ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ನಾನು ಎಂದಿಗೂ ಮಾಡಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು:

    ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಇದನ್ನು ಸಹಿಸಲಾಗದೆ ಬಿಜೆಪಿಯವರು ನಮ್ಮ ಸರ್ಕಾರದ ಮೇಲೆ ಸುಳ್ಳು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪ ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಬೇರೆಯವರಿಗೆ ಹೆದರಿಸಿದಂತೆ ನನಗೆ ಹೆದರಿಸಲು ಸಾಧ್ಯವಿಲ್ಲ.

    ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ನಾನು ಎಂದಿಗೂ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ತರುವ, ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲು ಮಾಡುತ್ತೇನೆ.? ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುಡುಗಿದ್ದಾರೆ.

    ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆ ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರ ಮಾತಿನ ಮುಖ್ಯಾಂಶಗಳು ಹೀಗಿವೆ:

     ಚುನಾವಣೆ ಫಲಿತಾಂಶವನ್ನು ಅರಗಿಸಿಕೊಳ್ಳಲು ವಿರೋಧ ಪಕ್ಷದವರಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಆಗುತ್ತಿಲ್ಲ. ಆದರೂ ಸರ್ಕಾರದ ವಿರುದ್ಧ ಅನಗತ್ಯ ಟೀಕೆ ಮಾಡುತ್ತಲೇ ಇದ್ದಾರೆ. ಮೊದಲು ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ಮಾಡಿದರು. ನಾವು ಐದು ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಯೋಜನೆ ಜಾರಿ ಮಾಡಿ ಕೆಲಸದ ಮೂಲಕ ಅವರ ಟೀಕೆಗೆ ಉತ್ತರ ನೀಡಿದ್ದೇವೆ.

     ಅದಕ್ಕೆ ಈಗ ಅವರು ಚೆಲುವರಾಯಸ್ವಾಮಿ ಹಾಗೂ ನನ್ನ ವಿರುದ್ಧ ಕಮಿಷನ್ ವಿಚಾರವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರ ಅವಧಿಯಲ್ಲಿ ಒಂದು ಕ್ಷೇತ್ರದಲ್ಲಿ, ಕೆಲಸ ಮಾಡದೇ 117 ಕೋಟಿ ಬಿಲ್ ಪಾವತಿ ಮಾಡಲಾಗಿದೆ ಎಂದು ಲೋಕಾಯುಕ್ತ ಸಂಸ್ಥೆ ವರದಿ ಮಾಡಿದೆ. ಈ ಬಗ್ಗೆ ಕಾನೂನು ಮೂಲಕ ತನಿಖೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿಗಳು ಸದನದಲ್ಲಿ ಭರವಸೆ ನೀಡಿದ್ದರು. ಅದರಂತೆ ನಾವು ತನಿಖಾ ಸಮಿತಿ ಮಾಡಿ ತನಿಖೆಗೆ ಆದೇಶ ನೀಡಿದ್ದೇವೆ.

     ಬಿಬಿಎಂಪಿ ವ್ಯಾಪ್ತಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ನಮಗೆ ನೈಜ್ಯತೆ ನೋಡಿ ಬಿಲ್ ಪಾವತಿ ಮಾಡಿ ಎಂದು ಹೇಳಿದ್ದಾರೆ. ಅದಕ್ಕೆ ನಾವು ತನಿಖೆ ಆರಂಭಿಸಿದ್ದೇವೆ. ಈ ತನಿಖೆ ಆರಂಭಿಸಿದ ತಕ್ಷಣ ನಮ್ಮ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಪಕ್ಷಕ್ಕಾಗಲಿ, ಸರ್ಕಾರಕ್ಕಾಗಲಿ, ಮುಜುಗರ ಮಾಡುವ, ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ನಾನು ಹಾಗೆ ಮಾಡಿದ್ದರೆ, ಸೋನಿಯಾ ಗಾಂಧಿ ಅವರು ಜೈಲಿಗೆ ಬಂದು ನನಗೆ ಧೈರ್ಯ ತುಂಬುತ್ತಿದ್ದರಾ? ಆಗ ನಾನು ಕೇವಲ ಶಾಸಕ ಹಾಗೂ ಕಾರ್ಯಕರ್ತ ಮಾತ್ರ. ಆ ತಾಯಿ ನನಗೆ ಶಕ್ತಿ ತುಂಬಿದ್ದಾರೆ.

     ಬಿಜೆಪಿ ಅಕ್ರಮದ ಬಗ್ಗೆ ಮಾಧ್ಯಮಗೋಷ್ಠಿ ನಡೆಸುವಂತೆ ಮುಖ್ಯಮಂತ್ರಿಗಳು ಹೇಳಿದರು. ಮುಂದಿನ ದಿನಗಳಲ್ಲಿ ಅದನ್ನು ಮಾಡುತ್ತೇನೆ. ಬಿಜೆಪಿ ನಾಯಕರು ಮಾಡಿರುವ ಕಳ್ಳತನ, ರಾಜ್ಯದ ಹಣ ಲೂಟಿಯನ್ನು ಬಯಲು ಮಾಡುವುದು ನಮ್ಮ ಮೊದಲ ಕರ್ತವ್ಯ. ಅವರು ಹೆಣದ ಮೇಲೆ ಹಣ ಮಾಡಿದರು, ಕೋವಿಡ್ ಸಮಯದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದರು. ಎಲ್ಲವನ್ನು ಪತ್ತೆಹಚ್ಚಬೇಕು.

     ಚೆಲುವರಾಯಸ್ವಾಮಿ ಮೇಲೆ ರಾಜ್ಯಪಾಲರಿಗೆ ನಕಲಿ ಪತ್ರ ಬರೆದಿದ್ದಾರೆ. ಈ ಬಗ್ಗೆ ಕೇವಲ ಸಿ.ಟಿ ರವಿ, ಗೋಪಾಲಯ್ಯ, ಅಶ್ವತ್ಥ್ ನಾರಾಯಣ, ಅಶೋಕ್ ಸೇರಿದಂತೆ ಒಂದು ಗುಂಪು ಮಾತ್ರ ಟೀಕೆ ಮಾಡುತ್ತಾರೆ. ಬಿಜೆಪಿ ನಾಯಕರು ನಮಗೆ ಅಧಿಕಾರ ಸಿಕ್ಕರೂ ಗ್ಯಾರಂಟಿ ಯೋಜನೆಗಂಳಂತಹ ಯೋಜನೆ ನೀಡಲಿಲ್ಲವಲ್ಲ ಎಂದು ಅಸೂಯೆಯಿಂದ ಕೈ ಹೊಸಕಿಕೊಳ್ಳುತ್ತಿದ್ದಾರೆ. ಜನ ನಮ್ಮ ಯೋಜನೆಯಿಂದ ಸಂತೋಷ ಪಡುತ್ತಿದ್ದಾರೆ. ನಮ್ಮ ಯೋಜನೆಗಳು ಜನರ ಮನಸ್ಸು ಗೆದ್ದಿವೆ. ಶಕ್ತಿ ಯೋಜನೆಯಿಂದ ಧರ್ಮಸ್ಥಳಕ್ಕೆ ಹೆಚ್ಚಿನ ಮಹಿಳೆಯರು ತೆರಳಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ ಎಂದು ವೀರೇಂದ್ರ ಹೆಗಡೆ ಅವರು ಕೂಡ ಸರ್ಕಾರಕ್ಕೆ ಅಭಿನಂದಿಸಿ ಪತ್ರ ಬರೆದಿದ್ದಾರೆ.

     ನಮ್ಮ ಮುಂದಿನ ಗುರಿ ಕೇವಲ 2024 ಮಾತ್ರವಲ್ಲ 2028 ಕೂಡ ನಮ್ಮ ಗುರಿಯಾಗಿದೆ. ಇದಕ್ಕೆ ನಿಮ್ಮ ಸಹಕಾರ ಮುಖ್ಯ. ನೀವೆಲ್ಲರೂ ತಾಳ್ಮೆಯಿಂದ ಇರಿ. ಮುಂದಿನ ದಿನಗಳಲ್ಲಿ ಕೆಪಿಸಿಸಿಯಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಕೆಲವು ಮಂತ್ರಿಗಳನ್ನು ಬದಲಾಯಿಸಬೇಕಾಗುತ್ತದೆ. ಪಕ್ಷಕ್ಕೆ ಕೊಡುಗೆ ನೀಡದವರನ್ನು ಬದಲಾವಣೆ ಮಾಡಲೇಬೇಕಾಗುತ್ತದೆ. ಬ್ಲಾಕ್ ನಿಂದ ಜಿಲ್ಲಾ ಹಾಗೂ ಕೆಪಿಸಿಸಿ ಮಟ್ಟದವರೆಗೂ ಬದಲಾವಣೆ ಮಾಡಲಾಗುವುದು.

ಗ್ಯಾರಂಟಿ ಯೋಜನೆ ಜಾರಿಯಿಂದ ಸಿಕ್ಕಿರುವ ಶಕ್ತಿ ಬಳಸಿಕೊಳ್ಳಿ:

     ನಾವು ಚುನಾವಣೆ ಸಮಯದಲ್ಲಿ ಅನೇಕ ಹೋರಾಟ ಮಾಡಿದೆವು. ಪ್ರಜಾಧ್ವನಿ ಯಾತ್ರೆ ಆರಂಭಿಸಿ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು. ಈ ಯೋಜನೆಗಳು ನಿಮಗೆ ಅತ್ಯಂತ ದೊಡ್ಡ ಶಕ್ತಿ ನೀಡಿದೆ. ನಿಮಗೆ ಸಿಕ್ಕಿರುವ ಈ ಶಕ್ತಿ ಬಗ್ಗೆ ಅರಿವಿದೆಯೋ ಇಲ್ಲವೋ, ಆದರೆ ವಿರೋಧ ಪಕ್ಷದವರಿಗೆ ಅರಿವಾಗಿದೆ. ಬೇರೆ ರಾಜ್ಯದ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ ಹಾಗೂ ಸ್ಟಾಲಿನ್ ಅವರು ಕೂಡ ನಮ್ಮ ಯೋಜನೆಗಳನ್ನು ಶ್ಲಾಘಿಸಿದ್ದಾರೆ. ಈ ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ಮೀಸಲಿಡಲಾಗಿದೆ. ದೇಶದಲ್ಲಿ ಯಾವುದೇ ಪಕ್ಷಗಳು ಯಾವುದೇ ರಾಜ್ಯದಲ್ಲಿ ಇಂತಹ ಯೋಜನೆ ಜಾರಿ ಮಾಡಲು ಸಾಧ್ಯವಾಗಿಲ್ಲ.

    ಗೃಹಲಕ್ಷ್ಮಿ ಯೋಜನೆ ಜಾರಿ ವಿಚಾರದಲ್ಲಿ ಪ್ರಜಾಪ್ರತಿನಿಧಿಗೆ ಅವಕಾಶ ಮಾಡಿಕೊಟ್ಟಿದ್ದೆವು. ಕೇವಲ 20% ಮಂದಿ ಮಾತ್ರ ಇದನ್ನು ಬಳಸಿಕೊಂಡಿದ್ದಾರೆ. 80%ರಷ್ಟು ಮಂದಿ ಈ ಅವಕಾಶ ಕೈಚೆಲ್ಲಿದ್ದೀರಿ. ನೀವು ನಿಮ್ಮ ಬ್ಲಾಕ್ ಮಟ್ಟದಲ್ಲಿ ಜನರಿಗೆ ಯೋಜನೆ ತಲುಪಿದೆಯಾ ಇಲ್ಲವೇ ಎಂದು ಪರಿಶೀಲಿಸಿ ಜನರ ಸಂಪರ್ಕ ಹೊಂದಬೇಕಿದೆ. ನೀವು ಅಧಿಕಾರ ಕೇಳುವ ಮುನ್ನ ಈ ಜವಾಬ್ದಾರಿ ನಿಭಾಯಿಸಬೇಕು.

    ಈ ತಿಂಗಳಾತ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿ ಕಾರ್ಯಕ್ರಮ ಮಾಡಲಿದ್ದು, ಪ್ರತಿಜ್ಞಾ ದಿನ ಕಾರ್ಯಕ್ರಮ ಮಾದರಿಯಲ್ಲಿ ಪಂಚಾಯ್ತಿ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಬೇಕಿದೆ. ಸರ್ಕಾರ ಈ ಕಾರ್ಯಕ್ರಮ ಮಾಡಲಿದ್ದು, ಶಾಸಕರು ಅಧ್ಯಕ್ಷತೆ ವಹಿಸಲಿದ್ದಾರೆ. ನೀವು ಈ ಕಾರ್ಯಕ್ರಮದಲ್ಲಿ ಜನರಿಗೆ ಅರಿವು ಮೂಡಿಸಿ ಸಂಘಟನೆ ಮಾಡಬೇಕು.

ಪಂಚಾಯ್ತಿ ಮತ್ತು ಪಾಲಿಕೆ ಚುನಾವಣೆಗೆ ತಯಾರಾಗಿ

    ನಮ್ಮ ಮುಂದಿನ ಸವಾಲು ಜಿಲ್ಲಾ, ತಾಲೂಕು ಪಂಚಾಯ್ತಿ ಹಾಗೂ ಪಾಲಿಕೆ ಚುನಾವಣೆ. ಪಾಲಿಕೆ ಚುನಾವಣೆ ವಿಚಾರದಲ್ಲಿ ನಿನ್ನೆ ನ್ಯಾಯಾಲಯದ ಅವಧಿ ಮುಗಿದಿದೆ. ಈ ವಿಚಾರವಾಗಿ ನಾವು ಸಹಿ ಮಾಡಿದ್ದೇವೆ. ಬಿಜೆಪಿ ಸರ್ಕಾರ 243 ವಾರ್ಡ್ ಗಳನ್ನು ಮಾಡಿದ್ದು, ಕಾನೂನು ರೀತಿಯ ವ್ಯತ್ಯಾಸಗಳಿದ್ದವು. ನಾವು ಅದನ್ನು ಸರಿ ಮಾಡಲಿದ್ದೇವೆ. ಇದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಿದ್ದೇವೆ. 225 ವಾರ್ಡ್ ರಚನೆಗೆ ತೀರ್ಮಾನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು. ನಂತರ ಅದನ್ನು ನ್ಯಾಯಾಲಯಕ್ಕೆ ನೀಡುತ್ತೇವೆ. ನಾವು ಯಾವುದೇ ಕ್ಷಣದಲ್ಲಿ ಚುನಾವಣೆ ಬಂದರೂ ಎದುರಿಸಲು ಸಿದ್ಧರಿರಬೇಕು.

   ಇನ್ನು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ವಿಚಾರವಾಗಿ ನಾವು ಪ್ರಿಯಾಂಕ ಖರ್ಗೆ ಅವರಿಗೆ ಹೇಳಿದ್ದು, ಅವರು ಕೂಡ ಸಮಿತಿ ರಚನೆ ಮಾಡಿದ್ದಾರೆ. ಈ ಎರಡೂ ಚುನಾವಣೆಗಳಿಗೆ ನ್ಯಾಯಾಲ ಅನುಮತಿ ನೀಡಿದರೆ ನಾವು ಚುನಾವಣೆ ಮಾಡಲು ಸಿದ್ಧ. ಇದರಿಂದ ಹಿಂದೆಸರಿಯುವ ಪ್ರಶ್ನೆ ಇಲ್ಲ. ರಾಜೀವ್ ಗಾಂಧಿ ಅವರು 74ನೇ ತಿದ್ದುಪಡಿ ಮೂಲಕ ನೀಡಿರುವ ಮಾರ್ಗದರ್ಶನದಂತೆ ನಾವು ನಡೆಯುತ್ತೇವೆ. ಕೆಲವರು ಸಂಸತ್ ಚುನಾವಣೆ ನಂತರ ಈ ಚುನಾವಣೆ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ. ಆದರೆ ನಾವು ಮಾತ್ರ ನ್ಯಾಯಾಲಯದ ಅನುಮತಿ ಸಿಕ್ಕರೆ ಚುನಾವಣೆ ಮಾಡುತ್ತೇವೆ. ನೀವು ನಿಮ್ಮ ವಾರ್ಡ್ ಹಾಗೂ ಬ್ಲಾಕ್ ಗಳಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು.

ಎಲ್ಲರಿಗೂ ಅಧಿಕಾರ ನೀಡಲು ಪಕ್ಷ ಬದ್ಧ:

     ಪಕ್ಷ ಅಧಿಕಾರಕ್ಕೆ ಬಂದಿದೆ ನಮಗೆ ಏನು ಸಿಕ್ಕಿದೆ ಎಂಬ ಅನೇಕ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಕೂತಿದೆ ಎಂಬುದು ನಮಗೆ ಗೊತ್ತಿದೆ. ಚುನಾವಣೆ ಸಮಯದಲ್ಲಿ ಸಾವಿರಾರು ಮಂದಿ ಅರ್ಜಿ ಹಾಕಿದ್ದಿರಿ. ಎಲ್ಲರಿಗೂ ನಾವು ಅವಕಾಶ ನೀಡಲು ಆಗಿಲ್ಲ. ನಮ್ಮ ಆಯ್ಕೆಗೆ ಫಲಿತಾಂಶವೇ ಸಾಕ್ಷಿ. ನಮ್ಮ ಎಲ್ಲಾ ಆಯ್ಕೆ ಸರಿ ಎಂದು ಹೇಳುವುದಿಲ್ಲ. ಸುಮಾರು 15 ಕ್ಷೇತ್ರಗಳಲ್ಲಿ ಬಂಡಾಯದಿಂದ ಪಕ್ಷ ಸೋತಿದೆ.

    ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ, ಎಲ್ಲಾ ಕಡೆ ಗೆಲ್ಲುತ್ತೇವೆ ಎಂಬ ಆಲೋಚನೆ ನಿಮ್ಮ ತಲೆಯಿಂದ ತೆಗೆಯಬೇಕು. ಚುನಾವಣೆ ಮುನ್ನ ನಾವು ಹೇಗೆ ಬೂತ್ ಮಟ್ಟದಲ್ಲಿ ಬಿಜೆಪಿ ಹಾಗೂ ದಳವನ್ನು ಸೋಲಿಸಲು ಶ್ರಮಿಸಿದೆವೋ ಅದೇ ರೀತಿ ಸರ್ಕಾರದ ನೆರವು ಪಡೆದು ಪಕ್ಷ ಸಂಘಟನೆ ಮಾಡಬೇಕು. ಪ್ರತಿ ಬೂತ್ ನಲ್ಲಿ ಬೇರೆ ಪಕ್ಷದವರನ್ನು ಕಾಂಗ್ರೆಸ್ ನತ್ತ ಸೆಳೆದು ಮತಪ್ರಮಾಣವನ್ನು ಹೆಚ್ಚಳ ಮಾಡಿಕೊಳ್ಳಬೇಕು. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಚುನಾವಣೆ ಕುರಿತು ನಮಗೆ ಮಾರ್ಗದರ್ಶನ ನೀಡಿದ್ದಾರೆ. ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ.

    ಪ್ರತಿ ಪಂಚಾಯ್ತಿ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ಪಟ್ಟಿ ಮಾಡಿ ಎಲ್ಲಾ ವರ್ಗಕ್ಕೆ ಸಾಮಾಜಿಕವಾಗಿ ಪ್ರತಿ ಕ್ಷೇತ್ರದಲ್ಲಿ 50-100 ಸದಸ್ಯರ ನೇಮಕಾತಿ ಮಾಡಬೇಕು. ರಾಜ್ಯ ಮಟ್ಟದ ಪದಾಧಿಕಾರಿಗಳ ಹೆಸರು ಸೂಚಿಸುವಂತೆ ಕೇಳಿದ್ದೇವೆ. ಸಹಕಾರ ಸಚಿವಾಲಯದಲ್ಲಿ, ಇಂಧನ ಇಲಾಖೆಯಲ್ಲಿ ನಮ್ಮ ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡಲು ಸಚಿವರ ಜತೆ ಸೂಚನೆ ನೀಡಿದ್ದೇವೆ. ನಿಮ್ಮೆಲ್ಲರಿಗೂ ಅಧಿಕಾರ ನೀಡಬೇಕು ಎಂಬುದು ನಮ್ಮ ಉದ್ದೇಶ.

    ನಮ್ಮ ಬಳಿ ಸಾವಿರಾರು ನಾಯಕರು ಅನೇಕ ಹುದ್ದೆಗಳಿಗೆ ಅರ್ಜಿ ಹಾಕಿದ್ದಾರೆ. ಇದಕ್ಕಾಗಿ ಹೈಕಮಾಂಡ್ ನಾಯಕರು ನಮಗೆ ನಿರ್ದೇಶನ ನೀಡಿದ್ದು, ಈ ಅರ್ಜಿ ಹಾಕಿರುವವರು ತಮ್ಮ ಬೂತ್ ಮಟ್ಟದಲ್ಲಿ ಹೇಗೆ ಪಕ್ಷ ಸಂಘಟನೆ ಮಾಡಿದ್ದಾರೆ ಎಂಬ ಮಾಹಿತಿ ಕಲೆಹಾಕುವಂತೆ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ಬ್ಲಾಕ್ ನಲ್ಲಿ ಪಕ್ಷದ ಕಚೇರಿ ಇರಲೇಬೇಕು. ಈ ವಿಚಾರದಲ್ಲಿ ರಾಜಿ ಇಲ್ಲ. ನೀವು ಕಂದಾಯ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ.

   ನೀವು ಜಮೀನು ಖರೀದಿ ಮಾಡುತ್ತೀರೋ ಏನು ಮಾಡುತ್ತೀರೋ ಗೊತ್ತಿಲ್ಲ. ಕಾಂಗ್ರೆಸ್ ದೇವಾಲಯವಾದ ಪಕ್ಷದ ಕಚೇರಿ ನಿರ್ಮಾಣ ಮಾಡಲೇಬೇಕು. ಮುಖ್ಯಮಂತ್ರಿಗಳು, ಸಚಿವರುಗಳು ಯಾವುದೇ ಜಿಲ್ಲೆ ಪ್ರವಾಸ ಮಾಡಿದರೂ ಅಲ್ಲಿ ಜಿಲ್ಲಾಧ್ಯಾಕ್ಷರೂ ಕೂಡ ಇರಬೇಕು. ನೀವು ಬಲಿಷ್ಠವಾಗಿದ್ದರೆ ಮಾತ್ರ ನಾವು ಬಲಿಷ್ಠವಾಗಿರುತ್ತೇವೆ.

    ನಿಮಗೆ ನಾವು ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿಗಳು ಹಾಗೂ ನಾನು ಪ್ರತಿ ಜಿಲ್ಲೆಯ ಶಾಸಕರನ್ನು ಕರೆದು ಮಾತನಾಡುತ್ತಿದ್ದೇವೆ. ನಿಮಗೂ ಪ್ರತ್ಯೇಕವಾಗಿ ಸಮಯ ನಿಗದಿ ಮಾಡುತ್ತೇವೆ. ನೀವೆಲ್ಲರೂ ನಮ್ಮ ಜತೆ ಕೈಜೋಡಿಸಬೇಕು ಎಂದು ಮನವಿ ಮಾಡುತ್ತೇನೆ.

ಒಗ್ಗಟ್ಟಿನ ಪ್ರದರ್ಶನದಿಂದ ಪಕ್ಷ ಅಧಿಕಾರಕ್ಕೆ

     ಚುನಾವಣೆಯಾದ ಎರಡೂವರೆ ತಿಂಗಳ ನಂತರ ಪಕ್ಷದ ಸಭೆ ಕರೆದಿದ್ದೇವೆ. 2023ರ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೆ ಕೊಡುಗೆ ನೀಡಿದ ನೀವೆಲ್ಲಾ ನಾಯಕರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ನಿಮ್ಮೆಲ್ಲರ ಒಗ್ಗಟ್ಟಿನ ಪ್ರದರ್ಶನದಿಂದ ರಾಜ್ಯದಲ್ಲಿ 1989ರ ನಂತರ ಪಕ್ಷ ಬಹುದೊಡ್ಡ ಗೆಲವು ಸಾಧಿಸಲಾಗಿದೆ. ಆಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲು ಮುಚ್ಚಲಾಗಿದೆ.

   ನಾವು ಜನರ ವಿಶ್ವಾಸ ಉಳಿಸಿಕೊಳ್ಳಲು ನಾನು ಹಾಗೂ ಸಿದ್ದರಾಮಯ್ಯನವರು ನಮ್ಮ ಹೈಕಮಾಂಡ್ ನಾಯಕರ ಮಾರ್ಗದರ್ಶನದ ಮೇರೆಗೆ ನಮ್ಮ ಕೆಲಸ ಮುಂದುವರಿಸಿದ್ದೇವೆ. ಸಂಘಟಿತ ಪ್ರದರ್ಶನದಿಂದ ಕಾಂಗ್ರೆಸ್ ಈ ಯಶಸ್ಸು ಸಾಧಿಸಿದೆ. 224 ಕ್ಷೇತ್ರಗಳ ಪೈಕಿ 218 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿತ್ತು. ಇಡೀ ದೇಶಕ್ಕೆ ಸಂದೇಶ ರವಾನಿಸಿದ್ದೇವೆ. ಎಲ್ಲಾ ರಾಜ್ಯ ನಾಯಕರನ್ನು ಕರೆಸಿ ಸಭೆ ಮಾಡವಾಗ ಕರ್ನಾಟಕ ಮಾದರಿ ಅನುಸರಿಸುವಂತೆ ಸೂಚಿಸಿದ್ದಾರೆ.

   ವೈಯಕ್ತಿಕ ವಿಚಾರ ಬದಿಗೊತ್ತಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದು ನಮ್ಮ ಗುರಿ. ದೇಶದ ಎಲ್ಲಾ ವಿರೋಧ ಪಕ್ಷಗಳು ಇಂದು ಕಾಂಗ್ರೆಸ್ ಜೊತೆ ಕ ಜೋಡಿಸಲು ತೀರ್ಮಾನಿಸಿ ಕರ್ನಾಟಕದಲ್ಲೇ ಇಂಡಿಯಾ ಮೈತ್ರಿ ಕೂಟ ರಚನೆ ಮಾಡಿದ್ದಾರೆ. ನಮಗೆ ಸಿಕ್ಕಿರುವ ಶಕ್ತಿಯನ್ನು ನಾವು ಉಳಿಸಿಕೊಂಡು ಹೋಗಬೇಕಿದೆ.

   ನಾವು ಮೇಕೆದಾಟು, ಪ್ರಜಾಧ್ವನಿ, ಜನಧ್ವನಿ, ಭಾರತ ಜೋಡೋ, ಸ್ವಾತಂತ್ರ್ಯ ನಡಿಗೆ ಮಾಡಿದೆವು. ಭಾರತ ಜೋಡೋ ಯಾತ್ರೆ ನಂತರ ರಾಹುಲ್ ಗಾಂಧಿ ಅವರ ಖ್ಯಾತಿ ಹೆಚ್ಚಾಗಿದ್ದು, ಇದನ್ನು ಸಹಿಸಲಾಗದೇ ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಕರ್ನಾಟಕದಲ್ಲಿ ರಾಹುಲ್ ಗಾಂಧಿ ಅವರ ಭಾಷಣ ವಿಚಾರವಾಗಿ ಬಿಜೆಪಿಯವರು ಸೂರತ್ ನಲ್ಲಿ ಪ್ರಕರಣ ದಾಖಲಿಸಿದರು. 7 ಲಕ್ಷ ಮಂತಗಳ ಅಂತರದಲ್ಲಿ ಗೆದ್ದ ಸಂಸದನನ್ನು ಷಡ್ಯಂತ್ರದ ಮೂಲಕ ಸಂಸತ್ತಿನಿಂದ ಅನರ್ಹ ಮಾಡಿದ್ದರು. ಈಗ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಕೊಟ್ಟ ಪರಿಣಾಮ ಅವರು ಸಂಸತ್ ಸದಸ್ಯರಾಗಿ ಮುಂದುವರಿಯುತ್ತಿದ್ದಾರೆ.

    ಈ ಮಧ್ಯೆ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿದಿರಿ. ಇದಕ್ಕಾಗಿ ನಿಮ್ಮ ಶ್ರಮ ನಮಗೆ ನಿಮಗೆ ಗೊತ್ತು. ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದೀರಿ. ಬಿಜೆಪಿ ನಾಯಕರು ರಾಹುಲ್ ಗಾಂಧಿ ಅವರ ಬಗ್ಗೆ ಟೀಕೆ ಮಾಡುತ್ತಿದ್ದರು. ರಾಹುಲ್ ಗಾಂಧಿ ಅವರು ಹೆಜ್ಜೆ ಹಾಕಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ತುರುವೇಕೆರೆ ಕ್ಷೇತ್ರ ಬಿಟ್ಟು ಎಲ್ಲಾ ಕಡೆಗಳಲ್ಲಿ ಪಕ್ಷ ಗೆದ್ದಿದ್ದೇವೆ. ಇದಕ್ಕೆ ನಿಮ್ಮ ಶ್ರಮ ಕಾರಣ. ನೀವು ಎಷ್ಟು ಹಣ ಖರ್ಚು ಮಾಡಿದ್ದೀರಿ ಎಂಬುದು ಗೊತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap