ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ : ಡಿ ಕೆ ಶಿ

ಬೆಂಗಳೂರು:

    ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ಸೂಚನೆ ನೀಡಿದ್ದಾರೆ.

   ರಾಮನಗರ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸರ್ಕಾರಿ ಅಧಿಕಾರಿಗಳಿದ್ದೀರಿ. ಜನರ ಸಮಸ್ಯೆಗಳನ್ನು ಪರಿಹರಿಸುವುದು ರಾಜಕಾರಣಿ ಮತ್ತು ಅಧಿಕಾರಿಗಳ ಕರ್ತವ್ಯ. ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಹೇಳಿದರು.

   ಐಟಿ ರಾಜಧಾನಿ ಬೆಂಗಳೂರಿನ ಗಡಿಗೆ ಹೊಂದಿಕೊಂಡಿರುವ ರಾಮನಗರ ಜಿಲ್ಲೆಯಲ್ಲಿ ರೇವ್ ಪಾರ್ಟಿ, ಗಾಂಜಾ ಚಟುವಟಿಕೆ, ಖಾಸಗಿ ಕ್ಲಬ್‌ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಬಾರದು. ಜಿಲ್ಲೆಯನ್ನು ಅಕ್ರಮ ಮತ್ತು ಭ್ರಷ್ಟಚಾರದಿಂದ ಮುಕ್ತಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

 

   ಎಲ್ಲ ಅಧಿಕಾರಿಗಳಿಗೂ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯ ಮಾಡಬೇಕು. ಕಚೇರಿಯ ಎಲ್ಲ ಅಧಿಕಾರಿಗಳ ಮಾಹಿತಿಯನ್ನು ಅವರ ಫೋಟೋ, ಹೆಸರು, ವಿಳಾಸಗಳೊಂದಿಗೆ ಪುಸ್ತಕ ಮಾಡಿಡಬೇಕು. ಒಂದು ತಿಂಗಳು ಅವಕಾಶ ಕೊಡುತ್ತೇನೆ. ಅಷ್ಟದಲ್ಲಿ ಎಲ್ಲ ಅಧಿಕಾರಿಗಳು ಹೆಡ್‌ ಕ್ವಾಟ್ರಸ್‌ನಲ್ಲಿ ಮನೆ ಮಾಡಿಕೊಳ್ಳಬೇಕು. ಗ್ರಾಮ ಪಂಚಾಯತಿಯಿಂದ ಹಿಡಿದು, ಉನ್ನತ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು. ಯಾರಾದರೂ ಹೆಡ್‌ ಕ್ವಾಟ್ರಸ್‌ ಬಿಟ್ಟು ಹೋದರೆ, ಜಿಲ್ಲಾಧಿಕಾರಿಗಳು ನಮಗೆ ಮಾಹಿತಿ ನೀಡಬೇಕು” ಎಂದು ತಿಳಿಸಿದರು.

   ಇದೇ ವೇಳೆ ಗೇರಹಳ್ಳಿ ಗ್ರಾಮದ ಅಂಡರ್‌ಗ್ರೌಂಡ್‌ ಡ್ರೈನ್‌ನಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಹಾಕಿರುವುದಕ್ಕೆ ತೀವ್ರವಾಗಿ ಗರಂ ಆದ ಡಿಸಿಎಂ, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸಿಇಒ ದಿಗ್ವಿಜಯ್‌ ಬೋಡ್ಕೆ ಅವರಿಗೆ ಸೂಚಿಸಿದರು.

   ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಕಗ್ಗಲಿಪುರದ ರಸ್ತೆ ಬದಿ ಕನಕಪುರ ಕಡೆಗೆ ಸುರಿಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದನ್ನು ಪರಿಶೀಲಿಸುವಂತೆ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸರಿಗೆ ಸೂಚನೆ ನೀಡಿದರು.

   “ಸಿಸಿಟಿವಿಗಳ ಅಳವಡಿಕೆಯು ಅಪರಾಧ ಪರಿಶೀಲಿಸಲು ಸಹಾಯ ಮಾಡುತ್ತದೆ” ಎಂದು ಸಲಹೆ ನೀಡಿದರು .“ವಂಚಕರು ಮತ್ತು ತೊಂದರೆ ನೀಡುವ ಆರ್‌ಟಿಐ ಕಾರ್ಯಕರ್ತರಿಗೆ ಭಯಪಡಬೇಡಿ. ಯಾರಿಗೂ ಲಂಚ ನೀಡಬೇಡಿ ಅಥವಾ ಲಂಚ ತೆಗೆದುಕೊಳ್ಳಬೇಡಿ, ನಾನು ಯಾರನ್ನೂ ವರ್ಗಾವಣೆ ಮಾಡಿಲ್ಲ. ಕೆಲಸ ಹೇಗೆ ಮಾಡಬೇಕೆಂಬುದು ನಿಮಗೆ ಗೊತ್ತು, ದಾರಿ ತಪ್ಪಬೇಡಿ,’’ ಎಂದು ಸಲಹೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ