ತುರುವೇಕೆರೆ
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಾದ ಶಾರದಾನರಸಿಂಹಮೂರ್ತಿ ಶನಿವಾರ ತಾಲ್ಲೂಕಿನ ಹಲವು ಇಲಾಖೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಲಾಖಾಧಿಕಾರಿಗಳ ಜೊತೆ ಕುಂದುಕೊರತೆಗಳ ಬಗ್ಗೆ ಚರ್ಚಿಸಿದ ನಂತರ ಪಟ್ಟಣದ ನೂತನ ಬಸ್ ನಿಲ್ದಾಣಕ್ಕೆ ತೆರಳಿ ವಿದ್ಯಾರ್ಥಿಗಳೊಂದಿಗೆ ನಿಲ್ದಾಣದ ಸಮಸ್ಯೆಗಳನ್ನು ಆಲಿಸಿದರು. ನಂತರ ಶೌಚಾಲಯ ಪರೀಕ್ಷಿಸಿ ಸ್ವಚ್ಛತೆ ಇಲ್ಲದ್ದನ್ನು ಮನಗಂಡು ಡಿಪೋ ವ್ಯವಸ್ಥಾಪಕ ತುಳಸೀರಾಮ್ ಅವರನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡರು. ನಿಲ್ದಾಣದಲ್ಲಿ ಕುಡಿಯಲು ಯೋಗ್ಯವಲ್ಲದ ನಲ್ಲಿ ಬಳಿ ಕುಡಿಯುವ ನೀರು ಬೋರ್ಡ್ ಹಾಕಿರುವುದನ್ನು ಕೂಡಲೆ ತೆರವುಗೊಳಿಸಿ, ನಲ್ಲಿ ಸರಿಪಡಿಸಿ ಪೋಲಾಗುತ್ತಿರುವ ನೀರನ್ನು ನಿಲ್ಲಿಸುವುದರ ಜೊತೆಗೆ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡುವಂತೆ ಆದೇಶಿಸಿದರು.
ನಂತರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳೊಂದಿಗೆ ವೈದ್ಯರ ಆರೈಕೆ ಬಗ್ಗೆ ವಿಚಾರಿಸಿದರು. ವೈದ್ಯರು ಹಾಗೂ ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿದರು. ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಜಾಸ್ತಿಯಿದ್ದು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿರುವುದಾಗಿ ಹಾಗೂ ಜಿನರಿಕ್ ಮೆಡಿಕಲ್‍ನಲ್ಲಿ ಕೆಲವೇ ಔಷಧಿ ಮಾತ್ರೆಗಳಿವೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ಡಾ|| ಶ್ರೀಧರ್ ಉಪಾಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟರು.
ತೂಬಿನ ಕಟ್ಟೆ ನರ್ಸರಿಗೆ ಭೇಟಿ ನೀಡಿ ರೈತರಿಗೆ ಯಾವ ಯಾವ ಸಸಿ ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ ಎಂಬುದರ ಅಂಕಿ ಅಂಶವನ್ನು ಅಲ್ಲಿನ ಸಸಿ ಸಂರಕ್ಷಣಾ ಅಧಿಕಾರಿ ನಿಸಾರ್ ಅಹಮದ್ ಅವರಿಂದ ಪಡೆದುಕೊಂಡರು.
ತಾಲ್ಲೂಕಿನಲ್ಲಿ ಸುಮಾರು 275 ಕ್ಕೂ ಹೆಚ್ಚು ಚೆಕ್ ಡ್ಯಾಂ ನಿರ್ಮಾಣವಾಗಿದ್ದು ಕಸಬಾ ಹೋಬಳಿ ಬಾಣಸಂದ್ರ ಪಂಚಾಯ್ತಿಯಲ್ಲಿ ನಿರ್ಮಾಣವಾಗಿರುವ ಚೆಕ್ ಡ್ಯಾಂ ಗಳು ಕೆಲವು ಕಳಪೆ ಗುಣಮಟ್ಟದಿಂದ ಕೂಡಿದ್ದರೆ ಮತ್ತೆ ಕೆಲವೆಡೆ ಅನಾವಶ್ಯಕವಾಗಿ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಖುದ್ದು ವೀಕ್ಷಿಸಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ರೇಣುಕಾ ಕೃಷ್ಣಮುರ್ತಿ, ಇಓ ಗಂಗಾಧರ್ ಸೇರಿದಂತೆ ಅನೇಕ ಇಲಾಖಾಧಿಕಾರಿಗಳು ಇದ್ದರು.
