ಅಂತರ್ ರಾಜ್ಯ ದರೋಡೆಕೋರರ ಬಂಧನ

0
14

 ದಾವಣಗೆರೆ:

       ಎಂಟು ಮಂದಿ ಅಂತಾರಾಜ್ಯ ಹೆದ್ದಾರಿ ದರೋಡೆಕೋರರನ್ನು ಬಂಧಿಸಿರುವ ದಾವಣಗೆರೆ ಗ್ರಾಮಾಂತರ ಪೊಲೀಸರು, ಸುಮಾರು 58 ಲಕ್ಷ ರೂ. ಮೌಲ್ಯದ ಬೆಳ್ಳಿ ಗಟ್ಟಿ, ದುಬಾರಿ ಬೆಲೆಯ 2 ಕಾರು, 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ.

      ಶನಿವಾರ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಕಳೆದ ಡಿಸೆಂಬರ್ 29ರಂದು ಬೆಳಗ್ಗೆ 3.30ರ ವೇಳೆಗೆ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದಿಂದ ಜಗನ್ನಾಥ್ ಖಂಡೇಕರ್ ಎಂಬುವರು ತಮ್ಮ ಕಾರಿನಲ್ಲಿ ಸುಮಾರು 300 ಕೆ.ಜಿ.ಯಷ್ಟು ಬೆಳ್ಳಿಯನ್ನು ತೆಗೆದುಕೊಂಡು ಹೊಗುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಹುಣಸೆಕಟ್ಟೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ದರೋಡೆಕೋರರು ಕಾರನ್ನು ಅಡ್ಡಗಟ್ಟಿ ಕಳ್ಳತನ ನಡೆಸಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು 8 ಮಂದಿ ದರೋಡೆಕೋರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

      ದರೋಡೆಗೆ ಸಂಚು ರೂಪಿಸುತ್ತಿದ್ದ ಪ್ರಮುಖ ಆರೋಪಿಗಳಾದ ಮಹಾರಾಷ್ಟ್ರ ರಾಜ್ಯದ ನಿಸಾರ್(44), ಕೊಲ್ಹಾಪುರದ ಉಪರಿಯ ರಾಹುಲ್(36) ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಸಹಚರರ ಬಗ್ಗೆ ಮಾಹಿತಿ ಸಿಕ್ಕಿದೆ. ಪೊಲೀಸರು ತನಿಖೆ ಮುಂದುವರೆಸಿ, ಮಹಾರಾಷ್ಟ್ರದ ಈಚಲಕಾರಂಜಿಯ ನದೀಮ್(25), ಉಪರಿ ಗ್ರಾಮದ ಜಾಕೀರ್ ಸಾಬ್(20), ಬಳ್ಳಾರಿಯ ನಾಗಾರಾಜ್(46), ಆಂಧ್ರ ಪ್ರದೇಶದ ಶ್ಯಾಮಸುಂದರ್(46), ಮನೋಹರ್(45), ಉದಯ್ ಕುಮಾರ್(36) ಅವರುಗಳನ್ನು ಬಂಧಿಸಿದ್ದಾರೆ ಎಂದು ಅವರು ವಿವರಿಸಿದರು.

      ವ್ಯವಸ್ಥಿತವಾಗಿ ಸಂಚು ರೂಪಿಸಿದ್ದ ದರೋಡೆಕೋರರು ದಾವಣಗೆರೆ ಸಮೀಪದ ಹೆಬ್ಬಾಳು ಟೋಲ್‍ಗೇಟ್ ದಾಟಿದ ನಂತರ 2 ತಂಡಗಳಲ್ಲಿ ತಮ್ಮ ಕಾರುಗಳಲ್ಲಿ ತೆರಳಿದ್ದಾರೆ. ನಂತರ ಹೆದ್ದಾರಿಯಲ್ಲಿ ಬಂದ ಜಗನ್ನಾಥ್ ಖಂಡೇಕರ್ ಕಾರನ್ನು ಅಡ್ಡಗಟ್ಟಿ, ಚಾಕು ಹಾಗೂ ರಿವಾಲ್ವರ್‍ಗಳಿಂದ ಹೆದರಿಸಿ, ಅಪಹರಣ ಮಾಡಿದ್ದಾರೆ. ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸುಮಾರು 60 ಲಕ್ಷ ರೂ. ಬೆಲೆಬಾಳುವ ಬೆಳ್ಳಿ, 14 ಸಾವಿರ ರೂ. ನಗದು ಹಣ, 2 ಮೊಬೈಲ್ ಇತ್ಯಾದಿಯನ್ನು ದರೋಡೆ ಮಾಡಿಕೊಂಡು, ಅಪಹೃತರನ್ನು ಅಲ್ಲಿಯೇ ಬಿಟ್ಟು ತೆರಳಿದ್ದರು. ಕದ್ದ ಮಾಲನ್ನು ಕೊಲ್ಹಾಪುರಕ್ಕೆ ತೆಗೆದುಕೊಂಡು ಹೋಗಿ, ಅದರಲ್ಲಿ ಕೆಲವನ್ನು ಮಾರಾಟ ಮಾಡಿದ್ದು, ದರೋಡೆಗೆ ಸಾಥ್ ನೀಡುತ್ತಿದ್ದ ಬಳ್ಳಾರಿ ನಾಗ ಹಾಗೂ ಆತನ ಕಡೆಯವರಿಗೂ ಸ್ವಲ್ಪ ಹಂಚಿದ್ದಾಗಿ ದರೋಡೆಕೋರರು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎಂದರು.

      ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ರಿವಾಲ್ವರ್, 5 ಜೀವಂತ ಗುಂಡು, ಮಾರಕಾಸ್ತ್ರ ಸೇರಿದಂತೆ ದರೋಡೆಯಾಗಿದ್ದ 58 ಲಕ್ಷ ರೂ. ಮೌಲ್ಯದ ಸುಮಾರು 240 ಕೆ.ಜಿ. ಬೆಳ್ಳಿ ಗಟ್ಟಿ, 30 ಲಕ್ಷ ರೂ. ಬೆಲೆಬಾಳುವ 2 ಕಾರುಗಳನ್ನು ಪೊಲೀಸರು ವಶಪಡಿಕೊಂಡಿದ್ದಾರೆ. ಪ್ರಕರಣ ಭೇದಿಸಲು 3 ತಂಡಗಳನ್ನು ರಚಿಸಲಾಗಿತ್ತು. ಗ್ರಾಮಾಂತರ ವೃತ್ತ ನಿರೀಕ್ಷಕ ಗುರುಬಸವರಾಜ್, ಪಿಎಸ್‍ಐ ಕಿರಣ್‍ಕುಮಾರ್, ಹದಡಿ ಪೆÇಲೀಸ್ ಠಾಣೆಯ ಪಿಎಸ್‍ಐ ರಾಜೇಂದ್ರ ನಾಯ್ಕ ಹಾಗೂ ಸಿಬ್ಬಂದಿಗಳಾದ ಬಾಲರಾಜ್, ಮಹೇಶ್, ವೆಂಕಟೇಶ್, ಹಾಲೇಶ್, ಮಂಜಪ್ಪ, ಮಂಜುನಾಥ್, ಕೆ.ಪ್ರಕಾಶ್, ನರೇಂದ್ರಮೂರ್ತಿ, ಮಾರುತಿ, ತಾಂತ್ರಿಕ ವಿಭಾಗದ ರಾಮಚಂದ್ರ ಜಾಧವ್, ಎಂ.ಪಿ.ರಮೇಶ್, ಅಣ್ಣಪ್ಪ, ಶ್ರೀನಿವಾಸ್ ಅವರುಗಳ ತಂಡವು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಗ್ರಾಮಾಂತರ ವೃತ್ತದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಬಹುಮಾನ ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here