ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಿದ ಬಿಜೆಪಿ ಹೈಕಮಾಂಡ್…!!!

ಬೆಂಗಳೂರು

        ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ನಡೆಯುತ್ತಿರುವ ಆಪರೇಷನ್ ಕಮಲ ಕಾರ್ಯಾಚರಣೆ ರಾಷ್ಟ್ರವ್ಯಾಪಿ ಸುದ್ದಿಯಾಗುತ್ತಿದ್ದಂತೆಯೇ ದಿಗಿಲುಗೊಂಡಿರುವ ಬಿಜೆಪಿ ಹೈಕಮಾಂಡ್ ತಕ್ಷಣವೇ ಈ ಕಾರ್ಯಕ್ಕೆ ಬ್ರೇಕ್ ಹಾಕಿದೆ.

       ಮಹಾರಾಷ್ಟ್ರ ಸರ್ಕಾರದ ಕಣ್ಗಾವಲಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಹಲ ಶಾಸಕರನ್ನು ಇರಿಸಲಾಗಿದೆ ಎಂದು ನೆನ್ನೆ ದೊಡ್ಡ ಮಟ್ಟದ ಕೂಗು ಶುರುವಾಗುತ್ತಿದ್ದಂತೆಯೇ ಎಚ್ಚೆತ್ತ ಬಿಜೆಪಿ ಹೈಕಮಾಂಡ್ ಈ ಶಾಸಕರನ್ನು ಬಿಡುಗಡೆ ಮಾಡಿದೆ.ಆಪರೇಷನ್ ಕಮಲ ಕಾರ್ಯಾಚರಣೆಗೆ ಪೂರಕವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಹೋಗಲು ಸಜ್ಜಾಗಿದ್ದ ಕಾಂಗ್ರೆಸ್‍ನ ರಮೇಶ್ ಜಾರಕಿಹೊಳಿ,ಉಮೇಶ್ ಜಾಧವ್,ಮಹಾಂತೇಶ್ ಕಮಟಳ್ಳಿ,ಬಿ.ನಾಗೇಂದ್ರ ಹಾಗೂ ಜೆಡಿಎಸ್‍ನ ಶಾಸಕ ನಾರಾಯಣಗೌಡ ಇವತ್ತು ಧುತ್ತೆಂದು ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಲ್ಲದೆ ವಿಧಾನಸಭೆಗೆ ಹಾಜರಾಗಿದ್ದರು.

        ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ನಾಲ್ವರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ನಾಯಕರು ಸ್ಪೀಕರ್‍ಗೆ ನೀಡಿದ ಮನವಿ ಒಂದು ಕಡೆಗೆ ಬಿಜೆಪಿ ನಾಯಕರ ತಲ್ಲಣಕ್ಕೆ ಕಾರಣವಾದರೆ,ಮತ್ತೊಂದು ಕಡೆ ಅಧಿವೇಶನ ಮುಗಿದ ಕೂಡಲೇ ಮುಂಬಯಿಯಲ್ಲಿ ಪೋಲೀಸರು,ರೌಡಿಗಳ ಬಂಧನದಲ್ಲಿರುವ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಅವರನ್ನು ಬಿಡಿಸಿಕೊಂಡು ಬರಲು ಜೆಡಿಎಸ್ ಶಾಸಕರು ಸ್ಥಳಕ್ಕೆ ಧಾವಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಛೇರಿಯ ಮುಂದೆ ಧರಣಿ ನಡೆಸಲು ನಿರ್ಧರಿಸಿದ್ದರು.

         ಈ ಎಲ್ಲ ಬೆಳವಣಿಗೆಗಳು ಸಹಜವಾಗಿಯೇ ಬಿಜೆಪಿ ಹೈಕಮಾಂಡ್‍ನ್ನು ಆತಂಕಗೊಳ್ಳುವಂತೆ ಮಾಡಿದ್ದಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ತಕ್ಷಣ ಬಿಡುಗಡೆ ಮಾಡುವಂತೆ ಸೂಚನೆ ನೀಡಿತು ಎಂದು ಮೂಲಗಳು ಹೇಳಿವೆ.
ಲೋಕಸಭೆ ಚುನಾವಣೆ ಹತ್ತಿರದಲ್ಲಿರುವಾಗ ನಡೆಯುತ್ತಿರುವ ಈ ಬೆಳವಣಿಗೆ ಪಕ್ಷದ ವರ್ಚಸ್ಸಿಗೆ ಘಾಸಿಯುಂಟು ಮಾಡಿದ್ದು ಈ ಹಿನ್ನೆಲೆಯಲ್ಲಿ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಿ,ಸಂಸತ್ ಚುನಾವಣೆಯ ಮೇಲೆ ಗಮನ ಹರಿಸಿ ಎಂದು ವರಿಷ್ಟರು ರಾಜ್ಯ ನಾಯಕರಿಗೆ ಸೂಚನೆ ನೀಡಿದರು ಎಂಬುದು ಮೂಲಗಳ ಹೇಳಿಕೆ.

          ವರಿಷ್ಟರ ಸೂಚನೆಯ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಬೆಂಗಳೂರಿಗೆ ಧಾವಿಸುವಂತೆ ಸಿಗ್ನಲ್ ನೀಡಲಾಯಿತಾದ್ದರಿಂದ ಐದೂ ಮಂದಿ ಇಂದು ವಿಧಾನಸಭೆ ಕಲಾಪಕ್ಕೆ ಹಾಜರಾದರು.ಈ ಮಧ್ಯೆ ತಮ್ಮನ್ನು ಅನರ್ಹಗೊಳಿಸದಂತೆ ನೆನ್ನೆ ಕಾಂಗ್ರೆಸ್‍ನ ನಾಲ್ವರು ಶಾಸಕರು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡ ಕೆ.ಸಿ.ವೇಣುಗೋಪಾಲ್ ಅವರಿಗೆ ಮನವಿ ಮಾಡಿಕೊಂಡಿದ್ದರು.

        ಇದಕ್ಕೆ ಪ್ರತಿಯಾಗಿ ಅವರೂ ನಿಮ್ಮ ವಿರುದ್ಧ ಅನರ್ಹತೆಯ ಕ್ರಮ ಕೈಗೊಳ್ಳಬಾರದು ಎಂದರೆ ನೀವು ಬುಧವಾರದ ವಿಧಾನಸಭಾ ಕಲಾಪಕ್ಕೆ ಹಾಜರಾಗಿ ಎಂದು ಸೂಚನೆ ನೀಡಿದ್ದರು.ಹೀಗಾಗಿ ಈ ಶಾಸಕರ ಅನಿವಾರ್ಯತೆಯನ್ನೂ ಗಮನದಲ್ಲಿಟ್ಟುಕೊಂಡು,ಪಕ್ಷದ ಇಮೇಜ್‍ಗೆ ಧಕ್ಕೆಯಾಗುತ್ತಿದೆ ಎಂಬುದನ್ನೂ ಗಮನದಲ್ಲಿಟ್ಟುಕೊಂಡು ಕಮಲ ಪಾಳೆಯದ ಹೈಕಮಾಂಡ್ ಮುಂಬಯಿಯಲ್ಲಿರುವ ಶಾಸಕರನ್ನು ಬೆಂಗಳೂರಿಗೆ ಕಳಿಸುವಂತೆ ಸೂಚನೆ ನೀಡಿತ್ತು.

         ಹಾಗೆಯೇ ತಕ್ಷಣಕ್ಕೆ ಆಪರೇಷನ್ ಕಮಲ ಕಾರ್ಯಾಚರಣೆಗೆ ಬ್ರೇಕ್ ಹಾಕಿ.ಸಂಸತ್ ಚುನಾವಣೆಯ ನಂತರ ಆ ಕುರಿತು ಯೋಚಿಸಿದರಾಯಿತು ಎಂದು ಅದು ಸೂಚನೆ ನೀಡಿದ್ದರಿಂದ ರಾಜ್ಯ ಬಿಜೆಪಿ ನಾಯಕರು ಅದನ್ನೊಪ್ಪಿಕೊಂಡರು ಎಂಬುದು ಮೂಲಗಳ ಹೇಳಿಕೆ. 

        ಈ ಮಧ್ಯೆ ಬುಧವಾರ ಬೆಂಗಳೂರಿನಲ್ಲಿ ಪ್ರತ್ಯಕ್ಷರಾದ ಕಾಂಗ್ರೆಸ್‍ನ ನಾಲ್ವರು ಶಾಸಕರು ಸುದ್ದಿಗೋಷ್ಟಿ ನಡೆಸಿ,ಯಾವ ಕಾರಣಕ್ಕೂ ತಾವು ಪಕ್ಷ ತೊರೆಯುವ ಪ್ರಶ್ನೆ ಇಲ್ಲ ಎಂದು ಹೇಳಿದರು.ರಮೇಶ್ ಜಾರಕಿಹೊಳಿ ಮಾತನಾಡಿ,ವೈಯಕ್ತಿಕ ಕಾರಣಗಳಿಂದ ನನಗೆ ಸದನಕ್ಕೆ ಬರಲು ಸಾಧ್ಯವಾಗಿರಲಿಲ್ಲ.ಹೀಗಾಗಿ ನಾನು ಬಂದಿರಲಿಲ್ಲ.ಆದರೆ ಧನವಿನಿಯೋಗ ಮಸೂದೆ ಕಾಯ್ದೆಯನ್ನು ಅಂಗೀಕರಿಸಬೇಕಿರುವ ಹಿನ್ನೆಲೆಯಲ್ಲಿ ಇಂದಿನ ಸಭೆಗೆ ಹಾಜರಾಗಿದ್ದೇನೆ ಎಂದರು.

         ತಮ್ಮ ಮುಂಬಯಿ ವಾಸ್ತವ್ಯದ ಬಗ್ಗೆ ಮಾತನಾಡಿದ ಅವರು,ಅಗತ್ಯ ಬಿದ್ದರೆ ಇಂದು ಸಂಜೆಯೇ ಮುಂಬಯಿಗೆ ಹೋಗುತ್ತೇನೆ.ಹಾಗೆ ಹೋಗಬಾರದೆಂದೇನಾದರೂ ಕಾನೂನು ಇದೆಯಾ?ಎಂದು ಪ್ರಶ್ನಿಸಿದರು.ಶಾಸಕ ಉಮೇಶ್ ಜಾಧವ್ ಮಾತನಾಡಿ,ಕೆಲ ಕಾರಣಗಳಿಂದ ನಾನು ಸದನಕ್ಕೆ ಬರಲಾಗುವುದಿಲ್ಲ ಎಂದು ಸ್ಪೀಕರ್ ಅವರಿಗೆ ಪತ್ರ ನೀಡಿದ್ದೆ.ಅಂದ ಹಾಗೆ ನಾನು ಮಂತ್ರಿಯಾಗಬೇಕು ಅಂತ ಕ್ಷೇತ್ರದ ಶಾಸಕರು ಬಯಸಿದರೂ,ನಾನು ಸಚಿವ ಪದವಿಯ ಆಕಾಂಕ್ಷಿಯಲ್ಲ ಎಂದು ಹೇಳಿದರು.

         ನಾನು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವಷ್ಟು ಹಿರಿಯನಲ್ಲ.ಆದರೆ ಸ್ಥಳೀಯವಾಗಿ ಕೆಲ ಬೆಳವಣಿಗೆಗಳ ಬಗ್ಗೆ ನನಗೆ ನೋವಿದೆ.ಸೂಕ್ತ ಕಾಲದಲ್ಲಿ ಅದನ್ನು ಹೇಳುತ್ತೇನೆ ಅಂತ ವಿವರಿಸಿದರು.ಶಾಸಕ ಮಹಾಂತೇಶ್ ಕಮಟಳ್ಳಿ ಮಾತನಾಡಿ,ತಂದೆ-ತಾಯಿ ಜಗಳದಲಿ ಕೂಸು ಬಡವಾಯ್ತು ಎಂಬಂತೆ ನಾವೆಲ್ಲ ಬಡವಾಗಿದ್ದೇವೆ.ಸಿದ್ಧರಾಮಯ್ಯ ಅವರೇ ನಮ್ಮ ನಾಯಕರು.ಹೀಗಾಗಿ ಯಾವ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದರು.

          ಈ ಮಧ್ಯೆ ಬುಧವಾರ ಬೆಳಕು ಹರಿಯುವ ಮುನ್ನವೇ ಕರ್ನಾಟಕಕ್ಕೆ ಬಂದಿಳಿದ ಶಾಸಕ ನಾರಾಯಣಗೌಡ ಆನಂತರ ಪಕ್ಷದ ನಾಯಕರನ್ನು ಭೇಟಿಯಾಗಿ ವಿವರ ನೀಡಿದ್ದಲ್ಲದೆ,ಸಧ್ಯಕ್ಕೆ ಮುಂಬಯಿಗೆ ವಾಪಸ್ ಬರುವಂತೆ ಯಾರೂ ಒತ್ತಡ ಹೇರಿಲ್ಲ ಎಂದು ವಿವರಿಸಿದರು.
ತದ ನಂತರ ಪ್ರತ್ಯೇಕವಾಗಿ ಸುದ್ದಿಗಾರರ ಜತೆ ಮಾತನಾಡಿ,ಕೆಲ ವೈಯಕ್ತಿಕ ಕಾರಣಗಳ ನಿಮಿತ್ತ ನಾನು ಮುಂಬಯಿಯಲ್ಲಿದ್ದೆ.ನನ್ನನ್ನು ಯಾರೂ ಬಂಧನದಲ್ಲಿಟ್ಟಿರಲಿಲ್ಲ ಎಂದು ಹೇಳಿದರು.ನನ್ನನ್ನು ಬಂಧನದಲ್ಲಿಡಲು ಸಾಧ್ಯವಿಲ್ಲ.ನಾನು ಬಂಧನದಲ್ಲೂ ಇರಲಿಲ್ಲ ಎಂದು ಹೇಳಿದ ಅವರು,ಯಾವ ಕಾರಣಕ್ಕೂ ಪಕ್ಷ ತೊರೆದು ಹೋಗುವುದಿಲ್ಲ.ಜೆಡಿಎಸ್‍ನಲ್ಲೇ ಇರುತ್ತೇನೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap