ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಿಂದ ಬರುವ ಭೌತಿಕ ಕಡತಗಳನ್ನು ಹಿಂತಿರುಗಿಸುವ ಎಚ್ಚರಿಕೆ
ರೈತರಿಗೆ 90 ದಿನದೊಳಗೆ ಪರಿಹಾರ ನೀಡಲು ತಾಕೀತು
ಅಧಿಕಾರಿಗಳ ಅಸಡ್ಡೆತನ ಸಹಿಸುವುದಿಲ್ಲ
ಬೆಂಗಳೂರು : ಮುಂಬರುವ ಆಗಸ್ಟ್ 15 ರೊಳಗೆ ವಾಣಿಜ್ಯ ಕೈಗಾರಿಕಾ ಇಲಾಖೆ ವ್ಯಾಪ್ತಿಗೆ ಒಳಪಡುವ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕಚೇರಿಗಳನ್ನು ಇ-ಕಚೇರಿ ವ್ಯವಸ್ಥೆ( E- office )ಗಳನ್ನಾಗಿ ಪರಿವರ್ತನೆ ಮಾಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶನಿವಾರ ವಿಕಾಸೌಧದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕರು ಎಸ್.ಎಲ್ ಒ ಗಳು ಕೆಎಸ್‍ಎಸ್‍ಐಡಿಸಿ ಅಧಿಕಾರಿಗಳ ಒಳಗೊಂಡ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಒಂದು ವೇಳೆ ಆಗಸ್ಟ್ 15ರೊಳಗೆ ಜಿಲ್ಲಾ ಮಟ್ಟದ ಕಚೇರಿಗಳನ್ನು ಇ ಕಚೇರಿ ವ್ಯವಸ್ಥೆಗಳನ್ನಾಗಿ ಪರಿವರ್ತನೆ ಮಾಡದೇ ಇದ್ದರೆ ಮುಖ್ಯ ಕಚೇರಿಗೆ ಬರುವ ಭೌತಿಕ ಕಡತಗಳನ್ನು ಸ್ವೀಕಾರ ಮಾಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ಅಧಿಕಾರಿಗಳಿಗೆ ಸಚಿವರ ಎಚ್ಚರಿಕೆ :
ಕಂಪ್ಯೂಟರ್ ಇಲ್ಲ, ಸಿಬ್ಬಂದಿ ಇಲ್ಲ, ಕಚೇರಿ ಇಲ್ಲ ಇಂತಹ ಸಬೂಬುಗಳನ್ನು ಹೇಳಬಾರದು. ಇದಕ್ಕೆ ಬೇಕಾದ ಪೂರ್ವ ಸಿದ್ದತೆಗಳನ್ನು ಇಂದಿನಿಂದಲೇ ತಯಾರು ಮಾಡಿಕೊಳ್ಳಿ. ಇಲ್ಲದಿದ್ದರೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಿಂದ ಬರುವ ಭೌತಿಕ ಕಡತಗಳನ್ನು ಹಿಂದಕ್ಕೆ ಕಳುಹಿಸುವುದಾಗಿ ಅಧಿಕಾರಿಗಳಿಗೆ ನಿರಾಣಿ ಎಚ್ಚರಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಎಲ್ಲಾ ಇಲಾಖೆಗಳಿಗೆ ಮಾತೃ ಇಲಾಖೆಯಿದ್ದಂತೆ. ಏನೇ ಹೊಸ ಆವಿಷ್ಕಾರುಗಳು, ಸಂಶೋಧನೆಗಳು ನಡಯುವುದಿದ್ದರೆ ಮೊದಲು ನಮ್ಮ ಇಲಾಖೆಯಿಂದಲೇ ನಡೆಯಬೇಕು. ಇಂತಹ ಸಂದರ್ಭದಲ್ಲಿ ನಮ್ಮ ಇಲಾಖೆಯ ಕಚೇರಿಗಳು ಇ ಕಚೇರಿಗಳು ಆಗದಿದ್ದರೆ ಹೇಗೆ ಎಂದು ನಿರಾಣಿ ಪ್ರಶ್ನಿಸಿದರು.
ಕಡತ ವಿಳಂಬ ಮಾಡಬೇಡಿ :
ಸಣ್ಣಪುಟ್ಟ ದೋಷಗಳನ್ನು ಮುಂದಿಟ್ಟುಕೊಂಡು ಕಡತ ವಿಲೇವಾರಿಯನ್ನು ವಿಳಂಬ ಮಾಡಬೇಡಿ. ವಿಳಂಬ ಮಾಡಿದರೆ ಉದ್ದಿಮೆದಾರರು ಕರ್ನಾಟಕಕ್ಕೆ ಬರಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು. ವಿಳಂಬವಾದಷ್ಟು ಉದ್ಯಮಿಗಳು ಬೇರೆ ರಾಜ್ಯದೆಡೆ ಗಮನಹರಿಸುತ್ತಾರೆ. ಇದಕ್ಕೆ ಅವಕಾಶ ನೀಡಬೇಡಿ ಎಂದರು.
ಜಿಲ್ಲಾ ಮಟ್ಟದಲ್ಲಿ ಕೈಗಾರಿಕಾ ಉದ್ದೇಶಗಳಿಗೆ ಅನೇಕ ವರ್ಷಗಳಿಂದ ಜಮೀನು ಪಡೆದವರು ಅದನ್ನು ಸದ್ಬಳಿಕೆ ಮಾಡಿಕೊಂಡಿಲ್ಲ. ಈ ಬಗ್ಗೆ ನನಗೆ ಸಾಕಷ್ಟು ಲಿಖಿತ ದೂರುಗಳು ಬಂದಿವೆ. ಹೀಗಾಗಿ ಎಲ್ಲೆಲ್ಲಿ ಜಮೀನನ್ನು ಬಳಕೆ ಮಾಡಿಲ್ಲವೋ ಅದನ್ನು ತಕ್ಷಣವೇ ಆಡಿಟ್ ಮಾಡುವಂತೆ ಅಕಾರಿಗಳಿಗೆ ನಿರಾಣಿ ಸೂಚಿಸಿದರು.
ಬಳಕೆ ಮಾಡದ ಜಮೀನು ಹಿಂಪಡೆಯಲು ಸೂಚನೆ :
ಕೆಐಎಡಿಬಿಯಿಂದ ಜಮೀನು ಪಡೆದುಕೊಂಡು ಕೈಗಾರಿಕೆಗಳನ್ನು ಸ್ಥಾಪನೆ ಮಾಡದೇ ಹಾಗೆ ಉಳಿಸಿಕೊಂಡಿದ್ದಾರೆ. ಅಂತಹ ಜಮೀನನ್ನು ತಕ್ಷಣವೇ ಗುರುತಿಸಬೇಕು. ಬಳಕೆಯಾಗದ ಭೂಮಿಯನ್ನು ನಾವು ಹಿಂಪಡೆದುಕೊಳ್ಳುತ್ತೇವೆ ಎಂದು ನಿರಾಣಿ ತಿಳಿಸಿದರು.
90 ದಿನದೊಳಗೆ ಪರಿಹಾರ ನೀಡಿ :
ರೈತ ಭೂಕಂದಾಯ ದಾಖಲೆಗಳು ಕಾನೂನಾತ್ಮಕವಾಗಿದ್ದರೆ, ಕೆಐಎಡಿಬಿಯಿಂದ ಸ್ವಾಧೀನಮಾಡಿಕೊಂಡ ಜಮೀನುಗಳಿಗೆ ಮೂರು ತಿಂಗಳಲ್ಲಿ ಪರಿಹಾರ ನೀಡಬೇಕು ಎಂದು
ಎಂದು ಬೃಹತ್ ಮತ್ತು ಮಧ್ಯಮ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೆಲವು ಕಡೆ ಜಮೀನನ್ನು ಸ್ವಾಧೀನಪಡಿಸಿಕೊಂಡರೂ ರೈತರಿಗೆ ಪರಿಹಾರ ನೀಡದೆ ವಿಳಂಬ ಮಾಡಿಲಾಗಿದೆ ಎಂಬ ಆರೋಪವಿದೆ. ದಾಖಲೆಗಳು ಸರಿ ಇದ್ದರೆ, 90 ದಿನದೊಳಗೆ ಪರಿಹಾರ ನೀಡಲು ಇರುವ ಸಮಸ್ಯೆಯಾದರೂ ಏನು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಇತ್ತೀಚೆಗೆ ಸಣ್ಣ ಕೈಗಾರಿಕೆ ಇಲಾಖೆಗೂ ಭೂಮಿ ನೀಡುವಂತೆ ಮನವಿ ಬಂದಿದೆ. ಕೆಎಐಡಿಬಿಯಲ್ಲಿ ನಮಗೆ ಜಮೀನು ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿರಾಣಿ ಅವರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಈ.ವಿ.ರಮಣರೆಡ್ಡಿ, ಇಲಾಖೆಯ ಆಯುಕ್ತೆ, ಗುಂಜನ್ ಕೃಷ್ಣ, ಕೆಐಎಡಿಬಿಯ ಸಿಇಒ ಎನ್. ಶಿವಶಂಕರ, ಎಂಎಸ್‍ಎಂಇ ನಿರ್ದೇಶಕಿ ಸತ್ಯಭಾಮ, ಕೆಎಸ್‍ಎಸ್ ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಸೋಮಶೇಕರ್ ಮತ್ತಿರರು ಉಪಸ್ಥಿತರಿದ್ದರು.