ಅಬಕಾರಿ ಪರವಾನಗಿಗಳ ನವೀಕರಣಕ್ಕೆ ಕಿರುಕುಳ ನೀಡಬಾರದು: ಸಿ.ಎಂ.ಸ್ಪಷ್ಟ ಸೂಚನೆ

ಬೆಂಗಳೂರು :

     ಅಬಕಾರಿ ಪರವಾನಗಿಗಳ ನವೀಕರಣಕ್ಕೆ ಸನ್ನದುದಾರರಿಗೆ ಕಿರುಕುಳ ನೀಡಬಾರದು. ನೆರೆ ರಾಜ್ಯಗಳಿಂದ ಕರ್ನಾಟಕ ರಾಜ್ಯಕ್ಕೆ ಕಳ್ಳಸಾಗಾಣಿಕೆ ಮೂಲಕ ನುಸುಳುವ ಮದ್ಯವನ್ನು ಕಡ್ಡಾಯ ತಡೆಗಟ್ಟಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.ಇಂದು ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಈ ಸೂಚನೆ ನೀಡಿದರು.

    ಇಲಾಖೆಯ ತೆರಿಗೆ ಸಂಗ್ರಹ ಸಾಮರ್ಥ್ಯವನ್ನು ಆಧರಿಸಿಯೇ ನಿಗದಿ ಪಡಿಸುವ ಗುರಿ ತಲುಪಲು ಅಧಿಕಾರಿಗಳು ಗರಿಷ್ಠ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು.

    ಚುನಾವಣಾ ನೀತಿ ಸಂಹಿತೆ ಕಾರಣದಿಂದ ತೆರಿಗೆ ಸಂಗ್ರಹ ಬೆಳವಣಿಗೆ ದರ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಇದನ್ನು ಭರ್ತಿ ಮಾಡುವಂತೆ ಸಿಎಂ ಸೂಚಿಸಿದರು.

    ಇಲಾಖೆಯಲ್ಲಿ ಕಾನ್ಸ್‌ಟೇಬಲ್‌, ಸಬ್‌ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಹಾಗೂ ವಾಹನಗಳ ಅಗತ್ಯತೆ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

    ಕರ ಸಮಾಧಾನ ಯೋಜನೆಯಡಿ 5.10 ಕೋಟಿ ರೂ. ವಸೂಲಾಗಿದ್ದು, ಯೋಜನೆಯನ್ನು ಇನ್ನಷ್ಟು ಕಾಲ ವಿಸ್ತರಿಸುವಂತೆ ಅಧಿಕಾರಿಗಳು ಕೋರಿದರು.ಅಬಕಾರಿ ಇಲಾಖೆಯ ವ್ಯವಹಾರಗಳನ್ನು ಸರಳಗೊಳಿಸುವ ನೂತನ ತಂತ್ರಾಂಶವನ್ನು ಲೋಕಾರ್ಪಣೆ ಮಾಡಿದರು.

    ಆನ್‌ಲೈನ್‌ನಲ್ಲಿಯೇ ಇಲಾಖೆಯ ಸೇವೆಗಳನ್ನು ಒದಗಿಸುವ ಹಾಗೂ ಅಬಕಾರಿ ಇಲಾಖೆಗೆ ಸಂಬಂಧಿಸಿದ ನಿಯಮ ಉಲ್ಲಂಘನೆ ಹಾಗೂ ಅಕ್ರಮದ ಪ್ರಕರಣಗಳು ಹಾಗೂ ಅಧಿಕಾರಿಗಳ ತಪಾಸಣೆಯನ್ನೂ ಇದರಲ್ಲಿ ದಾಖಲಿಸಲು ಹಾಗೂ ಅನುಸರಿಸಲು ಅವಕಾಶವನ್ನು ಇದರಲ್ಲಿ ಕಲ್ಪಿಸಲಾಗಿದೆ.

   ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಹಾಗೂ ನಸೀರ್ ಅಹ್ಮದ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್, ಅಬಕಾರಿ ಇಲಾಖೆಯ ಆಯುಕ್ತ ಡಾ . ರವಿಶಂಕರ್ ಉಪಸ್ಥಿತರಿದ್ದರು

 

Recent Articles

spot_img

Related Stories

Share via
Copy link
Powered by Social Snap