ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಪ್ರತಿಯೊಬ್ಬ ಮತದಾರನಿಗೂ ತಲುಪಿಸಿ : ಟಿ.ರಘುಮೂರ್ತಿ.

0
28

ಚಳ್ಳಕೆರೆ

        ಈ ವರ್ಷದ ಲೋಕಸಭಾ ಚುನಾವಣೆ ಪ್ರತಿಷ್ಠೆಯಿಂದ ಕೂಡಿದ್ದು, ಯಾವುದೇ ಹಂತದಲ್ಲೂ ಕಾಂಗ್ರೆಸ್ ಪಕ್ಷ ಸೋಲದಂತೆ ಕಾರ್ಯಕರ್ತರು ಜಾಗೃತೆ ವಹಿಸಬೇಕಿದೆ. ನೂರಾರು ವರ್ಷಗಳ ಇತಿಹಾಸವುಳ್ಳ ಬಡವರ ಸೇವೆ ಸಲ್ಲಿಸಿದ ಕಾಂಗ್ರೆಸ್ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸಿ ಈ ರಾಷ್ಟ್ರದ ಭವಿಷ್ಯದ ಪ್ರಧಾನ ಮಂತ್ರಿಯನ್ನಾಗಿ ರಾಹುಲ್ ಗಾಂಧಿಯವರನ್ನು ನೋಡುವ ಕಾಲ ಹತ್ತಿರವಿದ್ದು, ಕಾರ್ಯಕರ್ತರು ಈ ಕನಸನ್ನು ನನಸು ಮಾಡಬೇಕೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕಾರ್ಯಕರ್ತರಿಗೆ ಕರೆ ನೀಡಿದರು.

          ಅವರು, ಭಾನುವಾರ ಪಕ್ಷದ ಕಾರ್ಯಾಲಯದಲ್ಲಿ ಮನೆ ಮನೆಗೂ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ಹತ್ತು ವರ್ಷಗಳ ನಿರ್ಗಮನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‍ರವರ ಆಡಳಿತ ಹಾಗೂ ಕಳೆದ ಐದು ವರ್ಷಗಳ ಪ್ರಧಾನ ಮಂತ್ರಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವೈಪಲ್ಯಗಳನ್ನು ಮತದಾರರ ಮುಂದಿಟ್ಟು ಪಕ್ಷಕ್ಕೆ ಮತಯಾಚನೆ ಮಾಡಬೇಕು ಹಾಗೂ ಪ್ರತಿಯೊಬ್ಬ ಮತದಾರರಿಗೂ ಪಕ್ಷದ ಸಾಧನೆಗಳನ್ನು ವಿವರಿಸುವ ಕರಪತ್ರಗಳನ್ನು ನೀಡಿ ಮತಯಾಚನೆ ಮಾಡಬೇಕೆಂದು ಅವರು ಮನವಿ ಮಾಡಿದರು.

          2014ರಲ್ಲಿ ಆಡಳಿತಕ್ಕೆ ಬಂದ ಕೇಂದ್ರ ಎನ್‍ಡಿಎ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರಮೋದಿ 5 ವರ್ಷಗಳ ಕಾಲ ಆಡಳಿತದಲ್ಲಿ ಮಾಡಿರುವ ಸಾಧನೆ ಕಳಪೆಯಾಗಿದ್ದು, ಅವರು ನೀಡಿದ ಯಾವುದೇ ಚುನಾವಣೆ ಭರವಸೆಯನ್ನು ಈಡೇರಿಸಿಲ್ಲ. ರಾಷ್ಟ್ರದ ನಿರುದ್ಯೋಗಿ ಯುವಕರಿಗೆ ಪ್ರತಿವರ್ಷ 2 ಕೋಟಿ ಉದ್ಯೋಗವನ್ನು ನೀಡುವ ಭರವಸೆ ನೀಡಿದ ಪ್ರಧಾನ ಮಂತ್ರಿ ಇದುವರೆಗೂ 10 ಕೋಟಿ ಯುವಕರಿಗೆ ಉದ್ಯೋಗ ನೀಡಬೇಕಿತ್ತು. ಆದರೆ, ಇವರ ಆಡಳಿತದಲ್ಲಿ ಕೇವಲ ಬೆರಳಣಿಕೆಯ ಯುವಕರು ಮಾತ್ರ ಉದ್ಯೋಗ ಪಡೆದಿದ್ದು, ಶೇ.95 ಭಾಗ ವಿಫಲತೆ ಕೇಂದ್ರ ಸರ್ಕಾರದ್ಧಾಗಿದೆ.

        ವಿದೇಶದಲ್ಲಿ ಅಡಗಿರುವ ಕಪ್ಪು ಹಣವನ್ನು ಪತ್ತೆಹಚ್ಚಿ ಪ್ರತಿಯೊಬ್ಬ ಬಡ ಬ್ಯಾಂಕ್ ಖಾತೆದಾರರಿನಿಗೆ 15 ಲಕ್ಷ ಹಣ ನೀಡುವ ಕುರಿತು ಅಬ್ಬರದ ಪ್ರಚಾರ ನಡೆಸಲಾಯಿತು. ಲೋಕಸಭೆಯೊಳಗೂ ಲೋಕಸಭೆಹೊರಗು ಹಾಗೂ ವಿಶ್ವಮಟ್ಟದ ಸಭೆಗಳಲ್ಲಿ ಬಡ ಜನರ ಬ್ಯಾಂಕ್ ಖಾತೆಗೆ ಹಣ ನೀಡುವ ಯೋಜನೆ ಬಗ್ಗೆ ಮಾಹಿತಿ ನೀಡಿ ಚಪ್ಪಾಳೆ ಗಿಟ್ಟಿಸಿದ ಪ್ರಧಾನ ಮಂತ್ರಿಗಳು ಇದುವರೆಗೂ ಯಾವುದೇ ಬಡ ಬ್ಯಾಂಕ್ ಖಾತೆದಾರರಿಗೆ ಹಣ ನೀಡಿಲ್ಲ.

          ಕೇಂದ್ರ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಹಿನ್ನೆಡೆ ಅನುಭವಿಸಿದೆ. ಹಾಗಾಗಿ ಕಳೆದ ಐದು ವರ್ಷಗಳಿಂದ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ರಾಷ್ಟ್ರದ ಪ್ರಗತಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಜನತೆಗೆ ಮನವಿ ಮಾಡುವಂತೆ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.

           ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೆಪಿಸಿಸಿ ವೀಕ್ಷಕ ಬಳ್ಳಾರಿಯ ರಾಮದಾಸ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಬಗ್ಗೆ ಯಾವುದೇ ರೀತಿಯ ಸುಳ್ಳು ಆರೋಪವನ್ನು ಮಾಡಿದರೆ ಸಹಿಸಲಾಗದು. ಕೇವಲ ಕೆಲವೇ ಕೆಲವು ವರ್ಷಗಳ ಹಿಂದೆ ಅಧಿಕಾರ ನಡೆಸಿದ ಭಾರತೀಯ ಜನತಾ ಪಕ್ಷ ನೂರಾರು ವರ್ಷಗಳ ಕಾಂಗ್ರೆಸ್ ಸಾಧನೆಯ ಬಗ್ಗೆ ಲಘುವಾಗಿ ಮಾತನಾಡುತ್ತಿದೆ.

          ಈ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಬಡವರ, ಶೋಷಿತರ ಏಳಿಗೆಗಾಗಿ ನೂರಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿ ರುವುದು ಕಾಂಗ್ರೆಸ್ ಪಕ್ಷ ಮಾತ್ರ. ದಿವಂಗತೆ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮ ಈ ದೇಶದ ಬಡವರ್ಗದ ಶೋಷಿತ ವರ್ಗದ ಬದುಕಿನಲ್ಲಿ ಹೊಸ ಅಧ್ಯಾಯವನ್ನೇ ನಿರ್ಮಿಸಿದೆ. ಅದ್ದರಿಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿಯ ಡೊಂಗಿ ಪ್ರಚಾರಕ್ಕೆ ಮತದಾನದ ಮೂಲಕ ಉತ್ತರ ನೀಡುವಂತೆ ಮನವಿ ಮಾಡಿದರು.

          ಸಭೆಯಲ್ಲಿ ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿರಣ್‍ಶಂಕರ್, ಸಿ.ವೀರಭದ್ರಬಾಬು, ಟಿ.ಪ್ರಭುದೇವ್, ಎಚ್.ಎಸ್.ಸೈಯದ್, ಉಪಾಧ್ಯಕ್ಷ ವೆಂಕಟೇಶ್‍ಶೆಟ್ಟಿ, ನಗರಸಭಾ ಸದಸ್ಯರಾದ ಆರ್.ರುದ್ರನಾಯಕ, ಕವಿತಾಬೋರಯ್ಯ, ವೈ.ಪ್ರಕಾಶ್, ಟಿ.ಮಲ್ಲಿಕಾರ್ಜುನ, ವಿರೂಪಾಕ್ಷ, ಮಾಜಿ ಸದಸ್ಯರಾದ ಟಿ.ಜೆ.ವೆಂಕಟೇಶ್, ಚೇತನ್‍ಕುಮಾರ್, ರೆಡ್ಡಿಹಳ್ಳಿ ಶಿವಣ್ಣ, ನಾಗರಾಜ, ನಗರಂಗೆರೆ ಓಬಣ್ಣ, ಸಿ.ಟಿ.ಶ್ರೀನಿವಾಸ್, ಡಿ.ಕೆ.ಕಾಟಯ್ಯ, ಆರ್.ಪ್ರಸನ್ನಕುಮಾರ್, ಅನ್ವರ್ ಮಾಸ್ಟರ್, ಮಹಮ್ಮದ್ ಸೈಪುಲ್ಲಾ, ರಾಮಾಂಜನೇಯ, ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

LEAVE A REPLY

Please enter your comment!
Please enter your name here