ಇಸ್ಕಾನ್ ಭಕ್ತರೆಂದು ಬಾಂಗ್ಲಾದಲ್ಲಿ ಬೆದರಿಕೆ !

ಪಶ್ಚಿಮ ಬಂಗಾಳ:

   ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿ ಗಡಿ ದಾಟಿ ಅಕ್ರಮವಾಗಿ ಭಾರತದೊಳಗೆ ಪ್ರವೇಶಿಸಿದ ಆರೋಪದ ಮೇಲೆ ಬಾಂಗ್ಲಾದೇಶದ 17 ವರ್ಷದ ಹದಿಹರೆಯದ ಯುವತಿಯೊಬ್ಬಳನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದ್ದಾರೆ. ತನ್ನ ಕುಟುಂಬ ಸದಸ್ಯರನ್ನು ಇಸ್ಕಾನ್ ಭಕ್ತರೆಂದು ಬಾಂಗ್ಲಾದಲ್ಲಿನ ಮೂಲಭೂತವಾದಿಗಳು ಬೆದರಿಕೆ ಹಾಕಿದ ನಂತರ ಭಾರತಕ್ಕೆ ಓಡಿಬಂದಿರುವುದಾಗಿ ಯುವತಿ ಹೇಳಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

   ಹದಿಹರೆಯದ ಯುವತಿಗೆ ಜಲ್ಪೈಗುರಿ ಜಿಲ್ಲೆಯಲ್ಲಿ ಕೆಲವು ಸಂಬಂಧಿಕರಿದ್ದಾರೆ. ಅವರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಆಕೆ ಗಡಿ ದಾಟಿ ಬರಲು ಕಾರಣವೇನು, ಹಾಗೆ ಮಾಡಲು ಆಕೆಗೆ ಸಹಾಯ ಮಾಡಿದವರು ಯಾರು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಚೋಪ್ರಾ ಪೊಲೀಸ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

   ಬಾಂಗ್ಲಾದೇಶದ ಪಂಚಗಢ ಜಿಲ್ಲೆಯ ನಿವಾಸಿಯಾಗಿರುವ ಯುವತಿ, ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾ ಬ್ಲಾಕ್‌ನಲ್ಲಿರುವ ಫತೇಪುರ್ ಬಾರ್ಡರ್ ಔಟ್‌ಪೋಸ್ಟ್ ಬಳಿ ಕಾಲ್ನಡಿಯಲ್ಲಿ ಗಡಿ ದಾಟುತ್ತಿರುವುದನ್ನು ಬಿಎಸ್ ಎಫ್ ಸಿಬ್ಬಂದಿ ಗುರುತಿಸಿ, ಬಂಧಿಸಿರುವುದಾಗಿ ಅವರು ಮಾಹಿತಿ ನೀಡಿದರು.

   ಯುವತಿ ಕುಟುಂಬಸ್ಥರು ಇಸ್ಕಾನ್‌ನ ಭಕ್ತರಾಗಿದ್ದು, ಆಕೆಯನ್ನು ಅಪಹರಿಸಿ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಮೂಲಭೂತವಾದಿಗಳು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಭಾರತಕ್ಕೆ ಕಳುಹಿಸಲು ಯೋಜಿಸಿದ್ದರು. ಆಕೆ ಭಾರತಕ್ಕೆ ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಯಾವಾಗ ಬರುತ್ತಾರೆ ಎಂಬುದು ಗೊತ್ತಿರಲಿಲ್ಲ. ಆಕೆಯ ತಂದೆ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಆಕೆಯ ಸಂಬಂಧಿಕರೊಬ್ಬರು ದೂರವಾಣಿ ಮೂಲಕ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

   ನವೆಂಬರ್ 25 ರಂದು ಢಾಕಾದಲ್ಲಿ ಹಿಂದೂ ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಬಂಧಿಸಿದಾಗಿನಿಂದ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಅಲ್ಲಿನ ಹಿಂದೂ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯವಾಗುತ್ತಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ರಾದರಾಮನ್ ದಾಸ್, ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.