಕೆ ಸಡ್ಡುಹೊಡೆದಿದ್ದರು.

     ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ 628163 ಪಡೆದು ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರಿಗಿಂತ 243271 ಮತಗಳ ಅಂತರದಿಂದ ವಿಜಯ ಸಾಧಿಸಿದರು. ಶಾಂತಾ ಅವರು 384892 ಮತ ಪಡೆದರು. ಪಕ್ಷೇತರ ಅಭ್ಯರ್ಥಿ ಪಂಪಾಪತಿ 7693, ಡಾ.ಶ್ರೀನಿವಾಸ್ 13704 ಮತ್ತು ನೋಟಾಗೆ 12403 ಮತಗಳು ಬಂದಿವೆ

    ಶಿವಮೊಗ್ಗ ಲೋಕಸಭಾ ಕ್ಷೇತ್ರದದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ, ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ 52,148 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಉದ್ಧಕ್ಕೂ ಸೋಲು ಗೆಲುವಿನ ಹಾವು ಏಣಿ ಆಟ ನಡೆದಿದ್ದು, ಅಂತಿಮವಾಗಿ ಬಿಜೆಪಿ ಗೆಲುವು ಸಾಧಿಸಿತು.

   ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ತೀವ್ರ ಹಿನ್ನೆಡೆಯಾಗಿದೆ. ಪಕ್ಷ ಮತಬ್ಯಾಂಕ್‍ಗೆ ಧಕ್ಕೆಯಾಗಿದೆ. ಇಬ್ಬರು ಮಾಜಿ ಮುಖ್ಯಮಂತ್ರಿ ಪುತ್ರರ ನಡುವೆ ಭಾರೀ ಪೈಪೋಟಿ ನಡೆದು ಅಲ್ಪ ಮತಗಳ ಅಂತರದಲ್ಲಿ ಬಿಜೆಪಿಯ ರಾಘವೇಂದ್ರ ಗೆಲುವು ಸಾಧಿಸಿರುವುದು ಯಡಿಯೂರಪ್ಪ ಅವರ ಭವಿಷ್ಯದ ರಾಜಕೀಯದ ಮೇಲೆ ಕರಿ ನೆರಳು ಬೀರುವಂತಾಗಿದೆ.

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಅವರು ತಮ್ಮ ಎದುರಾಳಿ ಬಿಜೆಪಿಯ ಡಾ: ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಅಭ್ಯರ್ಥಿ 3 ಲಕ್ಷದ 24 ಸಾವಿರದ 925 ಮತಗಳ ಅಂತರದಲ್ಲಿ ಭಾರೀ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಸಹ ಜೆಡಿಎಸ್ ಬೆಂಬಲಕ್ಕೆ ಬಂದಿರುವು ಇಲ್ಲಿ ಸ್ಪಷ್ಟವಾಗಿದೆ.

     ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಕಣದಿಂದ ನಿವೃತ್ತರಾದ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರ ವಿರುದ್ಧ ಲಕ್ಷದ 9, 137 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಅನಿತಾ ಕುಮಾರಸ್ವಾಮಿ ತಮ್ಮ ಪತಿ ಹೆಚ್.ಡಿ.ಕುಮಾರಸ್ವಾಮಿಗಿಂತಲೂ ಹೆಚ್ಚು ಅಂತರದಲ್ಲಿ ಜಯ ಸಾಧಿಸಿದ್ದು, ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ರಾಮನಗರ ಜಿಲ್ಲೆಯಲ್ಲಿ ಗಂಡ -ಹೆಂಡತಿ ದರ್ಬಾರ್ ಶುರುವಾಗಿದೆ. ಪತಿ ಚನ್ನಪಟ್ಟಣ, ಪತ್ನಿ ಅನಿತಾ ಕುಮಾರಸ್ವಾಮಿ ರಾಮನಗರ ಶಾಸಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

    ಇನ್ನು ಅನಿತಾ ಕುಮಾರಸ್ವಾಮಿ ಈ ಗೆಲುವಿನ ಮೂಲಕ ಹಲವು ದಾಖಲೆ ಬರೆದಿದ್ದು, ರಾಮನಗರದಿಂದ ವಿಧಾನಸಭೆ ಪ್ರವೇಶಿಸಿದ ಮೊದಲ ಮಹಿಳಾ ಶಾಸಕಿಯಾಗಿದ್ದಾರೆ. ಇದರ ಜೊತೆ ವಿಧಾನಸೌಧಕ್ಕೆ ಪತಿಯೊಂದಿಗೆ ಎಂಟ್ರಿಕೊಟ್ಟ ಮೊದಲ ಮಹಿಳೆ ಮತ್ತು ಪತಿ ಮುಖ್ಯಮಂತ್ರಿಯಾಗಿದ್ದಾಗಲೇ ಪತ್ನಿ ವಿಧಾನಸಭೆ ಮೆಟ್ಟಿಲೇರುತ್ತಿರುತ್ತಿರುವುದು ಸಹ ಇದೇ ಮೊದಲು.

     ಜಮಖಂಡಿಯಲ್ಲಿ ಕಾಂಗ್ರೆಸ್‍ನ ಆನಂದ್ ನ್ಯಾಮಗೌಡ ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ವಿರುದ್ಧ 39 ಸಾವಿರದ 480 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಕಳೆದ ಚುನಾವಣೆಯಲ್ಲಿ ಕಷ್ಟಪಟ್ಟು ಗೆದ್ದಿದ್ದ ಕಾಂಗ್ರೆಸ್‍ಗೆ ಈ ಬಾರಿ ದೋಸ್ತಿಯೋ ಅಥವಾ ಬಿಜೆಪಿಯೋ ಎಂಬ ಚರ್ಚೆ ತೀವ್ರಗೊಂಡಿತ್ತು. ಅಂತೂ ಅನುಕಂಪ ಆನಂದ್ ಅವರನ್ನು ಶಾಸಕರನ್ನಾಗಿ ಮಾಡುವಲ್ಲಿ ಸಫಲವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here