ಬಿಜೆಪಿಯ ತಂತ್ರಗಾರಿಕೆಯ ನಿಪುಣನ ಸಾವಿ ಗಣ್ಯರ ಕಂಬನಿ

ಬೆಂಗಳೂರು

       ರಾಜ್ಯ ಬಿಜೆಪಿಯ ತಂತ್ರಗಾರಿಕೆಯ ಮೆದುಳು ಎಂದೇ ಖ್ಯಾತರಾಗಿದ್ದ ಅಪ್ರತಿಮ ನಾಯಕ, ಸೋಲಿಲ್ಲದ ಸರದಾರ, ಉತ್ತಮ ಸಂಸದೀಯ ಪಟು ಅನಂತ ಕುಮಾರ್ ವಿಧಿವಶರಾಗಿದ್ದಾರೆ.

        ಅವರಿಗೆ 59 ವರ್ಷ ವಯಸ್ಸಾಗಿತ್ತು. ಪತ್ನಿ ತೇಜಸ್ವಿನಿ, ಇಬ್ಬರು ಹೆಣ್ಣು ಮಕ್ಕಳಾದ ಐಶ್ವರ್ಯ ಮತ್ತು ವಿಜೇತ, ಅಪಾರ ಬಂದು ಬಳಗ, ಅಭಿಮಾನಿಗಳನ್ನು ಅವರು ಅಗಲಿದ್ದಾರೆ.

       ಕಳೆದ ಮೂರು ತಿಂಗಳ ಹಿಂದೆ ಅನಂತ ಕುಮಾರ್ ಅವರಿಗೆ ಶ್ವಾಸಕೋಶ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಶ್ವಾಸಕೋಶದಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆದು ನಾಲ್ಕನೇ ಹಂತಪಕ್ಕೆ ತಲುಪಿತ್ತು. ನಂತರ ನಗರದಲ್ಲಿ ಚಿಕಿತ್ಸೆ ಪಡೆದಿದ್ದ ಅವರು ನಂತರ ಲಂಡನ್‍ನಲ್ಲೂ ಸ್ವಲ್ಪ ಕಾಲ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದರು. ತರುವಾಯ ನಗರದ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರು ಅಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ.

      ಅನಂತ್ ಕುಮಾರ್ ಅವರಿಗೆ ನಾಲ್ಕು ತಿಂಗಳ ಹಿಂದೆ ವಿಪರೀತ ಕೆಮ್ಮು ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆದರೂ ಕೆಮ್ಮು ವಾಸಿಯಾಗಿರಲಿಲ್ಲ. ನಂತರ ವಿವಿಧ ಪರೀಕ್ಷೆಗಳನ್ನು ನಡೆಸಿದಾಗ ಅವರಿಗೆ ಶ್ವಾಸಕೋಶ ಕ್ಯಾನ್ಸರ್ ವ್ಯಾಪಿಸಿರುವುದು ಪತ್ತೆಯಾಗಿತ್ತು.

        ಅನಂತಕುಮಾರ್, 1996ರಿಂದ ಆರು ಬಾರಿ ಸಂಸತ್ತಿನಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

         ಹಾಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದ ಅವರು, ಹಲವು ರಸಗೊಬ್ಬರ ಕಾರ್ಖಾನೆಗಳ ಪುನಶ್ಚೇತನ ಮಾಡುವಲ್ಲಿ ಶ್ರಮಿಸಿದ್ದರು. ಬೇವು ಲೇಪಿತ ರಸಗೊಬ್ಬರ ಉತ್ಪಾದನೆಗಾಗಿ ಶ್ರಮಿಸಿದ್ದರು. ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಜನೌಷಧಿ ಮಳಿಗೆಗಳಿಗೆ ಹೊಸ ಸ್ವರೂಪ ನೀಡಿದ್ದರು. ನಂತರ ಇದು ಪ್ರಧಾನಮಂತ್ರಿ ಜನೌಷಧಿ ಮಳಿಗೆಯಾಗಿ ಪರಿವರ್ತನೆಯಾಯಿತು. ಹೃದ್ರೋಗ, ಕ್ಯಾನ್ಸರ್ ಮತ್ತಿತರ ಆರೋಗ್ಯ ಸಮಸ್ಯೆಗಳ ನಿವಾರಣೆಯ ಔಷಧಿಗಳ ದರವನ್ನು ಕಡಿಮೆ ಮಾಡುವಲ್ಲಿಯೂ ಅವರು ಶ್ರಮಿಸಿದ್ದರು.

ಸಂಸದೀಯ ವ್ಯಹಾರಗಳ ಸಚಿವರಾಗಿ ಮೋದಿ ಸರ್ಕಾರವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಅತ್ಯಂತ ಸಮರ್ಥವಾಗಿ ಸಮರ್ಥಿಸಿಕೊಳ್ಳುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದರು. ಪ್ರತಿಪಕ್ಷಗಳಿಗೆ ತಮ್ಮ ಮಾತಿನ ವಾಗ್ಜರಿಯಿಂದ ತಕ್ಕ ಪ್ರತ್ಯುತ್ತರ ನೀಡುತ್ತಿದ್ದರು.

ಅನಂತ್ ಕುಮಾರ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅನಂತಕುಮಾರ್ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅನಂತಕುಮಾರ್ ಅವರ ನಿಧನದಿಂದ ದೇಶಕ್ಕೆ, ವಿಶೇಷವಾಗಿ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ತಮ್ಮ ಸಂದೇಶದಲ್ಲಿ ಅನಂತಕುಮಾರ್ ಅವರೊಂದಿಗಿನ ಹಲವು ವರ್ಷಗಳ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ವಿದ್ಯಾರ್ಥಿ ಚಳವಳಿಯ ದಿನಗಳಿಂದ ಸಂಸತ್ತಿನವರೆಗೆ ಅನಂತಕುಮಾರ್ ಅವರೊಂದಿಗೆ ತಾವು ಸಾಗಿಬಂದ ದಿನಗಳನ್ನು ಸ್ಮರಿಸಿದ್ದಾರೆ. ಅನಂತಕುಮಾರ್ ಅವರೊಬ್ಬ ಮುತ್ಸದ್ಧಿ ರಾಜಕಾರಿಣಿಯಾಗಿದ್ದರು ಎಂದು ಉಪರಾಷ್ಟ್ರಪತಿಗಳು ಬಣ್ಣಿಸಿದ್ದಾರೆ.

ಸಜ್ಜನ ರಾಜಕಾರಿಣಿ ಎಂದೇ ಹೆಸರಾಗಿದ್ದ ಅನಂತಕುಮಾರ್ ಅವರ ನಿಧನದಿಂದ ತಮ್ಮ ಒಬ್ಬ ಆಪ್ತ ಸಹೋದ್ಯೋಗಿ ಮತ್ತು ಮಿತ್ರನನ್ನು ಕಳೆದುಕೊಂಡಂತಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್, ತಮ್ಮ ಸಂದೇಶದಲ್ಲಿ ಅನಂತಕುಮಾರ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ್ದು, ದೇಶ ಒಬ್ಬ ನುರಿತ ರಾಜಕಾರಿಣಿಯನ್ನು ಕಳೆದುಕೊಂಡಿದೆ ಎಂದು ಶೋಕಿಸಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಷಾ ತಮ್ಮ ಸಂದೇಶದಲ್ಲಿ ಅನಂತಕುಮಾರ್ ಅವರ ಅಪ್ರತಿಮ ಸಂಘಟನಾ ಸಾಮಥ್ರ್ಯ, ಜೀವನೋತ್ಸಾಹ ಮತ್ತು ಕರ್ತವ್ಯ ಬದ್ಧತೆಗಳನ್ನು ಸ್ಮರಿಸಿದ್ದಾರೆ. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಳೆಸಿ, ಸಬಲಗೊಳಿಸುವಲ್ಲಿ ಅನಂತಕುಮಾರ್ ಅವರ ಅವಿರತ ಶ್ರಮವನ್ನು ಅಮಿತ್ ಷಾ ಸ್ಮರಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ಸಹ ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಸಮಾಚಾರ ಮತ್ತು ಪ್ರಸಾರ ಸಚಿವ ಕರ್ನಲ್ ರಾಜ್ಯವರ್ಧನ್ ರಾಥೋಡ್, ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಅನಂತಕುಮಾರ್ ಅವರ ನಿಧನದಿಂದ ಭಾರತೀಯ ಜನತಾಪಕ್ಷ, ಬೆಂಗಳೂರು ನಗರ ಮತ್ತು ಭಾರತಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ದೇಶದ ಸಂಸತ್ತಿನಲ್ಲಿ ಆರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅನಂತಕುಮಾರ್, ಅವರ ನಿಧನಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಜನತೆ ತೀವ್ರ ಶೋಕಿತರಾಗಿದ್ದಾರೆ. ಬೆಂಗಳೂರಿನ ಅವರ ನಿವಾಸದಲ್ಲಿ ಅನಂತಕುಮಾರ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಜನಸಾಗರವೇ ಹರಿದುಬರುತ್ತಿದೆ. ಅನಂತಕುಮಾರ್ ಅವರು, ವಾಜಪೇಯಿ ಸರ್ಕಾರದಲ್ಲಿ ನಾಗರಿಕ ವಿಮಾನಯಾನ, ಪ್ರವಾಸ ಮತ್ತು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕೇಂದ್ರ ಸಚಿವ ಸದಾನಂದಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್. ಅಶೋಕ್ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಅನಂತಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಇಂದು ರಜೆ ಘೋಷಿಸಲಾಗಿದ್ದು, ಎಲ್ಲಾ ಪ್ರಮುಖ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗಿದೆ. ನಾಳೆ ಮಧ್ಯಾಹ್ನ ಅಂತ್ಯ ಸಂಸ್ಕಾರ ನಡೆಯಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap