ಅಂಬೇಡ್ಕರ್ ಸಾಧನೆಗೆ ಅಪಮಾನವೇ ಮೆಟ್ಟಿಲು

ಚಿತ್ರದುರ್ಗ:

       ಜೀವನದಲ್ಲಿ ತಾವು ಅನುಭವಿಸಿದ ನೋವು, ಅವಮಾನಗಳನ್ನೇ ತನ್ನ ಸಾಧನೆಗೆ ಮೆಟ್ಟಿಲಾಗಿಸಿಕೊಂಡು, ವಿಶ್ವಮಾನ್ಯ ನಾಯಕರೆನಿಸಿಕೊಂಡವರು ಡಾ. ಬಿ.ಆರ್. ಅಂಬೇಡ್ಕರ್ ಅವರು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.

       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಇವರ ಸಹಯೋಗದೊಂದಿಗೆ ಚುನಾವಣಾ ನೀತಿ ಸಂಹಿತೆಯ ಕಾರಣ ಸರಳವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್ ಅಂಬೇಡ್ಕರ್ ರವರ 128 ನೇ ಜನ್ಮ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

        ಸಾಮಾನ್ಯ ದಲಿತ ವರ್ಗದಲ್ಲಿ ಜನಿಸಿ, ಬಾಲ್ಯದಲ್ಲಿ ತಾನು ಪಟ್ಟ ಕಷ್ಟ, ಅನುಭವಿಸಿದ ನೋವುಗಳನ್ನೇ ಸಾಧನೆಗೆ ಮೆಟ್ಟಿಲಾಗಿಸಿಕೊಂಡು, ವಿಶ್ವವೇ ಕೊಂಡಾಡುವಂತಹ ಅಗ್ರಗಣ್ಯ ನಾಯಕರೆನಿಸಿಕೊಂಡವರು ಡಾ. ಬಿ.ಆರ್. ಅಂಬೇಡ್ಕರ್ ಅವರು. ಸಾಮಾಜಿಕ, ಆರ್ಥಿಕ, ರಾಜಕೀಯ ಹೀಗೆ ಎಲ್ಲ ಬಗೆಯ ಕ್ಷೇತ್ರಗಳಲ್ಲಿಯೂ ಸಾಧನೆಗೈದ ದೇಶದ ಹೆಮ್ಮೆಯ ಪುತ್ರ ಅಂಬೇಡ್ಕರ್ ಎಂದರು
ಭಾರತದ ಸಂವಿಧಾನ ರಚಿಸುವ ಮಹತ್ವದ ಹೊಣೆಗಾರಿಕೆಯನ್ನು ವಹಿಸಿಕೊಂಡ ಅಂಬೇಡ್ಕರ್ ಅವರು, ಜಗತ್ತಿನ ಹಲವು ದೇಶಗಳ ಸಂವಿಧಾನ, ಆಡಳಿತಾತ್ಮಕ ಅಂಶಗಳನ್ನು ಅಧ್ಯಯನ ಮಾಡಿದರು.

        ಭಾರತ ದೇಶ ವಿವಿಧ ಭಾಷೆ, ಸಂಸ್ಕತಿ, ಧರ್ಮ ಹೀಗೆ ಅನೇಕ ವಿಷಯಗಳಲ್ಲಿ ಭಿನ್ನತೆ ಹೊಂದಿದ್ದರೂ, ವಿವಿಧತೆಯಲ್ಲಿ ಏಕತೆಯನ್ನು ಹೊಂದುವಂತಹ, ಸರ್ವ ಜನರ ಶ್ರೇಯೋಭಿವೃದ್ಧಿಗೆ ಹೊಂದುವಂತಹ ಸರ್ವ ಶ್ರೇಷ್ಠ ಸಂವಿಧಾನವನ್ನು ರಚಿಸಿಕೊಟ್ಟರು. ನಾವೂ ಕೂಡ ಯಾವುದೇ ಕಷ್ಟ, ಅವಮಾನ, ತೊಂದರೆ ಎದುರಿಸಿದರೂ, ಅದಕ್ಕೆ ಅಂಜದೆ, ಧೈರ್ಯವಾಗಿ ಬದುಕನ್ನು ಕಟ್ಟಿಕೊಳ್ಳಬೇಕು, ಇದಕ್ಕೆ ಅಂಬೇಡ್ಕರ್ ಅವರೇ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

       ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಮಾತನಾಡಿ, ದೇಶದ ಎಲ್ಲ ಮಹಿಳೆಯರು ಅಂಬೇಡ್ಕರ್ ಅವರನ್ನು ಸ್ಮರಿಸಬೇಕು. ಏಕೆಂದರೆ, ಸ್ವತಂತ್ರ ದೇಶದಲ್ಲಿ ಮಹಿಳಾ ಸಮಾನತೆಗಾಗಿ ಮೊಟ್ಟ ಮೊದಲು ಧ್ವನಿ ಎತ್ತಿದವರು ಅಂಬೇಡ್ಕರ್ ಅವರು. ದೇಶದ ಕಾನೂನು ಮಂತ್ರಿಯಾಗಿದ್ದ ಅವರು, ಮಹಿಳಾ ಸಮಾನತೆಗೆ ಸರ್ಕಾರದಲ್ಲಿ ಬೆಂಬಲ ದೊರೆಯದಿದ್ದಾಗ, ತಮ್ಮ ಮಂತ್ರಿ ಪದವಿಯನ್ನೇ ತೊರೆದರು.

       ಹೀಗಾಗಿ ಇಂದು ಮಹಿಳೆಯರು ದೇಶದಲ್ಲಿ ಸಮಾನತೆಯ ಜೀವನ ಕಂಡುಕೊಳ್ಳಲು ಅಂಬೇಡ್ಕರ್ ಅವರೇ ಮೂಲ ಕಾರಣಕರ್ತರು. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡರೂ, ಎಲ್ಲಿಯೂ ಎದೆಗುಂದದೆ ಶಿಕ್ಷಣ ಹಾಗೂ ಸಂಘಟನೆಗೆ ಒತ್ತು ನೀಡಿದರು. ಅಂಬೇಡ್ಕರ್‍ರವರು ಚುರುಕು ಬುದ್ದಿಯುಳ್ಳವರಾಗಿದ್ದು. ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ವಿಷಗಳಲ್ಲಿ ತುಂಬ ಪ್ರತಿಭೆಯುಳ್ಳವರಾಗಿದ್ದರು, ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಅಮೇರಿಕಾ ಸಂವಿಧಾನದಿಂದ ತಂದು ಭಾರತೀಯ ಸಂವಿಧಾನದಲ್ಲಿ ಅಳವಡಿಸಿ ಜನರಿಗೂ ಸಮಾನವಾಗಿ ಮೂಲಭೂತ ಹಕ್ಕುಗಳನ್ನು ಸಿಗುವಂತೆ ಮಾಡಿದ್ದಾರೆ ಎಂದು ಹೇಳಿದರು.

      ಅಂಬೇಡ್ಕರ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ ಅವರು, ಅಂಬೇಡ್ಕರ್ ಎಂದರೆ ಶಿಕ್ಷಣ, ಸಂಘಟನೆ, ಹೋರಾಟ. ಭಾರತೀಯ ಸಮಾಜದ ಅವಕಾಶ ವಂಚಿತ ಸಮುದಾಯದ ಹಿನ್ನೆಲೆಯಿಂದ ಹುಟ್ಟಿಬಂದ ಅಂಬೇಡ್ಕರ್ ಅವರು, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮಾಡಿದ ಸಾಧನೆ ಅನನ್ಯ. ಸಮಾನತೆ ಮತ್ತು ಮಾನವೀಯತೆಯನ್ನು ಗೌರವಿಸುವ ಅವರ ಚಿಂತನೆ ಎಲ್ಲರಿಗೂ ಆದರ್ಶವಾದುದು.

       ಬಾಬಾ ಸಾಹೇಬ್ ಅಂಬೇಡ್ಕರ್‍ರವರು, ಅಂದಿನ ಜಾತಿ ಪದ್ಧತಿಯ ಕಾರಣದಿಂದ ಶಾಲೆಯಲ್ಲಿ ಗೋಣಿ ಚೀಲದ ಮೇಲೆ ಕುಳಿತು ವಿದ್ಯಾಬ್ಯಾಸ ಪಡೆದರೂ, ತಮ್ಮ ಪ್ರತಿಭೆ ಹಾಗೂ ಸಾಧನೆಯಿಂದಾಗಿ ಸಂವಿಧಾನ ಶಿಲ್ಪಿಯಾದರು. ಶ್ರೇಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದೇಶಕ್ಕೆ ನೀಡಿದ ಅಂಬೇಡ್ಕರ್ ಅವರು, ‘ಚುನಾವಣೆಯಲ್ಲಿ ಪ್ರಜೆಗಳೇ ಪ್ರಭುಗಳಾಗಬೇಕು. ತಮ್ಮನ್ನಾಳುವ ವ್ಯಕ್ತಿಯನ್ನು ಪ್ರಜೆಗಳೇ ನಿರ್ಭೀತರಾಗಿ ಆಯ್ಕೆ ಮಾಡಿಕೊಳ್ಳಬೇಕು.

         ಯಾವುದೇ ಆದರ್ಶ ವ್ಯಕ್ತಿಯನ್ನು ಹಿಂಬಾಲಿಸದೆ, ಅವರ ತತ್ವ ಸಿದ್ಧಾಂತಗಳನ್ನು ಮಾತ್ರ ಹಿಂಬಾಲಿಸಬೇಕು. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಸಮಾನತೆಯ ತೇರನ್ನು ಸಂವಿಧಾನದವರೆಗೂ ಎಳೆದು ತಂದಿದ್ದೇನೆ, ಸಾಧ್ಯವಾದಲ್ಲಿ ಇದನ್ನು ಇನ್ನಷ್ಟು ಮುಂದೆ ಸಾಗಿಸಿರಿ ಸಾಧ್ಯವಾಗದಿದ್ದರೆ ಇದನ್ನು ಇಲ್ಲಿಯೇ ಬಿಟ್ಟುಬಿಡಿ, ಆದರೆ ದಯವಿಟ್ಟು ಇದನ್ನು ಹಿಂದಕ್ಕೆ ಮಾತ್ರ ಎಳೆಯಬೇಡಿ’ ಎಂಬುದಾಗಿ ಕಳಕಳಿಯ ನುಡಿಗಳನ್ನಾಡಿದ್ದರು ಅಂಬೇಡ್ಕರ್ ಅವರು. ಅವರು ಬಯಸಿದ ಸಮಾನತೆ, ಏಕತೆ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಿದಾಗ ಮಾತ್ರ ಅಂಬೇಡ್ಕರ್ ಅವರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರಲು ಸಾಧ್ಯ ಎಂದರು.

       ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ ಅರುಣ್ ಮಾತನಾಡಿ, ಸಮಾಜದಲ್ಲಿ ಈಗಿನ ಯುವ ಪೀಳಿಗೆಯು ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು, ಸಮಾನತೆಯಿಂದ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ, ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link