ಬಳ್ಳಾರಿ
ಎ.ದೇವದಾಸ್ ಅವರ ಪರ ಚುನಾವಣಾ ಪ್ರಚಾರದ ಅಂಗವಾಗಿ ಗ್ರಾಮೀಣ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಬಳ್ಳಾರಿ ಜಿಲ್ಲೆಯ ಶ್ರೀಧರಗಡ್ಡೆ, ಬಾಲಾಜಿ ಕ್ಯಾಂಪ್, ಕೊರ್ಲಗುಂದಿ, ಗುಡದುರು, ಹಂದ್ಯಳು, ಹಡ್ಲಿಗಿ, ಬಸರಕೋಡು, ಕರ್ಚೇಡು, ವಣೆನೂರು, ಬಣಾಪುರ, ಮಸೀದಿಪುರ, ಕಲ್ಗುಟಿಗಿನಾಳು, ಗೋಟೂರು, ಹೊಸಮೋಕ, ಹಳೆಮೋಕ, ಎರಗುಡಿ, ಬೆಣೆಕಲ್, ಸಿಂಧುವಾಳ, ಬೊಮ್ಮನಾಳು, ಜಾಲಿಹಾಳು, ನಾಗೇನಳ್ಳಿ, ಸಿರಿವಾರ, ಕಪ್ಪಗಲ್ಲು ಮತ್ತು ಸಂಗನಕಲ್ಲು ಗ್ರಾಮಗಳಲ್ಲಿ ಜಾಥಾವನ್ನು ಮಾಡಲಾಯಿತು. ಶ್ರೀಧರಗಡ್ಡೆ ಗ್ರಾಮದಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ಕೆ.ಸೋಮಶೇಖರ್‍ರವರು ಕೆಂಪು ಧ್ವಜ ಹಾರಿಸುವ ಮೂಲಕ ಜಾಥಾಗೆ ಚಾಲನೆ ನೀಡಲಾಯಿತು.
ಎಸ್.ಯು.ಸಿ.ಐ. ಕಮ್ಯೂನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ಕೆ.ಸೋಮಶೇಖರ್‍ರವರು ಮಾತನಾಡುತ್ತಾ.., ಎಲ್.ಎಲ್.ಸಿ ನೀರಿನಿಂದ ಎರಡು ಬೆಳೆ ಬೆಳೆಯುತ್ತಿದ್ದ ರೈತರಿಗೆ ಈಗ ಒಂದು ಬೆಳೆಗೂ ನೀರು ಸಾಕಾಗುತ್ತಿಲ್ಲ. ಹೆಚ್.ಎಲ್.ಸಿ ನೀರಿನಿಂದು ಒಂದು ಬೆಳೆ ಬೆಳೆಯುತ್ತಿದ್ದ ರೈತರಿಗೆ ಈಗ ನೀರೇ ಇಲ್ಲದಂತಾಗಿದೆ. ಆದರೆ ಜಿಂದಾಲ್, ಕಿರ್ಲೋಸ್ಕರ್‍ನಂತ ಕಾರ್ಖಾನೆಗಳಿಗೆ, ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಅಂತಹ ಬಂಡವಾಳಗಾರರಿಗೆ ಕನಿಷ್ಟ ದರದಲ್ಲಿ ಭೂಮಿ, ನೀರಿನ ಸೌಲಭ್ಯ, ವಿದ್ಯುತ್ ಇನ್ನಿತರ ಸೌಕರ್ಯಗಳು ಯಾವುದೇ ಅಡಚಣೆಯಿಲ್ಲದೆ ದೊರೆಯುತ್ತದೆ.
ರೈತರು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡದೆ ಎಲ್ಲಾ ಸರ್ಕಾರಗಳು ರೈತರನ್ನು ಸಾಲಗಾರರನ್ನಾಗಿ ಮಾಡಿವೆ. ಮೋದಿ ಸರ್ಕಾರದ ಜಿ.ಎಸ್.ಟಿ.ಯಿಂದಾಗಿ ರಸಗೊಬ್ಬರ, ಬೀಜ, ಕೀಟನಾಶಕಗಳ ಬೆಲೆಗಳು ಅತ್ಯಂತ ದುಬಾರಿಯಾಗಿದ್ದು, ರೈತರು ಕೃಷಿಯನ್ನೇ ತ್ಯಜಿಸುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ನೋಟ್‍ಬ್ಯಾನ್‍ನಿಂದಾಗಿ ಕಳೆದ ಎರಡು ವರ್ಷಗಳಿಂದ ರೈತರು ತೀವ್ರ ಸಂಕಷ್ಟ ಎದುರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾಲ ಮನ್ನಾ ಕೇಳಿದರೆ ಕೆಂದ್ರದ ಹಣಕಾಸಿನ ಸಚಿವರು ‘ಸಾಲ ಮನ್ನಾ ಕೇಳುವುದು ಒಂದು ಫ್ಯಾಷನ್ ಆಗಿದೆ’ ಎಂದು ಬೇಜವಾಬ್ದಾರಿ ಉತ್ತರವನ್ನು ನೀಡುತ್ತಾರೆ.
ಕಾಂಗ್ರೇಸ್ ಜಾರಿಗೊಳಿಸಿದ ಜಾಗತೀಕರಣ, ಉದಾರೀಕರಣ ನೀತಿಗಳಿಂದಾಗಿ ಕಳೆದ 25 ವರ್ಷಗಳಿಂದ ನಮ್ಮ ದೇಶದಲ್ಲಿ ಸುಮಾರು 4 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವೇ ಜಾಗತೀಕರಣ ನೀತಿಗಳನ್ನೇ ಇಂದು ಬಿಜೆಪಿ ಮುಂದುವರಿಸುತ್ತಿದೆ. ಬಿಜೆಪಿ ಮತ್ತು ಕಾಂಗ್ರೇಸ್ ಎರಡೂ ರೈತ ವಿರೋಧಿ, ಕಾರ್ಮಿಕ ವಿರೋಧಿ ಪಕ್ಷಗಳಾಗಿವೆ. ಹಾಗಾಗಿ ಈ ಪಕ್ಷಗಳನ್ನು ತಿರಸ್ಕರಿಸಿ, ರೈತ-ಕಾರ್ಮಿಕರ ಧ್ವನಿಯನ್ನು ಸಂಸತ್ತಿನಲ್ಲಿ ಮೊಳಗಿಸಲು ಎಸ್.ಯು.ಸಿ.ಐ(ಸಿ) ಪಕ್ಷಕ್ಕೆ ಮತ ಹಾಕಬೇಕೆಂದು” ಮನವಿ ಮಾಡಿದರು.
ಈ ಜಾಥಾದಲ್ಲಿ ಅಭ್ಯರ್ಥಿಯಾದ ಕಾಮ್ರೇಡ್ ಎ.ದೇವದಾಸ್, ಎಸ್.ಯು.ಸಿ.ಐ. ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಕಾಮ್ರೇಡ್ ಈ.ಹನುಮಂತಪ್ಪ, ಪಂಪಾಪತಿ, ಬಸಣ್ಣ, ಸುರೇಶ್, ಈಶ್ವರಿ, ಜಗದೀಶ್, ಗುರಳ್ಳಿ ರಾಜ, ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
