ಬೆಂಗಳೂರು:
ಜನರ ನಿರೀಕ್ಷೆಗಳ ಈಡೇರಿಸಬೇಕಿದ್ದು, ಕಾಲಮಿತಿಯೊಳಗೆ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಖಡಕ್ ಸೂಚನೆ ನೀಡಿದ್ದಾರೆ.ಹಿರಿಯ ಐಎಎಸ್ ಅಧಿಕಾರಿಗಳೊಂದಿಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಚೊಚ್ಚಲ ಸಭೆಯನ್ನು ನಡೆಸಿದರು. ಸಭೆ ವೇಳೆ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು.
ನಾಡಿನ ಜನತೆ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ. ಕಾಲ ಮಿತಿಯಲ್ಲಿ ಕೆಲಸ ಮಾಡಿ ಜನರ ನಿರೀಕ್ಷೆ ಈಡೇರಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ. ನನ್ನ ರಾಜಕೀಯ ಜೀವನದಲ್ಲಿ ತಪ್ಪಿಲ್ಲದೆ ಯಾವುದೇ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಿಲ್ಲ. ನಿಮ್ಮ ತಪ್ಪಿನಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದರೆ ನಾವು ಸಹಿಸಲ್ಲ ಎಂದು ಎಚ್ಚರಿಸಿದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು. ಇವುಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮೇಲ್ವಿಚಾರಣೆ ಮಾಡಬೇಕು. ಕ್ಷೇತ್ರಗಳಿಗೆ ಕಾಲಕಾಲಕ್ಕೆ ಭೇಟಿ ನೀಡುವುದಲ್ಲದೇ ಕಚೇರಿಗಳಿಗೆ ಅನಿರೀಕ್ಷಿತ ಭೇಟಿಯನ್ನೂ ನೀಡಬೇಕು.
ಹಿರಿಯ ಅಧಿಕಾರಿಗಳು ನಿಯಮಗಳನ್ನು ಪಾಲಿಸಬೇಕು. ಯೋಜನೆಗಳ ಕ್ಷಿಪ್ರ ಅನುಷ್ಠಾನವಾದರೆ ಜನರಿಗೆ ಪ್ರಯೋಜನವಾಗುತ್ತದೆ. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆನ್ನುವುದು ಸರ್ಕಾರದ ಉದ್ದೇಶ. ಜನರ ಕಷ್ಟಗಳಿಗೆ ಸ್ಪಂದಿಸುವವರೇ ಮನುಷ್ಯರು ಎಂದು ಅರ್ಥಮಾಡಿಕೊಂಡು ತಾವೆಲ್ಲರೂ ಜನರ ನಿರೀಕ್ಷೆಗಳಿಗೆ ಸಕಾಲದಲ್ಲಿ ಸೂಕ್ತರೀತಿ ಸ್ಪಂದಿಸಬೇಕೆಂದು ಬಯಸುತ್ತೇನೆಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
