ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಪಕ್ಷಕ್ಕೆ ಅಡ್ಡಮತ ಹಾಕಿರುವ ಕೋಲಾರ ಶಾಸಕ ಶ್ರೀನಿವಾಸ ಗೌಡ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ವಿಧಾನಸೌಧದ ಬಳಿ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಶ್ರೀನಿವಾಸ್ ಗೌಡ ಅವರು ಕಾಂಗ್ರೆಸ್ ಗೆ ಮತ ಹಾಕುವ ನಿರ್ಧಾರ ಮಾಡಿದ್ದಾರೆ ಅಂತ ನಾನು ಮೊದಲೇ ಹೇಳಿದ್ದೆ. ನನ್ನ ಅನುಮಾನದಂತೆ ಅವರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಆ ಮನುಷ್ಯನಿಗೇನಾದರೂ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಹೊರ ಹೋಗಿ ರಾಜಕಾರಣ ಮಾಡಲಿ ಎಂದು ಕಿಡಿಕಾರಿದರು.
ನಮ್ಮ ಪಕ್ಷದ ಚಿಹ್ನೆಯಿಂದ ಶ್ರೀನಿವಾಸಗೌಡ ಗೆದ್ದಿದ್ದಾರೆ. ಶಾಸಕ ಸ್ಥಾನ ಉಳಿಸಿಕೊಳ್ಳ ಬೇಕು ಅಂತ ಅವರು ಹೀಗೆ ಮಾಡೋದಾ? ತಮಗೆ ಮತ ಕೊಟ್ಟ ಕೋಲಾರ ಜನರಿಗೆ ಹಾಗೂ ಕಾರ್ಯಕರ್ತರಿಗೆ ಮಾಡಿರುವ ಅವಮಾನ ಇದು ಎಂದು ಅವರು ಹೇಳಿದರು.
ಅಡ್ಡಮತ ಹಾಕಿದವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುವುದರಿಂದ ಏನು ಪ್ರಯೋಜನ ಇಲ್ಲ. ವಿಪ್ ಕೊಡುವುದು ಇದೆಲ್ಲಾ ಕಾಟಾಚಾರಕ್ಕೆ. ಕಾನೂನುಬಾಹಿರ ಚಟುವಟಿಕೆ ಮಾಡುವಂತವರಿಗೆ ಶಿಕ್ಷೆ ಕೊಡುವಂತ ಆಕ್ಟ್ ನನ್ನ ಪ್ರಕಾರ ಇಲ್ಲ. ಆ ಮನುಷ್ಯನಿಗೆ ಮಾನಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ ಎಂದು ನೇರವಾಗಿ ಹೇಳಿದರು.
ನಮ್ಮ ಪಕ್ಷದ ಚಿನ್ಹೆಯಿಂದ ಗೆದ್ದು, ಕಾಂಗ್ರೆಸ್ ಜೊತೆಗೆ ಒಡನಾಟ ಇಟ್ಟುಕೊಂಡು ಯಾವ ನೈತಿಕತೆಯಿಂದ ಜನರ ಮುಂದೆ ಹೋಗುತ್ತಾರೆ. ಆತ್ಮಸಾಕ್ಷಿ ಎಂದರೆ ಇದೇನಾ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನೆ ಮಾಡಿದರು.
