ಗಾಂಧಿನಗರ:
ಉತ್ತರಾಖಂಡದಲ್ಲಿ ಯುಸಿಸಿ ಜಾರಿಯಾದ ಇದೀಗ ಮತ್ತೊಂದು ರಾಜ್ಯ ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿ ಮಾಡಲು ಸಿದ್ಧತೆಯನ್ನು ನಡೆಸಲಾಗಿದೆ. ಗುಜರಾತ್ ಸರ್ಕಾರ ಯುಸಿಸಿಯನ್ನು ಜಾರಿ ಮಾಡಲಿದೆ ಎಂದು ತಿಳಿದು ಬಂದಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮಂಗಳವಾರ ಏಕರೂಪ ನಾಗರಿಕ ಸಂಹಿತೆ ಕರಡು ಸಿದ್ಧಪಡಿಸಲು ಮತ್ತು ಕಾನೂನು ರೂಪಿಸಲು ಐದು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಗುಜರಾತ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವುದು ಖಚಿತವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ರಂಜನಾ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಐದು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ. ಸಮಿತಿಯು 45 ದಿನಗಳಲ್ಲಿ ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ.
ಯುಸಿಸಿ ಅಡಿಯಲ್ಲಿ ಮದುವೆ, ವಿಚ್ಚೇದನ , ಆಸ್ತಿ, ದತ್ತು ಸೇರಿದಂತೆ ಕೆಲ ನಿಯಮಗಳು ಎಲ್ಲಾ ಧರ್ಮ, ಜಾತಿ, ಸಮುದಾಯಗಳಿಗೂ ಒಂದೇ ಆಗಲಿದೆ. ಪ್ರಮುಖವಾಗಿ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಿಕೊಳ್ಳುವ ಜೊತೆಗೆ ವ್ಯಕ್ತಿಯ ಮೂಲಭೂತ ಹಕ್ಕುಗಳ ರಕ್ಷಣೆ ಮಾಡುವುದು ಏಕರೂಪ ನಾಗರೀಕ ಸಂಹಿತೆಯ ಮೂಲ ಉದ್ದೇಶವಾಗಿದೆ. ಯುಸಿಸಿ ಅಡಿಯಲ್ಲಿ ಯಾರೇ ಮದುವೆಯಾದರೂ 60 ದಿನಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮದುವೆ ಅವರವರ ಸಂಪ್ರದಾಯ, ಧರ್ಮಕ್ಕೆ ಅನುಸಾರವಾಗಿ ಮಾಡಬಹುದು. ಆದರೆ ನೋಂದಣಿ ಕಡ್ಡಾಯವಾಗಿದೆ. ಈ ಮೂಲಕ ಎಲ್ಲಾ ಮದುವೆಗಳಿಗೆ ಕಾನೂನಾತ್ಮಕ ರಕ್ಷಣೆ ಸಿಗಲಿದೆ.
